ಹಡಗಲಿ(ದೇವರಹಿಪ್ಪರಗಿ): ಗ್ರಾಮದ ಮೂಲಕ ಸಂಚರಿಸುವ ವಿಜಯಪುರ-ಕಲಬುರ್ಗಿ, ಸಿಂದಗಿ-ವಿಜಯಪುರ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ-೫೦ರಲ್ಲಿ ಧರಣಿ ಕುಳಿತು ಪ್ರತಿಭಟಿಸಿದರು.
ವಿಜಯಪುರ ತಾಲ್ಲೂಕಿನ ಹಡಗಲಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇರಿದ ಗ್ರಾಮ ಹಾಗೂ ಗ್ರಾಮದ ಎರಡು ತಾಂಡಾಗಳ ವಿದ್ಯಾರ್ಥಿಗಳು ಬಸ್ ನಿಲುಗಡೆಗಾಗಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿ ಗೌರಮ್ಮ ಗಂಗಶೆಟ್ಟಿ ಮಾತನಾಡಿ, ಪ್ರತಿದಿನ ಸಿಂದಗಿ-ವಿಜಯಪುರ ಬಸ್‌ಗಳು ನಿಲ್ಲುತ್ತವೆ. ಆದರೆ ಈಗೀಗ ಸಿಂದಗಿ-ವಿಜಯಪುರ ಬಸ್‌ಗಳು ತಡೆರಹಿತ ಎಂದು ನಾಮಫಲಕ ಹಾಕೊಕೊಂಡು ಸಂಚರಿಸುತ್ತಿವೆ. ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಬಸ್ ಸಿಗದೇ ಬಳಲುವಂತಾಗಿದೆ.
ನಿತ್ಯ ಶಾಲಾ ಸಮಯಕ್ಕೆ ಬಹುತೇಕ ತಡೆರಹಿತ ಬಸ್‌ಗಳೇ ಬರುವುದರಿಂದ ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ತಡವಾಗಿ ತೆರಳುವಂತಾಗಿದೆ. ವಿಜಯಪುರದಿಂದ ಬರುವಾಗ ಸಾಯಂಕಾಲವು ಸಹ ತಡೆರಹಿತ ಬಸ್‌ಗಳೇ ಇರುವುದರಿಂದ ವಿದ್ಯಾರ್ಥಿನೀಯರಿಗೆ ಮನೆಗೆ ತೆರಳಲು ತಡವಾಗುತ್ತಿದೆ. ಆದ್ದರಿಂದ ಗ್ರಾಮದ ಮೂಲಕ ತೆರಳುವ ವಿಜಯಪುರ-ಸಿಂದಗಿ ಹಾಗೂ ವಿಜಯಪುರ-ಕಲಬುರ್ಗಿ ಬಸ್‌ಗಳು ನಿಲುಗಡೆ ಮಾಡಿ ವಿದ್ಯಾರ್ಥಿ, ವಿದ್ಯಾರ್ಥಿನೀಯರ ಕಲಿಕೆಗೆ ಸಹಕಾರ ನೀಡುವಂತೆ ಆಗ್ರಹಿಸಿದರು.
ಗ್ರಾಮದಲ್ಲಿ ಪ್ರತಿಭಟನೆ ಜರುಗುತ್ತಿರುವ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಹಾಯಕ ಸಂಚಾರ ನಿರೀಕ್ಷಕ ಹುಗ್ಗೆಣ್ಣವರ ಗ್ರಾಮಸ್ಥರೊಂದಿಗೆ ಮಾತನಾಡಿ, ವಿಜಯಪುರ-ಸಿಂದಗಿ ಬಸ್ ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು. ಆದರೆ ಕಲಬುರ್ಗಿ-ವಿಜಯಪುರ ನಡುವಿನ ಪ್ರಯಾಣದ ಅವಧಿ ಹೆಚ್ಚಿರುವುದರಿಂದ ದೂರದ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ ಎಂದು ಹೇಳಿ ಸಹಕರಿಸುವಂತೆ ತಿಳಿ ಹೇಳಿದರು.
ಸುಮಾರು ಒಂದೂವರೆ ಗಂಟೆಗಳ ಕಾಲ ಹೆದ್ದಾರಿ ತಡೆ, ಪ್ರತಿಭಟನೆ ಸಮಯದಲ್ಲಿ ವಾಹನಗಳು ಸಾಲಾಗಿ ನಿಂತ ಪರಿಣಾಮ ಕಚೇರಿ ಹಾಗೂ ವಿವಿಧ ಕೆಲಸಗಳಿಗೆ ತೆರಳುವ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು. ನಂತರ ಸಂಚಾರ ಆರಂಭಗೊಂಡಿತು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಅಬ್ಬಾಸಲಿ ಮುಲ್ಲಾ, ಶ್ರೀಶೈಲ ಗಂಗಶೆಟ್ಟಿ, ಶ್ರೀಶೈಲ ಕಾಳಗಿ, ವೀರಭದ್ರ ಗಂಗಶೆಟ್ಟಿ ಸೇರಿದಂತೆ ಗ್ರಾಮಸ್ಥರು, ತಾಂಡಾಗಳ ವಿದ್ಯಾರ್ಥಿಗಳ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

