ಬಸವನಬಾಗೇವಾಡಿ: ಸೇವೆಯೇ ಬಾಳು ಎಂಬ ಧ್ಯೇಯ ವಾಕ್ಯದೊಂದಿಗೆ ಭಾರತ ಸೇವಾದಳ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು ಭಾರತ ಸೇವಾದಳದಲ್ಲಿ ಭಾಗವಹಿಸಿದರೆ ಜೀವನದಲ್ಲಿ ಶಿಸ್ತು, ರಾಷ್ಟ್ರಪ್ರೇಮ ಮೈಗೂಡುತ್ತದೆ ಎಂದು ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಡೋಣೂರ ಹೇಳಿದರು.
ತಾಲೂಕಿನ ಯರನಾಳ ಗ್ರಾಮದ ಹೆಣ್ಣುಮಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ, ತಾಲೂಕು ಸಮಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಹೆಣ್ಣುಮಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭಾರತ ಸೇವಾದಳ ಘಟಕ ಉದ್ಘಾಟನೆ ಹಾಗೂ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ರಾಷ್ಟ್ರಪ್ರೇಮ, ಜನಸೇವೆ ಗುಣವನ್ನು ಅಳವಡಿಸಿಕೊಳ್ಳಬೇಕು. ಸಂಘಟನಾತ್ಮಕ ಬದಲಾವಣೆಗಳು ದೇಶವನ್ನು ಮುನ್ನಡೆಸುತ್ತಿವೆ. ಶಿಸ್ತು ಮತ್ತು ಶಾಂತಿ ಸೇವಾದಳದ ಮೂಲ ಆಧಾರ ಸ್ತಂಭಗಳಾಗಿವೆ ಎಂದರು.
ಭಾರತ ಸೇವಾದಳವು ಜಾತ್ಯಾತೀತ, ಪಕ್ಷಾತೀತವಾದ ಸಂಸ್ಥೆಯಾಗಿದೆ. ಇದರ ಸಂಸ್ಥಾಪಕ ಡಾ.ನಾರಾಯಣ ಸುಬ್ಬರಾವ್ ಹರ್ಡೀಕರ್ ಆಗಿದ್ದಾರೆ. ಇವರ ತತ್ವಾದರ್ಶಗಳನ್ನು, ಸಂಘಟನಾ ಚಾತುರ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ದೇಶದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಗುರು ಬಿ.ಎಸ್.ಹಿರೇಕುರುಬರ ಮಾತನಾಡಿ, ಮಕ್ಕಳಲ್ಲಿ ರಾಷ್ಟ್ರಾಭಿಮಾನವನ್ನು ಬೆಳೆಸುವ ಶಿಕ್ಷಣವನ್ನು ಭಾರತ ಸೇವಾದಳವು ನೀಡುತ್ತದೆ. ಎಲ್ಲ ಶಾಲೆಗಳಲ್ಲಿ ಭಾರತ ಸೇವಾದಳದ ಘಟಕಗಳು ಸ್ಥಾಪನೆಯಾಗಬೇಕೆಂದರು.
ಕಾರ್ಯಕ್ರಮದಲ್ಲಿ ಸಿ.ಎಲ್.ನರಗುಂದ,ಶಿಕ್ಷಕ ಸಿಬ್ಬಂದಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಎಸ್.ವೈ.ಬಾಸ್ಕುತರ ಸ್ವಾಗತಿಸಿದರು. ಎಸ್.ವೈ.ತಳವಾರ ನಿರೂಪಿಸಿದರು. ಯು.ಜಿ.ಸಂಗೊಳ್ಳಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

