ಸಿಂದಗಿ: ಮಗು ಜನಿಸಿದ ಮೊದಲ ಆರು ತಿಂಗಳ ಕಾಲ ಎದೆ ಹಾಲುಣಿಸುವಿಕೆಯನ್ನು ಉತೇಜಿಸುವ ಗುರಿಯೊಂದಿಗೆ ೧೯೯೧ರಲ್ಲಿ ವಿಶ್ವಸ್ತನ್ಯಪಾನ ಸಪ್ತಾಹ ಪ್ರಾರಂಭಿಸಲಾಯಿತು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ಹೇಳಿದರು.
ಪಟ್ಟಣದ ಹೆಗ್ಗೇರಿ ಅಂಗನವಾಡಿ ಕೇಂದ್ರದಲ್ಲಿ ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಂತಾನೊತ್ಪತ್ತಿ ಹಾಗೂ ತಾಯಿ ಮಕ್ಕಳ ಆರೋಗ್ಯ ವಿಭಾಗ, ತಾಲೂಕು ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಿಂದಗಿ ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ವತಿಯಿಂದ ಹಮ್ಮಿಕೊಂಡ ಸಾರ್ವತ್ರಿಕ ಲಸಿಕಾಕರಣ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆರಿಗೆಯಾದ ಅರ್ದ ಗಂಟೆಯ ಒಳಗಾಗಿ ತಾಯಿ ಎದೆ ಹಾಲು ನೀಡಬೇಕು. ತಾಯಿಯ ಎದೆ ಹಾಲಿನಲ್ಲಿರುವ ಕೊಲೆಸ್ಟ್ರಮ್ ಅಂಶವು ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಗುವಿಗೆ ಆರು ತಿಂಗಳವರೆಗೆ ನೀರು ಕುಡಿಸುವುದಾಗಲಿ, ಜೇನುತುಪ್ಪ ನೀಡುವುದಾಗಲಿ ಮಾಡಬಾರದು. ಆರು ತಿಂಗಳ ನಂತರ ಪೂರಕ ಆಹಾರದೊಂದಿಗೆ ಎದೆ ಹಾಲು ಕನಿಷ್ಠ ಎರಡು ವರ್ಷದವರೆಗೆ ಕುಡಿಸಬೇಕು ಎಂದರು.
ಈ ವೇಳೆ ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಬಿ.ವಡಗೇರಿ ಮಾತನಾಡಿ, ಲಸಿಕೆಗಳಿಂದ ತಡೆಗಟ್ಟಬಹುದಾದ ರೋಗಗಳ ನಿಯಂತ್ರಣಕ್ಕಾಗಿ ವಯಸ್ಸಿನ ಅನುಗುಣವಾಗಿ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ಮಾರಣಾಂತಿಕ ರೋಗಗಳಾದ ನಾಯಿ ಕೆಮ್ಮು, ನಿಮೋನಿಯಾ ಇತ್ಯಾದಿ ರೋಗಗಳು ಬರದಂತೆ ಮಕ್ಕಳಿಗೆ ಲಸಿಕೆ ಹಾಕಿಸಬೇಕು. ಅಲ್ಲದೇ ಗರ್ಭಿಣಿಯರಿಗೆ ಟಿ.ಡಿ. ಲಸಿಕೆ ಹಾಗೂ ಕಬ್ಬಿಣಾಂಶ ಮಾತ್ರೆ ತಗೆದುಕೊಳ್ಳಬೇಕು. ಕೆಲವು ಲಸಿಕೆಯಿಂದ ಜ್ವರ, ನೋವು ಕಾಣಿಸಿಕೊಳ್ಳಬಹುದು ಅದು ತಾತ್ಕಾಲಿಕವಾಗಿರುತ್ತದೆ ಯಾರು ಭಯಪಡಬಾರದು ಎಂದು ತಿಳುವಳಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ವಿರೇಂದ್ರ ಪವಾಡೆ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಜಯಶ್ರೀ ಚಿಕರೆಡ್ಡಿ, ಆಶಾ ಮೆಂಟರ್ ಸರೋಜಿನಿ ಪತ್ತಾರ, ಆಶಾ ಕಾರ್ಯಕರ್ತೆ ರೂಪಾ ಆಲಮೇಲ, ಅಂಗನವಾಡಿ ಕಾರ್ಯಕರ್ತೆ ಎಂ.ಎಸ್.ಶಿರಕನಳ್ಳಿ ಸೇರಿದಂತೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಾಲಕರು ಮತ್ತು ಮಕ್ಕಳಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

