ಬಂಜಾರಾ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ವಿಜಯಪುರ: ಶಿಕ್ಷಣ ಮತ್ತು ಭೌತಿಕ ಸಂಪತ್ತುಗಳನ್ನು ಪಡೆಯುವುದರ ಜತೆಯಲ್ಲಿ ಸಂಸ್ಕಾರ, ಸಂಸ್ಕೃತಿಗಳ ಮೌಲ್ಯಗಳನ್ನು ಅರಿತು ಜೀವನದಲ್ಲಿ ರೂಢಿಸಲು ಪ್ರಯತ್ನಿಸಿದಲ್ಲಿ ಜೀವನಪರಮ ಪಾವನವಾಗುತ್ತದೆ ಎಂದು ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಿ.ಎಲ್.ಚವ್ಹಾಣ್‌ರವರು ಹೇಳಿದರು.
ಶುಕ್ರವಾರದಂದು ಬಂಜಾರಾ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ೮ ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ವಾಗತ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, ಶಾಲಾ ಸಂಸತ್ತಿನ ಚುನಾಯಿತ ವಿದ್ಯಾರ್ಥಿಗಳ ಪ್ರಮಾಣ ವಚನ ಬೋಧನೆ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ, ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. ಪೋಷಕರು ತಮ್ಮ ಮಕ್ಕಳ ಅಂಕ, ರ‍್ಯಾಂಕ್, ಸ್ಥಾನಮಾನ, ಬಿರುದು ಸನ್ಮಾನಗಳ ಕಡೆಗೆತಮ್ಮ ಶ್ರದ್ಧೆಯನ್ನು ಕೇಂದ್ರೀಕರಿಸಿ ಒತ್ತಡದ ಬದುಕಿಗೆ ಅವರನ್ನು ತಳ್ಳಿ ಬಿಡುತ್ತಾರೆ. ಶಿಕ್ಷಣ ಸ್ಥಾನಮಾನಗಳ ಜತೆಯಲ್ಲೇ ಮೌಲ್ಯಯುತ ಸಂಸ್ಕಾರಗಳನ್ನು ರೂಢಿಸಲು ಕಲಿಸಿದಲ್ಲಿ ಮಕ್ಕಳಲ್ಲಿ ವ್ಯಕ್ತಿತ್ವದ ಹೊಳಪು ಕಾಣಬಹುದು ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕ ಇ.ಡಿ.ಲಮಾಣಿಯವರು ಕಾರ್ಯಕ್ರಮಗಳ ಉದ್ದೇಶವನ್ನು ಪರಿಚಯಿಸುತ್ತ ಮಾತನಾಡಿದ ಅವರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜ ಹಾಗೂ ದೇಶ ಮುನ್ನಡೆ ಸಾಧಿಸಬೇಕಾದರೆ ಮಕ್ಕಳಲ್ಲಿ ಚುನಾವಣೆಯ ಪರಿಕಲ್ಪನೆ ಕುರಿತು ಸ್ಪಷ್ಟತೆ ಬರಬೇಕು.ಜತೆಗೆ ಮೂಲಭೂತ ಹಕ್ಕುಗಳ ಬಗ್ಗೆ ಅರಿತು ಮೂಡಿಸಬೇಕು. ಶಾಲಾ ಮಕ್ಕಳಲ್ಲಿ ನಾಗರಿಕ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ ಎಂಬುದನ್ನು ಮನಗಾಣಿಸುವುದೇ ಶಾಲಾ ಸಂಸತ್ತು ಕಾರ್ಯಕ್ರಮದ ಮೂಲ ಧ್ಯೇಯ ಎಂದರು.
ಪ್ರತಿಭಾ ಪುರಸ್ಕಾರ ಸ್ವೀಕರಿಸಿ ತೃಪ್ತಿತೊದಲಬಾಗಿ ಮಾತನಾಡುತ್ತ. ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ದಾರಿ ತೋರಿಸುವವನೇ ನೈಜಗುರು. ಶಿಕ್ಷಕರು ದೇಶಕಟ್ಟುವ, ಮಾನವೀಯ ಮೌಲ್ಯಗಳಿಗೆ ಮನ್ನಣೆ ನೀಡುವ ಶಿಷ್ಯರನ್ನು ರಾಷ್ಟ್ರಕ್ಕೆ ಅರ್ಪಿಸುವ ಕೆಲಸ ಸದಾ ಮಾಡುತ್ತಿರಬೇಕು ತಮ್ಮ ಶಿಷ್ಯರ ಮನಃ ಪಟಲದಲ್ಲಿ ಸದಾ ನಿಲ್ಲುತ್ತಾರೆ. ಜಗತ್ತಿನ ಶ್ರೇಷ್ಠ ವ್ಯಕ್ತಿಗಳ ನಿರ್ಮಾಣ ಉತ್ತಮ ಶಿಕ್ಷಕರಿಂದಲೇ ಸಾಧ್ಯವಾಯಿತು ಎಂದರು.
ಶಾಲಾ ಸಂಸತ್ತು ಚುನಾವಣೆಯಲ್ಲಿ ಆಯ್ಕೆಯಾದ ಪ್ರೌಢ ಶಾಲೆಯ ಸಭಾಪತಿ, ವಿದ್ಯಾರ್ಥಿ ಪ್ರತಿನಿಧಿ, ಪ್ರಧಾನ ಕಾರ್ಯದರ್ಶಿಗಳಿಗೆ ಡಿ.ಎಲ್.ಚವ್ಹಾಣ್‌ರವರು ಹಾಗೂ ವರ್ಗ ಪ್ರತಿನಿಧಿಗಳಿಗೆ ಇ.ಡಿ.ಲಮಾಣಿಯವರು ಪ್ರಮಾಣ ವಚನ ಬೋಧಿಸಿದರು. ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳ ಪರಿಚಯವನ್ನು ಎಸ್.ಬಿ.ಒಡೆಯರವರು ನಡೆಯಿಸಿ ಕೊಟ್ಟರು.
ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಡಿ.ಎಲ್.ಚವ್ಹಾಣ್‌ರವರು ಗೌರವಿಸಿದರು. ಪ್ರಸಕ್ತ ಸಾಲಿನಲ್ಲಿ ೮, ೯ ಹಾಗೂ ೧೦ ತರಗತಿಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಗುಲಾಬಿ ಹೂವುಗಳನ್ನು ನೀಡಿ ಸ್ವಾಗತ ಕೋರಲಾಯಿತು.
ಈ ಸಂದರ್ಭದಲ್ಲಿ ಎಸ್.ವಿ.ದೇಶಪಾಂಡೆ, ಶಾಲಾ ಸಂಸತ್ತಿನ ಪ್ರಧಾನ ಕಾರ್ಯದರ್ಶಿ ಮಾಂತೇಶ ಕಿತ್ಲಿ, ಸಭಾಪತಿ ಸುಷ್ಮೀತಾ ಚವ್ಹಾಣ್, ವಿದ್ಯಾರ್ಥಿ ಪ್ರತಿನಿಧಿ ಮಾಧುರಿ ರಾಠೋಡ ಹಾಗೂ ಶಿಕ್ಷಕ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತ ಇ.ಡಿ.ಲಮಾಣಿ, ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಎಸ್.ಕೆ.ಶಿಂಧೆಯವರು ನೆರವೇರಿಸಿದರು.

