ತಿಕೋಟಾ ತಾಲೂಕಿನ ತೊರವಿ ಗ್ರಾಪಂ ಗೆ ಭೇಟಿ ನೀಡಿದ ಜಿ.ಪಂ ಸಿ.ಇ.ಓ ರಿಷಿ ಆನಂದ್ ಅಭಿಮತ
ವಿಜಯಪುರ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ತಿಕೋಟಾ ತಾಲೂಕಿನ ತೊರವಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ವಿವಿಧ ಯೋಜನೆಗಳ ಕಾಮಗಾರಿ ಪರಿಶೀಲನೆ ನಡೆಸಿದರು.
ತೊರವಿ ಗ್ರಾಮದ ಕೂಸಿನ ಮನೆಗೆ ಭೇಟಿ ನೀಡಿ, ಮಕ್ಕಳ ಆಟಿಕೆ ಸಾಮಗ್ರಿಗಳು ಹಾಗೂ ಇತರೆ ಪರಿಕರಗಳ ವ್ಯವಸ್ಥೆ ಕುರಿತು ಪ್ರಶಂಸಿದ ಅವರು, ಕೂಸಿನ ಮನೆಗೆ ಅಗತ್ಯ ಇರುವ ಆಟಿಕೆ ಸಾಮಾನುಗಳು, ಅಡುಗೆ ಕೋಣೆ ಸಾಮಗ್ರಿಗಳು, ರೆಫ್ರಿಜರೇಟರ್ ಹಾಗೂ ಕೇಂದ್ರದ ಮಕ್ಕಳ ಆರೈಕೆದಾರರ ಹಾಜರಾತಿ, ಮಕ್ಕಳ ಹಾಜರಾತಿ, ಮಕ್ಕಳ ದಾಖಲಾತಿ, ದಾಸ್ತಾನು ವಹಿ ಹಾಗೂ ಇತರೆ ವಿವಿಧ ದಾಖಲಾತಿ ಸೇರಿ ಎಲ್ಲವನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ. ಈ ಕೂಸಿನ ಮನೆಯು ಜಿಲ್ಲೆಯ ಮಾದರಿಯಾಗಿದೆ ಎಂದು ಹೇಳಿದರು.
ಬಳಿಕ ಗ್ರಾಮದ ಸರ್ಕಾರಿ ಗ್ರಂಥಾಲಯಕ್ಕೆ ಭೇಟಿ ನೀಡಿ, ಅಲ್ಲಿನ ವಾಚಕರೊಡನೆ ಸಮಾಲೋಚನೆ ನಡೆಸಿದರು.
ಈ ಗ್ರಂಥಾಲಯದಲ್ಲಿ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ ತುಂಬಾ ಅನುಕೂಲವಾಗಿದೆ ಎಂದು ಸಾರ್ವಜನಿಕರು ಅನಿಸಿಕೆ ಹಂಚಿಕೊಂಡರು.
ನಂತರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲೆಯಲ್ಲಿ ಕುಡಿಯುವ ನೀರು ಮತ್ತು ಸ್ವಚ್ಛತೆಯಲ್ಲಿ ಅತ್ಯಂತ ಕಾಳಜಿಯಿಂದ ಕಾರ್ಯ ನಿರ್ವಹಿಸುವಂತೆ ಶಿಕ್ಷಕರಿಗೆ ತಿಳಿಸಿದರು.
ಬಿಸಿಯೂಟ ಕೋಣೆ ಪರಿಶೀಲನೆ ನಡೆಸಿ ದಿನದ ವೇಳಾಪಟ್ಟಿಯಂತೆ ಆಹಾರ ಸಿದ್ಧಪಡಿಸಿರುವುದನ್ನು ಪರಿಶೀಲನೆ ಮಾಡಿದರು.
ಶಾಲಾ ಆವರಣದಲ್ಲಿ ಸ್ಥಳಾವಕಾಶ ಇರುವುದರಿಂದ ಪೌಷ್ಠಿಕ ಕೈತೋಟ ನಿರ್ಮಾಣ ಮಾಡಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸಲಹೆ ನೀಡಿದರು.
ನಂತರ ತರಗತಿಗಳಿಗೆ ತೆರಳಿ ಮಕ್ಕಳಿಗೆ ಪಾಠ ಬೋಧಿಸಿದರಲ್ಲದೆ, ಆತ್ಮಸ್ಥೈರ್ಯ ಬೆಳಸಿಕೊಂಡು ಸಾಧನೆಯ ಗುರಿ ತಲುಪಿ ಎಂಬ ಕಿವಿ ಮಾತು ವಿದ್ಯಾರ್ಥಿಗಳಿಗೆ ಹೇಳಿದರು.
ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ನೀಡಿ, ಗ್ರಾಮ ಪಂಚಾಯತಿ ಕಾರ್ಯಾಲಯ ಆವರಣವನ್ನು ಸಸಿಗಳ ನಾಟಿ ಮಾಡುವ ಮೂಲಕ ಸುಂದರ ವಾತಾವರಣ ನಿರ್ಮಾಣ ಮಾಡಿರುವುದನ್ನು ಹಾಗೂ ಕಾರ್ಯಾಲಯದ ಒಳಾಂಗಣ ಸುಂದರವಾಗಿ ವಿವಿಧ ವಿಭಾಗಗಳಾಗಿ ವಿಂಗಡಿಸಿ ಕಾರ್ಯಗಳ ನಿರ್ವಹಣೆ ವೀಕ್ಷಿಸಿದರು.
ಮುಂಬರುವ ದಿನಗಳಲ್ಲಿ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿ ಎಂದು ಗ್ರಾಮ ಪಂಚಾಯತಿ ಸಿಬ್ಬಂದಿಯವರಿಗೆ ಹೇಳಿದರು.
ಈ ಸಂದರ್ಭದಲ್ಲಿ ತಿಕೋಟಾ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ, ಗ್ರಾಮ ಪಂಚಾಯತಿ ಅಧ್ಯಕ್ಷೆ ಪದ್ಮಾವತಿ ರೇವಣಸಿದ್ದ ನಡಗಡ್ಡಿ, ಜಿ.ಪಂ. ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜಶ್ರೀ ತುಂಗಳ, ಕಾರ್ಯದರ್ಶಿ ಎನ್.ಎಮ್.ಕಾಖಂಡಕಿ ಉಪಸ್ಥಿತರಿದ್ದರು.

