ಮುದ್ದೇಬಿಹಾಳ: ತನ್ನ ದೇಶಕ್ಕೆ ಮತ್ತು ದೇಶ ಕಾಯುವ ಸೈನಿಕರಿಗೆ ಗೌರವ ಕೊಡುವ ಜನತೆ ಇರುವವರೆಗೂ ಆ ದೇಶ ಎಂದಿಗೂ ಸೋಲುವದಿಲ್ಲ ಎಂದು ತಾಲೂಕಿನ ಢವಳಗಿ ಗ್ರಾಮದ ನಿವೃತ್ತ ನೌಕಾಪಡೆಯ ಪ್ರಥಮ ಮಹಿಳಾ ಅಧಿಕಾರಿ ಮತ್ತು ಸಧ್ಯ ಮಹಾರಾಷ್ಟ್ರ ಸಿವಿಲ್ ಡಿಫೆನ್ಸ್ ಅಧಿಕಾರಿಯಾಗಿ ಸೇವೆಯಲ್ಲಿರುವ ರಾಜೇಶ್ವರಿ ಕೋರಿ ಹೇಳಿದರು.
ಪಟ್ಟಣದ ಹಳೆಯ ತಹಶೀಲ್ದಾರ ಕಚೇರಿಯ ಬಳಿ ಇರುವ ಸೈನಿಕ ಮೈದಾನದಲ್ಲಿ ಕಾರ್ಗಿಲ್ ವೀರಯೋಧರ ಸ್ಮಾರಕ ನಿರ್ಮಾಣ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೨೫ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಸಮಾರಂಭದ ಅತಿಥಿಯಾಗಿ ಅವರು ಮಾತನಾಡಿದರು.
ಈ ವೇಳೆ ತಾಲೂಕಿನ ಬಳವಾಟ ಗ್ರಾಮದ ಲೆಫ್ಟಿನಂಟ್ ಕರ್ನಲ್ ಆಗಿ ಸೇವೆಯಲ್ಲಿರುವ ಶಿವಾನಂದ ಬಿರಾದಾರ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ನೀಡಿದ ವೀರಯೋಧ ದವಲಸಾಬ ಕಂಬಾರ ಅವರ ಸ್ಮಾರಕ ನಿರ್ಮಿಸಿದ ಸಮಿತಿಯವರ ದೇಶಪ್ರೇಮ ಮೆಚ್ಚುವಂಥದ್ದು. ದೇಶಕ್ಕಾಗಿ ಪ್ರಾಣ ನೀಡಿದ ವೀರ ಯೋಧರ ಕುಟುಂದವರು ಸರ್ಕಾರದಿಂದ ವಿವಿಧ ಯೋಜನೆಗಳನ್ನು ನೀಡಲಾಗುತ್ತದೆ. ಅವುಗಳ ಸದ್ಬಳಕೆಗೆಯಾಗಬೇಕು ಎಂದರು.
ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಮಾತನಾಡಿ ಗಡಿಯಲ್ಲಿ ಯೋಧರು ಸಲ್ಲಿಸುತ್ತಿರುವ ಸೇವೆಯಿಂದ ನಾವು ಊರಲ್ಲಿ ಸುಖವಾಗಿ ಮೂರು ಹೊತ್ತು ಊಟ ಮತ್ತು ಕಣ್ತುಂಬ ನಿದ್ದೆ ಮಾಡುತ್ತಿದ್ದೇವೆ. ಯೋಧರನ್ನು ಗೌರವಿಸುವ ಕಾರ್ಯ ನಮ್ಮೆಲ್ಲರಿಂದ ಆಗಬೇಕು ಎಂದರು.
ಕರ್ನಲ್ ಸತೀಶ ದೇಶಪಾಂಡೆ, ಪುರಸಭೆ ಮುಖ್ಯಾಧಿಖಾರಿ ಮಲ್ಲನಗೌಡ ಬಿರಾದಾರ, ಸಮಿತಿಯ ಸಂಸ್ಥಾಪಕ ಗೌರವಾಧ್ಯಕ್ಷ ಬಸವರಾಜ ನಂದಿಕೇಶ್ವರಮಠ ಮಾತನಾಡಿದರು. ತಹಶೀಲ್ದಾರ ಬಲರಾಮ ಕಟ್ಟಿಮನಿ ವಿಜಯ ದಿವಸ ಆಚರಣೆಗೆ ಚಾಲನೆ ನೀಡಿದರು. ತಾಳಿಕೋಟೆಯ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಸಿದ್ಧಲಿಂಗ ದೇವರು ಸಾನಿಧ್ಯ ವಹಿಸಿದ್ದರು. ಪಿಎಸ್‌ಐ ಸಂಜಯ ತಿಪರೆಡ್ಡಿ, ಶಿರಸ್ತೇದಾರ ಎಂ.ಎ.ಬಾಗೇವಾಡಿ, ಸಮಿತಿಯ ಅಧ್ಯಕ್ಷ ಚಂದ್ರಶೇಖರ ಕಲಾಲ, ಸದಸ್ಯರಾದ ರವೀಂದ್ರ ಬಿರಾದಾರ, ಉದಯ ರಾಯಚೂರ, ಹಣಮಂತ ನಲವಡೆ, ಶ್ರೀಕಾಂತ ಹಿರೇಮಠ, ರಾಜು ಹೊಳಿ, ನಬೀಸಾ ನದಾಫ್, ಸೋಮನಗೌಡ ಬಿರಾದಾರ, ರಾಜು ಬಳ್ಳೊಳ್ಳಿ ಸೇರಿದಂತೆ ಮತ್ತೀತರರು ಇದ್ದರು.
ಕಾರ್ಯಕ್ರಮಕ್ಕೂ ಮೊದಲು ತಾಲೂಕಿನ ವೀರಯೋಧರ ಮನೆಗಳಿಂದ ಹುತಾತ್ಮ ವೀರಯೋಧರ ಜ್ಯೋತಿಗಳನ್ನು ಭಾವಚಿತ್ರ ಸಮೇತ ಪಟ್ಟಣದ ದಾವಲಸಾಬ ಕಂಬಾರ ಅವರ ಮನೆಯಿಂದ ಎಂ.ಜಿ.ವ್ಹಿ.ಸಿ ಕಾಲೇಜು, ಅಂಬೇಡ್ಕರ್ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಬಸವೇಶ್ವರ ವೃತ್ತ, ಗಾಂಧಿ ರಸ್ತೆ ಮಾರ್ಗವಾಗಿ ಭವ್ಯ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯ ಉದ್ದಕ್ಕೂ ದೇಶ ಭಕ್ತಿ ಚಟುವಟಿಕೆಗಳು ಮತ್ತು ಶಾರದಳ್ಳಿ ಸ್ಕೆಟಿಂಗ್ ಮತ್ತು ಕರಾಟೆ ತರಬೇತಿಯ ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಸಮೇತ ಮೆರವಣಿಯಲ್ಲಿ ಭಾಗಿಯಾಗಿದ್ದು ಗಮನ ಸೆಳೆದವು.

