ಬಸವನಬಾಗೇವಾಡಿ: ಪಟ್ಟಣದ ಹೃದಯಭಾಗದಲ್ಲಿ ನಿರ್ಮಾಣವಾಗಿರುವ ಮೆಗಾಮಾರುಕಟ್ಟೆಯಲ್ಲಿ ಅಂಗಡಿಯನ್ನು ಬಾಡಿಗೆ ಪಡೆದ ಅಂಗಡಿ ಮಾಲೀಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಅವರಿಗೆ ಮನವಿ ಸಲ್ಲಿಸಿದರು.
ಅವರು ಸಲ್ಲಿಸಿದ ಮನವಿಯಲ್ಲಿ ನಾವು ಪಟ್ಟಣದ ಮಧ್ಯದಲ್ಲಿ ನಿರ್ಮಿಸಿರುವ ಮೆಗಾ ಮಾರುಕಟ್ಟೆಯಲ್ಲಿ ಲೀಲಾವಿನಲ್ಲಿ ಅಂಗಡಿಗಳನ್ನು ಬಾಡಿಗೆ ಹಿಡಿದಿದ್ದೇವೆ. ಲೀಲಾವಿನ ಪ್ರಕಾರ ಡಿಪಾಜಿಟ್ ಕಟ್ಟಿರುತ್ತೇವೆ. ಆದರೆ ಹನುಮಾನ ಮಂದಿರದಿಂದ ನಾಗೂರ ರಸ್ತೆ ಕೂಡುವವರೆಗೆ ಮೆಗಾ ಮಾರುಕಟ್ಟೆಗೆ ಇರುವ ಕಂಪೌಂಡ ಗೋಡೆಯನ್ನು ತೆಗೆಸುವುದು. ಅಂಗಡಿಗಳಿಂದ ರಸ್ತೆಯವರೆಗೆ ಪಾವಟಿಗೆಗಳನ್ನು ಕಟ್ಟಿಸಿ ಕೊಡುವುದು. ಅಂಗಡಿಗಳಿಗೆ ಇರುವ ಶಟರಗಳನ್ನು ಸರಳವಾಗಿ ಏರಿಸಿ ಇಳಿಸಲು ಬರುವ ಹಾಗೆ ಮಾಡಿ ಕೊಡುವ ಮೂಲಕ ವ್ಯಾಪಾರಕ್ಕೆ ಅನುಕೂಲವಾಗುವ ಕೆಲಸಗಳನ್ನು ಮಾಡಿಕೊಡುವುದಾಗಿ ತಿಳಿಸಿದ್ದಿರಿ. ಆದರೆ ಯಾವ ಕೆಲಸಗಳು ಇದುವರೆಗೂ ಆಗಿರುವದಿಲ್ಲ. ತಾವುಗಳು ತಿಳಿಸಿದಂತೆ ನಮ್ಮ ಬೇಡಿಕೆಗಳನ್ನು ಈಡೇರಿಸುವ ಮೂಲಕ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಬಾಡಿಗೆ ಅಂಗಡಿಗಳ ಮಾಲೀಕರಾದ ಮಂಜುನಾಥ ಬಡಿಗೇರ, ಬಸವರಾಜ ಸೊನ್ನದ, ಈರಣ್ಣ ಪತ್ತಾರ, ಸಿದ್ದಣ್ಣ ಪತ್ತಾರ, ಜಗದೀಶ ನಾಗಠಾಣ, ಚಾಂದಭಾಷಾ ಕೊರಬು, ಪ್ರಕಾಶ ಪತ್ತಾರ ಇದ್ದರು.
ಮಂಜುನಾಥ ಬಡಿಗೇರ ಅವರು ನಾವು ನಿಗದಿ ಪಡಿಸಿದ ಬಾಡಿಗೆ ಕಟ್ಟುತ್ತಿದ್ದೇವೆ. ನಾವು ಮನವಿಯಲ್ಲಿ ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ನಮ್ಮ ವ್ಯಾಪಾರ ಚೆನ್ನಾಗಿ ಆಗಲು ಸಾಧ್ಯ. ಈಗ ನಾವು ಹಾಕಿರುವ ಬಂಡವಾಳಕ್ಕೂ ತೊಂದರೆ ಅನುಭವಿಸುತ್ತಿದ್ದೇವೆ, ನಮ್ಮ ಬೇಡಿಕೆಗಳ ಕುರಿತು ಜಿಲ್ಲಾಧಿಕಾರಿಗಳಿಗೂ, ಮತಕ್ಷೇತ್ರದ ಶಾಸಕ, ಸಚಿವ ಶಿವಾನಂದ ಪಾಟೀಲರಿಗೂ ಮನವಿ ಸಲ್ಲಿಸಿದ್ದೇವೆ. ನಮ್ಮ ಬೇಡಿಕೆಗಳಿಗೆ ಸ್ಪಂದಿಸದೇ ಹೋದರೆ ಪುರಸಭೆ ಮುಂದೆ ಧರಣಿ ಕುಳಿತುಕೊಳ್ಳುವುದಾಗಿ ಹೇಳಿದರು.
Subscribe to Updates
Get the latest creative news from FooBar about art, design and business.
Related Posts
Add A Comment

