“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ್
ಸ್ಟಾನ ಲಿ ಪ್ರಖ್ಯಾತ ಇಂಗ್ಲಿಷ್ ಕಾಮಿಕ್ ಪುಸ್ತಕಗಳ ಕರ್ತೃ. ಹಲವಾರು ಕಾಮಿಕ್ ಹೀರೋಗಳನ್ನು ಸೃಷ್ಟಿಸಿದ ಸ್ಟ್ಯಾನ್ಲಿಯನ್ನು ಒಂದು ದಿನ ಆತನ ಕಾಮಿಕ್ ಸರಣಿಯನ್ನು ಮುದ್ರಿಸುತ್ತಿದ್ದ ಮಾರ್ವೆಲ್ ಕಾಮಿಕ್ ನ ಪ್ರಕಾಶಕ ಆತನ ಆಫೀಸಿಗೆ ಬಂದು ಹೊಸದಾಗಿ ಮತ್ತೊಬ್ಬ ಕಾಮಿಕ್ ಹೀರೊನನ್ನು ಸೃಷ್ಟಿಸಲು ಕೇಳಿಕೊಂಡ.
ಇದಕ್ಕೆ ಒಪ್ಪಿ ಯಾರನ್ನು ಹೊಸದಾಗಿ ಹೀರೋ ಮಾಡಬೇಕೆಂದು ಯೋಚಿಸುತ್ತಾ ತನ್ನ ಒರಗು ಕುರ್ಚಿಯಲ್ಲಿ ಹಿಂದಕ್ಕೆ ಒರಗಿದ ಸ್ಟಾನ್ ಲೀ ಗೆ ಗೋಡೆಯನ್ನು ಮೇಲೇರುತ್ತಾ ಹೊರಟ ಕೀಟವೊಂದು ಕಾಣಿಸಿತು. ಕೂಡಲೇ ಆ ಕೀಟವನ್ನೇ ಹೀರೋ ಆಗಿ ಚಿತ್ರಿಸಿದರೆ ಹೇಗೆ ಎಂಬ ಭಾವ ಲೀ ಯಲ್ಲಿ ಮೂಡಿತು.
ಓರ್ವ ಮಧ್ಯಮ ವರ್ಗದ ಹರೆಯದ ಯುವಕ ತನ್ನೆಲ್ಲ ವೈಯುಕ್ತಿಕ ಸಮಸ್ಯೆಗಳನ್ನು ಎದುರಿಸುತ್ತಲೇ, ದುಷ್ಟರೊಂದಿಗೆ ಹೋರಾಡುವ ಚಿತ್ರಣವನ್ನು ಕಲ್ಪಿಸಿಕೊಂಡ ಆತ ಮುಂದಿನ ಒಂದೆರಡು ದಿನಗಳಲ್ಲಿ ಮಾರ್ವೆಲ್ ಕಾಮಿಕ್ ನ ಪ್ರಕಾಶಕನಿಗೆ ಕರೆ ಮಾಡಿ ಕಥೆಯ ವಿವರಗಳನ್ನು ತಿಳಿಸಿದ. ಕೂಡಲೇ ಮಾರ್ವೆಲ್ ನ ಪ್ರಕಾಶಕ ಬೇಸರದಿಂದ ಇದು ಅತ್ಯಂತ ನಿರುಪಯುಕ್ತವಾದ ಕಥೆ ಎಂದೂ, ಕೂಡಲೇ ಈ ಕತೆಯನ್ನು ಕೈಬಿಡಬೇಕೆಂದು ತಿರಸ್ಕಾರದಿಂದ ಹೇಳಿದ. ಸಹಜವಾಗಿ ಲೀಗೆ ಬೇಸರವಾಗಿ ಆತ ಈ ಕಥೆಯನ್ನು ಬಿಟ್ಟುಬಿಡಲು ಯೋಚಿಸಿದ.
ಅದೇ ಸಮಯದಲ್ಲಿ ಮ್ಯಾಗಜಿನ್ ಒಂದು ಮುಚ್ಚುವ ಹಂತದಲ್ಲಿದ್ದು ಕೊನೆಯ ಸಂಚಿಕೆಯನ್ನು ಬಿಡುಗಡೆ ಮಾಡುತ್ತಿತ್ತು. ಕೊನೆಯ ಸಂಚಿಕೆಯಾದ ಕಾರಣ ಅದರಲ್ಲಿ ಪ್ರಕಟವಾಗುವ ಲೇಖನಗಳ ಕುರಿತಾಗಿ ಅಷ್ಟೇನೂ ತಲೆ ಕೆಡಿಸಿಕೊಳ್ಳದೆ ಇದ್ದ ಸಮಯದಲ್ಲಿ ಆ ಕೊನೆಯ ಸಂಚಿಕೆಯಲ್ಲಿ ಸ್ಟ್ಯಾನ್ಲಿ ತಾನು ಚಿತ್ರಿಸಿದ ಹೊಸ ಕೀಟವನ್ನು ಹೀರೋ ಆಗಿರಿಸಿದ ಕಥೆಯನ್ನು ಜನಾಭಿಪ್ರಾಯವನ್ನು ತಿಳಿದುಕೊಳ್ಳಲು ಹಾಕಿದ.
ಕೊನೆಯ ಸಂಚಿಕೆ ಪ್ರಕಟವಾಗಿ ಸ್ಟ್ಯಾನ್ಲಿ ತಾನು ಹಾಕಿದ ಕಾಮಿಕ್ ಹೀರೋನ ಪಾತ್ರ ಜನರ ಮೆಚ್ಚುಗೆ ಗಳಿಸಿದ್ದಲ್ಲದೇ ದಾಖಲೆಯ ಸಂಖ್ಯೆಯಲ್ಲಿ ಮ್ಯಾಗಜಿನ್ ಪ್ರತಿಗಳ ಮಾರಾಟವಾಗಲು ಕಾರಣವಾಯಿತು. ಧಾವಿಸಿ ಬಂದ ಮಾರ್ವೆಲ್ ಕಾಮಿಕ್ ನ ಪ್ರಕಾಶಕ ಸ್ಟ್ಯಾನ್ ಲಿ ಗೆ ಆತ ಸೃಷ್ಟಿಸಿದ ಹೊಸ ಕಾಮಿಕ್ ಹೀರೋನ ಪಾತ್ರ ಜನ ಮನ್ನಣೆ ಗಳಿಸಿದ್ದು ಆ ಪಾತ್ರವನ್ನು ಮುಂದುವರಿಸಿಕೊಂಡು ಹೋಗಲು ಆಗ್ರಹಿಸಿದ.
ಅತ್ಯಂತ ನಿರುಪಯುಕ್ತ ಕಥೆ ಎಂದು ತಿರಸ್ಕರಿಸಿದ ಪ್ರಕಾಶಕನೇ ಮತ್ತೆ ಆ ಕಥೆಯನ್ನು ಮುಂದುವರಿಸಲು ಹೇಳಿದಾಗ ಲೀ ಉತ್ಸಾಹ ಹೆಚ್ಚಾಯಿತು. ಮುಂದೆ ಆ ಕೀಟವನ್ನೇ ತನ್ನ ಕಾಮಿಕ್ ನ ಹೀರೋನನ್ನಾಗಿಸಿ ಸ್ಟಾನ್ ಲಿ ರೋಚಕವಾದ ಕಥೆಗಳನ್ನು ಬರೆಯಲಾರಂಭಿಸಿದ. ಒಂದಕ್ಕಿಂತ ಒಂದು ಕಥೆಗಳು ಜನ ಮೆಚ್ಚುಗೆ ಗಳಿಸುತ್ತಾ ಹೋದಂತೆ ಆ ಪಾತ್ರ ಜಗತ್ತಿನ ಅತಿ ದೊಡ್ಡ ಕಾಮಿಕ್ ಹೀರೋ ಎಂದು ಮನ್ನಣೆ ಗಳಿಸಿತು.
ಯಾವುದು ಆ ಪಾತ್ರ ಎಂದು ಊಹಿಸಬಲ್ಲಿರಾ!?
ಅದುವೇ ಆಬಾಲವೃದ್ಧರಾದಿಯಾಗಿ ಎಲ್ಲರೂ ಮೆಚ್ಚುವ ಸ್ಪೈಡರ್ ಮ್ಯಾನ್.
ನಾವೆಲ್ಲ ಚಿಕ್ಕವರಿದ್ದಾಗ ಸ್ಪೈಡರ್ ಮ್ಯಾನ್ ಕುರಿತು ಸಾಕಷ್ಟು ಊಹೆಗಳನ್ನು, ಕಲ್ಪನೆಗಳನ್ನು ಮಾಡಿಕೊಂಡಿದ್ದೇವಷ್ಟೇ… ಅದು ಒಂದು ಕಾಲ್ಪನಿಕ ಪಾತ್ರ ಎಂದು ಊಹಿಸಲು ಸಾಧ್ಯವಿಲ್ಲದಷ್ಟು ನಮ್ಮನ್ನು ಆವರಿಸಿಕೊಂಡ ಪಾತ್ರ ಸ್ಪೈಡರ್ ಮ್ಯಾನ್.
ಈ ಕಥೆಯನ್ನು ನಂತರದಲ್ಲಿ ಪತ್ರಕರ್ತರಿಗೆ ಹೇಳಿದ ಸ್ಟ್ಯಾನ್ಲಿ “ನಿಜವಾಗಿಯೂ ಒಂದು ಯೋಜನೆ ನಿಮ್ಮ ಮನದಲ್ಲಿ ರೂಪುಗೊಂಡಿದ್ದರೆ, ಅದು ಅತ್ಯುನ್ನತ ಯೋಜನೆ ಎಂದು ನೀವು ನಂಬುತ್ತಿದ್ದರೆ, ಅದು ಸರಿ ಇಲ್ಲ ಎಂದು ಬೇರೆಯವರು ಹೇಳುವ ಮಾತುಗಳಿಗೆ ತಲೆಕೆಡಿಸಿಕೊಳ್ಳಬೇಡಿ”.
ನೋಡಿದಿರಾ ಸ್ನೇಹಿತರೆ,

ನಮ್ಮ ಯೋಜನೆಗಳನ್ನು ಹೀಯಾಳಿಸುವ ಮತ್ತು ತಿರಸ್ಕರಿಸುವವರಿಗಿಂತ ಸಾವಿರಪಟ್ಟು ಹೆಚ್ಚು ಶಕ್ತಿ ನಮ್ಮ ಧೈರ್ಯ ಮತ್ತು ಆತ್ಮವಿಶ್ವಾಸಕ್ಕಿರುತ್ತದೆ. ಅದರ ಅರಿವು ನಮಗಿರಬೇಕಷ್ಟೇ.
ಎಷ್ಟೋ ಬಾರಿ ಬೇರೆಯವರ ಮಾತುಗಳಿಗೆ ಬೆಲೆ ಕೊಟ್ಟು, ನಾಲ್ಕು ಜನ ಏನು ಹೇಳುತ್ತಾರೆ ಎಂದು ಹಿಂಜರಿದು ನಾವು ಅಂದುಕೊಂಡ ಕೆಲಸಗಳನ್ನು ಮಾಡಲು ಹಿಂದೇಟು ಹಾಕುತ್ತೇವೆ.
ನಿಜವಾಗಿಯೂ ನಾವು ಮಾಡುವ ಕೆಲಸದಲ್ಲಿ ನಮಗೆ ನಂಬಿಕೆ ಇದ್ದರೆ, ಅದು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡುತ್ತದೆ ಎಂಬ ಭರವಸೆ ನಮಗಿದ್ದರೆ ಧೈರ್ಯದಿಂದ ಮುಂದುವರೆಯಬೇಕು.. ಅಂತಿಮವಾಗಿ ಜಯ ನಮಗಾಗಿ ವಿಜಯಮಾಲೆಯನ್ನು ಹಿಡಿದು ಕಾಯುತ್ತಿರುತ್ತದೆ.
– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ್

