ಆದೇಶ ಉಲ್ಲಂಘನೆಗೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ :ಜಿಲ್ಲಾಧಿಕಾರಿ ಟಿ.ಭೂಬಾಲನ್ ಎಚ್ಚರಿಕೆ
ವಿಜಯಪುರ: ಯಾವುದೇ ಸರ್ಕಾರಿ ಸಮಾರಂಭಗಳಲ್ಲಿ ಹಾರ, ಶಾಲು ಮತ್ತು ತುರಾಯಿ ಇತ್ಯಾದಿ ವಸ್ತುಗಳಿಂದ ಸನ್ಮಾನ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿರುವುದರಿಂದ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಆದೇಶ ಉಲ್ಲಂಘಿಸುವ ಅಧಿಕಾರಿಗಳ ಮೇಲೆ ಕೆ.ಸಿ.ಎಸ್.ಆರ್. ೧೯೫೭ರನ್ವಯ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಅಡಿಯಲ್ಲಿ ಶಾಲಾ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಮತ್ತು ಇತರೆ ಸರ್ಕಾರಿ ಸಮಾರಂಭಗಳಲ್ಲಿ ಅನಗತ್ಯವಾಗಿ ಹಣ ಖರ್ಚು ಮಾಡಿ ಹಾರ, ಶಾಲು, ನೆನಪಿನ ಕಾಣಿಕೆಗಳನ್ನು ಕೊಟ್ಟು ಸನ್ಮಾನಿಸುವುದರಿಂದ ಸಮಯದ ವ್ಯರ್ಥ ಹಾಗೂ ಅನಗತ್ಯ ಖರ್ಚಾಗಲಿರುವುದರಿಂದ ಅದರ ಬದಲಾಗಿ ಕಾಣಿಕೆಗಳಿಗೆ ತಗಲುವ ಮೊತ್ತದಲ್ಲಿ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕ ಶೈಕ್ಷಣಿಕ ವಸ್ತುಗಳನ್ನು ನೀಡುವುದು ಸೂಕ್ತವೆಂದು ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶನ ನೀಡಿರುವ ಹಿನ್ನಲೆಯಲ್ಲಿ ಮೇಲಾಧಿಕಾರಿಗಳು ತಮ್ಮ ಅಧೀನ ಕಚೇರಿಗಳಿಗೆ ಭೇಟಿ ನಿಡಿದಾಗ ಅಥವಾ ಅಧಿಕಾರಿ-ನೌಕರರು ಮೇಲಾಧಿಕಾರಿಗಳನ್ನು ಭೇಟಿಯಾಗಲು ಕಚೇರಿಗೆ ಬಂದಾಗ ಹೂಗುಚ್ಛ, ಹಾರ, ಹಣ್ಣಿನ ಬುಟ್ಟಿ, ಶಾಲು ಇತ್ಯಾಧಿಗಳ ಬದಲಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಕಿಂಗ್ ಸೈಜ್ ನೋಟ್ ಬುಕ್ ಅಥವಾ ಸಾಮಾನ್ಯ ಜ್ಞಾನ, ಮಹಾನ್ ಪುರುಷರ, ಸ್ವತಂತ್ರ ಹೋರಾಟಗಾರರ, ವಿಜ್ಞಾನಿಗಳ, ಎನ್ ಸೈಕ್ಲೋಪೀಡಿಯಾ, ನಿಘಂಟು ಇತ್ಯಾದಿ ಪುಸ್ತಕಗಳನ್ನು ನೀಡಿ ಅಧಿಕಾರಿಗಳನ್ನು ಗೌರವಿಸುವಂತೆ ಸೂಚಿಸಿ, ಸಂಗ್ರಹವಾದ ನೋಟ್ ಬುಕ್ ಹಾಗೂ ಪುಸ್ತಕಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಗ್ರಂಥಾಲಯಗಳಿಗೆ ಉಚಿತವಾಗಿ ನೀಡಲು ಈಗಾಗಲೇ ಸುತ್ತೋಲೆ ಹೊರಡಿಸಿ ತಿಳಿಸಲಾಗಿದೆ.
ಇನ್ನೂ ಮುಂದೆ ಈ ಆದೇಶವನ್ನು ಕಡ್ಡಾಯಗೊಳಿಸಲಾಗಿದ್ದು, ಜಿಲ್ಲೆಯ ಎಲ್ಲ ಅಧಿಕಾರಿಗಳು ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆದೇಶ ಉಲ್ಲಂಘಿಸುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಸಹ ಅಧಿಕಾರಿಗಳನ್ನು ಭೇಟಿ ಮಾಡುವ ಸಂದರ್ಭದಲ್ಲಿ ಹಾರ, ಶಾಲು ಮತ್ತು ತುರಾಯಿಗಳ ಬದಲಾಗಿ ಕಲಿಕೆಗೆ ಪೂರಕವಾದ ವಸ್ತುಗಳನ್ನು ನೀಡುವ ಮೂಲಕ ಸಹಕರಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

