ಬಸವನಬಾಗೇವಾಡಿ: ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣವಾಗಿರುವ ಮೆಗಾಮಾರುಕಟ್ಟೆಯ ಕೊಲ್ಹಾರ ಮುಖ್ಯ ರಸ್ತೆಯಲ್ಲಿರುವ ಆವರಣ ಗೋಡೆಗೆ ಹೊಂದಿಕೊಂಡಂತೆ ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ವಹಿವಾಟು ಮಾಡುತ್ತಿದ್ದ ವ್ಯಾಪಾರಿಗಳು ನಮಗೆ ಬೇರೆಡೆ ವ್ಯಾಪಾರ ಮಾಡಲು ಅವಕಾಶ ನೀಡುವಂತೆ ಟಿಪ್ಪು ಕ್ರಾಂತಿ ಸೇನೆಯ ನೇತೃತ್ವದಲ್ಲಿ ಆಗ್ರಹಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಶನಿವಾರವೂ ಮುಂದುವರಿಯಿತು.
ಪಟ್ಟಣದ ಮಾರುತಿ ದೇವಸ್ಥಾನದ ಹತ್ತಿರದಿಂದ ನಾಗೂರ ಕ್ರಾಸ್ವರೆಗೆ ಇದ್ದ ಆವರಣಗೋಡೆಯನ್ನು ಪುರಸಭೆ ಅಧಿಕಾರಿಗಳು ಗುರುವಾರ ತೆರವುಗೊಳಿಸಿದ್ದರಿಂದ ನಾವು ಆವರಣಗೋಡೆ ಹೊಂದಿಕೊಂಡು ಹಲವಾರು ತಿಂಗಳುಗಳಿಂದ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವ ಮೂಲಕ ನಮ್ಮ ಜೀವನ ನಿರ್ವಹಣೆ ಮಾಡುವ ಮೂಲಕ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ. ಈಗ ದಿಢೀರ್ ಪುರಸಭೆಯ ಅಧಿಕಾರಿಗಳು ಆವರಣಗೋಡೆ ತೆರವು ಗೊಳಿಸಿದ್ದರಿಂದ ನಮ್ಮ ಅಂಗಡಿ-ಮುಂಗಟ್ಟುಗಳನ್ನು ತೆರವುಗೊಳಿಸಲಾಗಿದೆ. ಇದರಿಂದಾಗಿ ನಮ್ಮ ವ್ಯಾಪಾರ ನಿಂತು ಹೋಗಿದೆ. ಅಧಿಕಾರಿಗಳು ಕೂಡಲೇ ನಮಗೆ ವ್ಯಾಪಾರ ಮಾಡಲು ಜನನಿ ಬಿಡ ಪ್ರದೇಶದಲ್ಲಿ ಸ್ಥಳಾವಕಾಶ ಮಾಡಿಕೊಟ್ಟರೆ ನಾವು ಜೀವನ ನಿರ್ವಹಣೆ ಮಾಡಲು ಅನುಕೂಲವಾಗುತ್ತದೆ. ನಮಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ನಿನ್ನೆಯಿಂದ ನಾವು ಅಹೋ ರಾತ್ರಿ ಧರಣಿ ಆರಂಭಿಸಿದ್ದೇವೆ. ತಹಸೀಲ್ದಾರ ಅವರಿಗೆ ಮನವಿ ಮಾಡಿಕೊಂಡಾಗ ಅವರು ಪುರಸಭೆ ಅಧಿಕಾರಿಗಳೊಂದಿಗೆ ಮಾತನಾಡುವ ಭರವಸೆ ನೀಡಿದ್ದಾರೆ. ಇದುವರೆಗೂ ನಮಗೆ ಬೇರೆಡೆ ವ್ಯಾಪಾರ ಮಾಡಲು ಸ್ಥಳ ತೋರಿಸಿಲ್ಲ. ನಮಗೆ ನ್ಯಾಯ ಸಿಗುವವರೆಗೂ ಧರಣಿ ಮುಂದುವರಿಸುತ್ತೇವೆ ಎಂದು ಧರಣಿ ನಿರತರು ಹೇಳಿದರು.
ಧರಣಿ ಸ್ಥಳಕ್ಕೆ ಶನಿವಾರ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಅವರು ಭೇಟಿ ನೀಡಿ ಧರಣಿ ನಿರತರಿಗೆ ತಾವು ರಸ್ತೆ ಬದಿ ವ್ಯಾಪಾರ ಮಾಡುವದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ. ಬಸ್ ನಿಲ್ದಾಣದ ಹತ್ತಿರವಿರುವ ಇಂದಿರಾ ಕ್ಯಾಂಟಿನ್ ಹತ್ತಿರ ಜಾಗೆ ಇದೆ. ಅಲ್ಲಿ ತಮ್ಮ ವ್ಯಾಪಾರ ವಹಿವಾಟು ಮಾಡಿಕೊಳ್ಳಲು ಅವಕಾಶ ನೀಡಲಾಗುವದು. ತಮ್ಮ ಧರಣಿಯನ್ನು ಹಿಂಪಡೆಯುವಂತೆ ಹೇಳಿದಾಗ ಧರಣಿ ನಿರತರು ಇಂದಿರಾ ಕ್ಯಾಂಟೀನ್ ಹತ್ತಿರ ಜನರು ಬರುವದಿಲ್ಲ. ನಮಗೆ ವ್ಯಾಪಾರ ಆಗುವುದಿಲ್ಲ. ನಮಗೆ ಮೆಗಾಮಾರುಕಟ್ಟೆ ಸುತ್ತಮುತ್ತ ವ್ಯಾಪಾರ ಮಾಡಿಕೊಳ್ಳಲು ಜಾಗೆ ನೀಡಬೇಕು. ನಮಗೆ ಸೂಕ್ತ ಜಾಗೆ ನೀಡುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದ ಅವರು ನಮಗೆ ನ್ಯಾಯ ಸಿಗುವವರೆಗೂ ಧರಣಿ ಮುಂದುವರಿಸುವದಾಗಿ ಹೇಳಿದರು.
ಧರಣಿಯಲ್ಲಿ ಟಿಪ್ಪು ಕ್ರಾಂತಿ ಸೇನೆಯ ಖಾಜಂಬರ ನದಾಫ, ಬೀದಿ ಬದಿಯ ವ್ಯಾಪಾರಸ್ಥರಾದ ಮಹಿಬೂಬ ಬಾಗವಾನ, ಶ್ರೀಶೈಲ ಅಂಬಾಗೋಳ, ಆಶೀಫ್ ಸೌದಾಗಾರ, ಶಂಕ್ರಯ್ಯ ಹಿರೇಮಠ, ಭಾರತಿ ಅಂಬಾಗೋಳ, ಶಾಂತಾಬಾಯಿ ಕಾಸರ, ಜಾಕೀರ ನದಾಫ, ಬಾಳು ಕಡಕದಾರ, ಡೋಂಗ್ರಿಸಾಬ ಬಾಗವಾನ, ದೇವಮ್ಮ ಮಾದರ, ಸೈದಾ ಬಾಗವಾನ, ರೇಷ್ಮಾ ಆಲಮೇಲ, ಶಿವಾನಂದ ಅಂಬಾಗೋಳ, ಅನ್ವರ ಬೈರವಾಡಗಿ, ಬಿ.ಡಿ.ಭೂತನಾಳ, ಲಕ್ಷ್ಮೀಬಾಯಿ ಜೋಗೇರ, ಡೋಂಗ್ರಿಮಾ ಬೈರವಾಡಗಿ, ಮಹಿಬೂಬಸಾಬ ಜಿರಗಾಳ, ಶ್ಯಾಮಶ್ಯಾದ ಬಿಜಾಪುರ, ಭಾಷಾ ಕಲಾದಗಿ, ಪ್ರಕಾಶ ಭೂತನಾಳ, ಯಾಸ್ಮೀನ ಗೊಳಸಂಗಿ, ರೇಖಾಬಾಯಿ ಜೋಗೇರ, ನಾಗೇಶ ಜೋಗೇರ, ಯಾಸೀನ ಗೊಳಸಂಗಿ, ಪರಶುರಾಮ ಕಡಕದಾರ, ಸಲೀಮಾ ಬಾಗವಾನ ಇತರರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

