ಶಾಲಾ ಸಂಸತ್ತು | ನೂತನ ಮಂತ್ರಿ ಮಂಡಲ ರಚನೆ | ಖಾತೆ ಪ್ರಮಾಣ ಪತ್ರ ವಿತರಣೆ
ಚಿಕ್ಕಪಡಸಲಗಿ: ಇಂದಿನ ಯುವಜನತೆ ವಿದ್ಯಾರ್ಥಿಗಳಲ್ಲಿ ಮತದಾನದ ಮಹತ್ವ ಹಾಗೂ ಮತಹಕ್ಕು ಚಲಾಯಿಸುವ ಪಾವಿತ್ರ್ಯತೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಶಾಲಾ ಸಂಸತ್ತು ಚುನಾವಣೆ ಸಹಕಾರಿಯಾಗಿದೆ ಆ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಅಣಕು ಸಂಸತ್ ರಚನೆ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಪ್ರಭಾರ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ ಹೇಳಿದರು.
ಸ್ಥಳೀಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಜರುಗಿದ ಪ್ರಸಕ್ತ ಸಾಲಿನ ಶಾಲಾ ಸಂಸತ್ತು ಚುನಾವಣೆಯಲ್ಲಿ ಆಯ್ಕೆಯಾದ ಸಂಸತ್ತಿನ ನೂತನ ಮಂತ್ರಿ ಮಂಡಲದ ಸದಸ್ಯರಿಗೆ ಖಾತೆಗಳ ಹಂಚಿಕೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.
ಪ್ರೌಢಶಾಲಾ ಹಂತದಲ್ಲೇ ಮಕ್ಕಳಿಗೆ ಗಟ್ಟಿ ಪ್ರಜಾಪ್ರಭುತ್ವದ ತಿರುಳು ತಿಳಿ ಹೇಳಬೇಕಾಗಿದೆ. ಮತದಾನದ ಮೌಲ್ಯವನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ.ಒಂದೊಂದು ಮತವು ನಿಣಾ೯ಯಕ ಪಾತ್ರ ವಹಿಸುತ್ತದೆ ಎಂಬ ಪರಿಕಲ್ಪನೆ ಮೂಡಿಸಿ ಜನಪ್ರತಿನಿಧಿಗಳು ಹೇಗೆ ಆಯ್ಕೆಗೊಳ್ಳತ್ತಾರೆ,ಸರಕಾರ ಹೇಗೆ ರಚನೆಯಾಗುತ್ತದೆ ಎಂಬಿತ್ಯಾದಿ ಅಂಶಗಳನ್ನು ತಿಳಿಸಿ ಸಾರ್ವತ್ರಿಕ ಚುನಾವಣೆ ನಿಯಮಾವಳಿಗಳ ಮಾದರಿಯಲ್ಲಿ ಪಾರದರ್ಶಕತೆಯಿಂದ ಶಾಲೆಯಲ್ಲಿ ಚುನಾವಣೆ ನಡೆಸಲಾಗಿದೆ ಎಂದರು.
ಮಕ್ಕಳಲ್ಲಿ ನಾಯಕತ್ವದ ನೈತಿಕ ಗುಣ ಹಾಗೂ ಪ್ರಾಮಾಣಿಕತೆವುಳ್ಳ ಮೌಲ್ಯಾಧಾರಿತ ವ್ಯಕ್ತಿತ್ವದ ಚಹರೆ ರೂಪಿಸುವುದು ಇಂದಿನ ಅಗತ್ಯ. ಆ ದಿಸೆಯಲ್ಲಿ ಕಾಯಕ ಬದ್ದತೆಯ ಪದ್ದತಿಗೆ ಪ್ರಾಮುಖ್ಯತೆ ನೀಡಿ ಯುವಜನತೆಯಲ್ಲಿ ಸ್ಪಷ್ಟತೆಯ ಜಾಗೃತಿ ಮೂಡಿಸುವುದರೊಂದಿಗೆ ಮಾನವೀಯತೆಯ ಮೌಲ್ಯಗಳನ್ನು ಬೆಳೆಸಬೇಕಾಗಿದೆ ಎಂದವರು ಅಭಿಪ್ರಾಯಿಸಿದರು.
ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲ ಓದು,ಬರಹ, ಸಮಾಜಮುಖಿ ಕೆಲಸ,ಕಾರ್ಯಗಳನ್ನು ಗೈಯುವ ಅಭಿರುಚಿ, ನೈತಿಕ ಹೊಣೆಗಾರಿಕೆ ನಿಭಾಯಿಸುವ ಮನೋಭಾವ ಜೊತೆಗೆ ಸಂವಿಧಾನದ ಹೂರಣ ಅರಿಯಲು ಶಾಲಾ ಹಂತದಲ್ಲಿ ನಡೆಸುವ ಸಂಸತ್ ಚಟುವಟಿಕೆಗಳು ಪೂರಕವಾಗಿದೆ ಎಂದರು.
ಹಿರಿಯ ಮಾರ್ಗದಶಿ೯, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪುರ ಮಾತನಾಡಿ, ಶಾಲಾ ಹಂತದಲ್ಲಿನ ಸಂಸತ್ ಚುನಾವಣೆ ಮಕ್ಕಳಿಗೆ ಹೊಸತನದ ಅನುಭವ ನೀಡುತ್ತದೆ. ನಿಜ ಮತದಾನದ ವಯಸ್ಸಿನ ಮುನ್ನವೇ ಮೊದಲಬಾರಿಗೆ ಮತಹಕ್ಕು ಚಲಾಯಿಸುವ ಸಂಸಸ,ಸಂಭ್ರಮದ ನವೋಲ್ಲಾಸ, ಮನೋಲ್ಲಾಸ ಅಣಕು ಮತದಾನದ ಶಾಲಾ ಸಂಸತ್ ಚುನಾವಣೆ ಒದಗಿಸುತ್ತದೆ.ಜೊತೆಗೆ ಸರಕಾರ ರಚನೆಯ ಅರಿವು, ಸಂಸತ್ತಿನ ಪಾತ್ರ ಏನೆಂಬುದನ್ನು ತಿಳಿಯಲು ಅವಕಾಶ ಕಲ್ಪಿಸುತ್ತದೆ. ಭವಿಷ್ಯತ್ತಿನ ಯುವ ಮತದಾರ ಪ್ರಭುಗಳನ್ನು ಉತ್ತೇಜಿಸುವ ವಿಶೇಷ ತಿಳುವಳಿಕೆ ನೀಡುತ್ತದೆ ಎಂದರು.
2024-25 ನೇ ಸಾಲಿನ ಶಾಲಾ ಸಂಸತ್ ಚುನಾವಣೆಯಲ್ಲಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ಆಕಾಶ ಬಡಿಗೇರ, ವಿದ್ಯಾರ್ಥಿನಿ ಪ್ರತಿನಿಧಿ ಭಾಗಶ್ರೀ ಪಾಟೀಲ, ಕ್ರೀಡಾ ಹಾಗೂ ಆರೋಗ್ಯ ಮಂತ್ರಿ ಪ್ರಜ್ಲಲ್ ಕೋಳಿ, ಸಾಂಸ್ಕೃತಿಕ ಮಂತ್ರಿ ಗಿರೀಶ ಗುರವ, ಪರೀಕ್ಷಾ ಮಂತ್ರಿ ಸಂಗಮೇಶ ಹಿಪ್ಪರಗಿ, ಪರಿಸರ ಮಂತ್ರಿ ಬಸವರಾಜ ಢವಳೇಶ್ವರ, ಪ್ರವಾಸ ಮಂತ್ರಿ ರಾಹುಲ್ ರಾಯಪ್ಪಗೋಳ, ಮೂಲಭೂತ ಸೌಕರ್ಯ ಮಂತ್ರಿ ಸಂದೀಪ ಪೂಜಾರಿ,ವಿಜ್ಞಾನ ಮಂತ್ರಿ ಸಂತೋಷ ಪಾಟೀಲ, ಪ್ರಾರ್ಥನಾ ಮಂತ್ರಿ ಕೀರ್ತಿ ಕಲ್ಯಾಣಿ ಪ್ರತಿನಿಧಿಗಳಿಗೆ ಖಾತೆಗಳ ಹಂಚಿಕೆ ಪ್ರಮಾಣ ಪತ್ರಗಳನ್ನು ವಿತರಿಸಿ ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗುವಂತೆ ಶುಭ ಕೋರಲಾಯಿತು.
ಅನೀಲ ನಾಯ್ಕ ಅತಿಥಿಗಳಾಗಿ ಭಾಗವಹಿಸಿದ್ದರು. ಶಿಕ್ಷಕರಾದ ಸದಾಶಿವ ಸಿದ್ದಾಪುರ, ಲೋಹಿತ ಮಿಜಿ೯, ಈರಣ್ಣ ದೇಸಾಯಿ, ಜಿ.ಆರ್.ಜಾಧವ, ಗುರುಮಾತೆಯರಾದ ಕವಿತಾ ಅಂಬಿ, ಸಹನಾ ಹತ್ತಳ್ಳಿ, ಪ್ರಮೀಳಾ ತೇಲಸಂಗ, ಪ್ರಶಿಕ್ಷಣಾಥಿ೯ ಅಕ್ಷತಾ ಮೂತ್ತೂರ ಇತರರಿದ್ದರು.

