– ಜಯಶ್ರೀ.ಜೆ. ಅಬ್ಬಿಗೇರಿ,
ಇಂಗ್ಲೀಷ ಉಪನ್ಯಾಸಕರು, ಬೆಳಗಾವಿ, ಮೊ.೯೪೪೯೨೩೪೧೪೨

ದಿನವೆಲ್ಲ ಅದೆಷ್ಟೋ ಜನರನ್ನು ಭೇಟಿಯಾಗುತ್ತೇವೆ. ಹೊಸದಾಗಿ ಕೈ ಕುಲುಕಿದವರ ಮಾತುಗಳಿಗೆ ಮಾತ್ರ ಚೂಪಾಗುವ ಕಿವಿಗಳು, ಉಳಿದವರ ಮಾತುಗಳನ್ನು ಲೆಕ್ಕಾಚಾರದಲ್ಲಿ ಕೇಳಿಸಿಕೊಳ್ಳುತ್ತೇವೆ. ಇನ್ನು ಮನೆ ಮಂದಿಯ ಮಾತುಗಳನ್ನಂತೂ ಈ ಕಡೆಯಿಂದ ಕೇಳಿ ಆ ಕಡೆಯಿಂದ ಬಿಟ್ಟು ಬಿಡುತ್ತೇವೆ. ಬೇರೆಯವರೆಲ್ಲ ನಮ್ಮ ಮಾತುಗಳನ್ನು ಮೆಚ್ಚಿಕೊಳ್ಳಬೇಕು. ಹ್ಞೂಂಗುಡಬೇಕು. ಆದರೆ ಎದುರಿಗಿನವರ ಮಾತಿಗೆ ಬೇಸರದಿಂದ ತಲೆ ಅಲ್ಲಾಡಿಸುವ ವಿಚಿತ್ರ ಸ್ವಭಾವ ನಮ್ಮದು. ಇದೆಂತಹ ವೈರುದ್ಧವಿಲ್ಲವೇ? ಇತರರು ಮಾತುಗಳನ್ನು ತಿರಸ್ಕರಿಸಿದರಂತೂ ನೋವು ಬೇಸರ ಸಿಟ್ಟು ನೆತ್ತಿಗೇರುತ್ತದೆ. ನಮಗೆ ಬೇಕಾದ ಕಿವಿಗಳು ಜಗತ್ತಿನ ಅದ್ಯಾವ ಮೂಲೆಯಲ್ಲಿಯೇ ಅಡಗಿರಲಿ ಅವುಗಳನ್ನು ಬಿಡದೇ ಹಿಡಿದು, ಬೇಕಾದ ಬೇಡವಾದ ಭಾವಗಳೆಲ್ಲವನ್ನು ತುಂಬುತ್ತೇವೆ. ವಿಶ್ವ ವಿಖ್ಯಾತ ವ್ಯಕ್ತಿಗಳ ಜೀವನಗಾಥೆಯನ್ನು ತೆರೆದು ಸೂಕ್ಷ್ಮವಾಗಿ ಅವಲೋಕಿಸಿದರೆ ಆಸ್ಥೆಯಿಂದ ಆಲಿಸುವಿಕೆಯ ಗುಣವೇ ಅವರು ಹೀಗೆ ಶಾಶ್ವತವಾಗಿ ಉಳಿಯಲು ಕಾರಣ ಎಂಬುದು ಅರಿವಿಗೆ ಬರುತ್ತದೆ. ನಾವು ಕೇಳಿಸಿಕೊಳ್ಳುವ ಮಾತುಗಳಲ್ಲೆಲ್ಲ ಬಹು ಬೇಸರದಿಂದ ಪಡೆದುಕೊಳ್ಳುವುದು ಬುದ್ಧಿವಾದವನ್ನು. ಅರೆ ! ಇದೇನು ನಾನು ಇತರರ ಮಾತುಗಳನ್ನು ಕೇಳುತ್ತೇನಲ್ಲ ಅದು ಸಾಕಲ್ಲವೇ? ಎಂದು ನಿಮಗನ್ನಿಸುತ್ತಿದೆಯೇ? ಕೇಳಿಸಿಕೊಳ್ಳುವುದಕ್ಕೂ ಆಲಿಸುವುದಕ್ಕೂ ವ್ಯತ್ಯಾಸವಿದೆಯೇ? ಆಸ್ಥೆಯಿಂದ ಆಲಿಸುವುದರ ಲಾಭಗಳೇನೆಂದು ತಿಳಿಯಲು ಮುಂದೆ ಓದಿ.
ಆಲಿಸುವಿಕೆ ಎಂದರೆ..?
ಕಿವಿಗಳೆರಡು ಸದಾ ತೆರೆದುಕೊಂಡೇ ಇರುತ್ತವೆ ಹೀಗಾಗಿ ನಮಗೆ ಬೇಕಿರಲಿ ಬೇಡವಾಗಿರಲಿ ಸುತ್ತಲಿನ ಎಲ್ಲ ಸದ್ದು ಕಿವಿಗೆ ಬೀಳುತ್ತದೆ. ವಾಹನಗಳ ಕರ್ಕಶ ಸದ್ದು, ಹಕ್ಕಿಗಳ ಕಲರವ, ಮಳೆ ಹನಿಗಳ ಟಪಗುಡುವಿಕೆ, ಅಬ್ಬರಿಸುವ ಗುಡುಗು ಇವೆಲ್ಲವನ್ನೂ ನಮ್ಮ ಕಿವಿ ಕೇಳುತ್ತದೆ. ಇಂಥ ಕೇಳುವಿಕೆಯಲ್ಲಿ ಯಾವುದೇ ಉದ್ದೇಶವಿಲ್ಲ. ಆದರೆ ಆಲಿಸುವುದರಲ್ಲಿ ಧ್ಯೇಯವಿದೆ. ಆಲಿಸುವಿಕೆಗೆ ನಮ್ಮ ಶಕ್ತಿಯನ್ನು ಗಮನವನ್ನು ವ್ಯಯಿಸಬೇಕಾಗುತ್ತದೆ. ದೃಷ್ಟಿ ಕೇಂದ್ರೀಕರಿಸಿ ಕೇಳುವುದು. ಕೇಳಿದ್ದಕ್ಕೆ ಸ್ಪಂದಿಸುವುದು ಕೇಳಿದ್ದನ್ನು ವಿಶ್ಲೇಷಿಸುವುದೆಲ್ಲ ಆಲಿಸುವಿಕೆಯಲ್ಲಿದೆ. ಆಲಿಸುವಿಕೆಯಲ್ಲಿ ಕೇವಲ ಕಿವಿಗಳಿದ್ದರೆ ಸಾಲದು. ಅವುಗಳೊಂದಿಗೆ ಕಣ್ಣು ಮೆದುಳು ಮನಸ್ಸು ಸಹ ಸಾಥ್ ನೀಡಬೇಕು. ಆಲಿಸುವಿಕೆ ಸಮರ್ಥತೆಯನ್ನು ಹೆಚ್ಚಿಸುತ್ತದೆ. ಸಮರ್ಥತೆ ಇರಲಾರದೆ ಆರ್ಥಿಕತೆ ಇರಲಾರದು ಎಂಬುದು ಗಮನದಲ್ಲಿರಲಿ. ಹೊರಗಿನ ಕಿವಿಗಿಂತ ಒಳಗಿನ ಕಿವಿ ಮನದಾಳದ ಪ್ರತಿ ಭಾವದ ಶಬ್ದಗಳನ್ನು ಆಲಿಸುತ್ತದೆ. ಪ್ರತಿಕ್ರಿಯಿಸುತ್ತದೆ.
ಆಲಿಸುವಿಕೆ ಒಂದು ಶಕ್ತಿ
ಆಲಿಸುವಿಕೆ ನಿಷ್ಪರಯೋಜಕವೆಂದು ಕೆಲವರು ವಾದಿಸುವುದುಂಟು. ‘ನಿರಾಶಾವಾದಿ ಗಾಳಿಯ ಬಗ್ಗೆ ದೂರುತ್ತಾನೆ. ಆಶಾವಾದಿ ಅದು ಬದಲಾಗುತ್ತದೆ ಎಂದು ಆಶಿಸುತ್ತಾನೆ. ವಾಸ್ತವಿಕವಾದಿ ಪಟವನ್ನು ಸರಿ ಹೊಂದಿಸುತ್ತಾನೆ.’ ಅಂತೆಯೇ ಆಲಿಸುವುದು ನಿಷ್ಪ್ರಯೋಜಕ ಎನ್ನುವುದು ಸುಳ್ಳು. ಹಲವು ಬಗೆಯ ಮನಸ್ಸುಗಳಿಗೆ ಕಿವಿಗೊಟ್ಟರೆ ಸುಸ್ತಾದ ಮನಸ್ಸು ಮರು ಜೀವ ತುಂಬಿಕೊಂಡು ಎದ್ದು ನಿಲ್ಲುತ್ತದೆ. ಆಲಿಸುವಿಕೆ ಒಂದು ಶಕ್ತಿ. ‘ಶಕ್ತಿಯೇ ಜೀವನ ದೌರ್ಬಲ್ಯವೇ ಸಾವು. ಶಕ್ತಿಯೇ ನಮ್ಮ ಸೌಭಾಗ್ಯ. ಬದುಕು ನಿರಂತರ ಮತ್ತು ಶಾಶ್ವತ! ದೌರ್ಬಲ್ಯ ನೋವು. ದೌರ್ಬಲ್ಯ ಸಾವು. ಸಕಾರಾತ್ಮಕವಾದ ಸದೃಢವಾದ ಮತ್ತು ಇನ್ನೊಬ್ಬರಿಗೆ ನೆರವಾಗುವ ಆಲೋಚನೆಗಳು ನಮ್ಮ ಬಾಲ್ಯದಿಂದಲು ಮುನ್ನುಗ್ಗಲಿ’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು. ದೃಢ ಇಚ್ಛಾ ಶಕ್ತಿಯನ್ನು ಹೊಂದಿದ್ದರೆ ಕಠಿಣವೆನಿಸುವ ಆಲಿಸುವ ಕಲೆಯನ್ನು ಸಿದ್ಧಿಸಿಕೊಳ್ಳಬಹುದು. ತನ್ಮೂಲಕ ಯಶಸ್ವಿ ಜೀವನಕ್ಕೆ ಹತ್ತಿರವಾಗಬಹುದು.
ಮಾತಿನಂತೆ ಆಲಿಸುವಿಕೆಯೂ ಪ್ರಮುಖ
ವ್ಯಕ್ತಿತ್ವ ವಿಕಸನದ ತರಬೇತಿಗಳಲ್ಲಿ ನಿರರ್ಗಳವಾಗಿ ಮಾತನಾಡುವ ಕಲೆಯನ್ನು ಕಲಿಸಲು ಹೆಚ್ಚು ಒತ್ತು ಕೊಡಲಾಗುತ್ತದೆ. ಮಾತು ಒಂದೇ ಸಂಪೂರ್ಣ ವ್ಯಕ್ತಿತ್ವವನ್ನು ಬೆಳಗಿಸಲಾರದು. ಮಾತಿನಂತೆ ಆಲಿಸುವಿಕೆಯೂ ಪ್ರಮುಖವಾಗಿದೆ. ಆಲಿಸುವ ಕಲೆ ಕರಗತವಾದರೆ ಜನಪ್ರಿಯತೆಯೂ ಹೆಚ್ಚುತ್ತದೆ. ಶ್ರದ್ಧೆಯಿಂದ ಆಲಿಸುವವರನ್ನು ಜನ ಹೆಚ್ಚು ಇಷ್ಟಪಡುತ್ತಾರೆ. ಆಲಿಸುವವರೆಡೆಗೆ ತಮ್ಮ ನೋವು ನಲಿವುಗಳನ್ನು ಹಂಚಿಕೊಳ್ಳಲು ದೌಡಾಯಿಸುತ್ತಾರೆ. ಸಲಹೆ ಮಾರ್ಗದರ್ಶನಗಳನ್ನು ನಿರೀಕ್ಷಿಸುತ್ತಾರೆ. ಮನದಾಳದಲ್ಲಿ ಬೇರೂರಿರುವ ನೋವುಗಳಿಗೆ ಪರಿಹಾರ ಸೂಚಿಸಲು ಬ್ರಹಸ್ಪತಿ ಬುದ್ಧಿಯೇನು ಬೇಕಿಲ್ಲ ತಾಳ್ಮೆಯಿಂದ ಕೇಳಿದರೆ ಸಾಕು.
ಅಭಿಪ್ರಾಯಗಳನ್ನು ಅರ್ಥೈಸಿಕೊಳ್ಳಿ
‘ಯಶಸ್ಸಿನ ರಹಸ್ಯವೆಂಬುದೇನಾದರೂ ಇದ್ದರೆ ಅದು ಇತರರ ಅಭಿಪ್ರಾಯಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಮತ್ತು ಅವರ ಹಾಗೂ ನಿಮ್ಮ ದೃಷ್ಟಿಯಲ್ಲಿ ಸನ್ನಿವೇಶವನ್ನು ನೋಡುವುದರಲ್ಲಿ.’ ಎಂದಿದ್ದಾನೆ ಅಮೇರಿಕದ ಉದ್ಯಮಿ ಹೆನ್ರಿ ಫೋರ್ಡ್. ಪರಿವಾರದಲ್ಲಿ, ಕೆಲಸದ ಸ್ಥಳಗಳಲ್ಲಿ, ಸ್ನೇಹದಲ್ಲಿ ತಮಗೆ ಉಂಟಾದ ಸಂತಸ, ಸಮಸ್ಯೆ ಇಷ್ಟ ಕಷ್ಟಗಳೆಲ್ಲವನ್ನು ಹಂಚಿಕೊಳ್ಳಬೇಕೆಂದು ಇಚ್ಛಿಸುತ್ತೇವೆ. ಇತರರ ಸಮಸ್ಯೆಗಳನ್ನು ಕೇಳಬೇಕಾದ ಸಂದರ್ಭದಲ್ಲಿ ಪರರ ಗೋಳು ಕೇಳಿ, ಸ್ಪಂದಿಸುವುದು ಇಲ್ಲದ ಉಸಾಬರಿ ಎನಿಸಿ ದಿವ್ಯ ನಿರ್ಲಕ್ಷ್ಯ ತೋರುತ್ತೇವೆ. ಅವರು ಹೇಳುವುದನ್ನು ಕಿವಿಯಾರೆ ಆಲಿಸಿ ನೋವು ನಲಿವಿಗೆ ಸ್ಪಂದಿಸಿ. ಅಭಿಪ್ರಾಯಗಳನ್ನು ಅರ್ಥೈಸಿಕೊಂಡರೆ ಯಾವುದೇ ಸಂಬಂಧವಿರಲಿ ಹೊಂದಾಣಿಕೆ ಸಲೀಸಾಗುವುದು. ‘ಕಳೆದು ಹೋಗಿರುವುದನ್ನು ಬದಲಾಯಿಸಲಾಗದು ಭವಿಷ್ಯತ್ತು ಇನ್ನೂ ನಿಮ್ಮ ಕೈಯಲ್ಲಿಯೇ ಇದೆ.’ ಆಲಿಸಿ ಚೆನ್ನಾಗಿ ನಿರ್ವಹಿಸಿ.

ದುಬಾರಿ ಕಾಣಿಕೆಗೆ ಸಮವಲ್ಲ
ಸಂಬಂಧಗಳಲ್ಲಿ ಆಲಿಸುವಿಕೆ ಎಂಬ ಕಲೆಯನ್ನು ಪ್ರದರ್ಶಿಸಲಾಗದೆ ದಿನ ನಿತ್ಯ ಅನೇಕ ಸಮಸ್ಯೆಗಳಿಗೆ ಸಿಲುಕಿ ಹಾಕಿ ಕೊಳ್ಳುತ್ತೇವೆ. ಬಹಳಷ್ಟು ಆತಂಕಗಳನ್ನು ಎದುರಿಸುತ್ತೇವೆ. ಎದುರಿಗಿನವರ ಮಾತುಗಳನ್ನು ಮನಸಾರೆ ಕಿವಿ ತುಂಬಿಸಿಕೊಂಡು ಒಳಿತು ಕೆಡುಕುಗಳ ವಿಶ್ಲೇಷಣೆ ನೀಡಿದರೆ ಅದಕ್ಕಿಂತ ದೊಡ್ಡ ಉಡುಗೊರೆ ಮತ್ತೊಂದಿಲ್ಲ. ವಿಷಯ ಚಿಕ್ಕದು ದೊಡ್ಡದು ಎಂಬ ಭೇದವಿಲ್ಲದೆ ಗಂಭೀರವಾಗಿ ಆಲಿಸುವುದು ಸೂಕ್ತ. ಹೀಗೆ ಆಲಿಸುವುದರಿಂದ ಏನು ಉಪಯೋಗ ಎನ್ನುತ್ತಿರಾ? ಆಲಿಸುವಿಕೆಯು ನಿಮ್ಮ ಎದುರುಗಿನವರ ಮುಖದ ಮೇಲೆ ಸುಂದರ ನಗೆಯ ಸುಮವನ್ನು ಅರಳುವಂತೆ ಮಾಡುತ್ತದೆ. ಅದು ಯಾವ ದುಬಾರಿ ಕಾಣಿಕೆಗೂ ಸಮವಲ್ಲ ಅದಕ್ಕಿಂತ ಅಮೂಲ್ಯವೆಂಬ ಭಾವ ಮೂಡಿಸುತ್ತದೆ.
ಸಂತಸದ ಬೀಗದ ಕೈ
ಹಿಂದೆ ಟಿವಿ ವಾಟ್ಸಪ್ ಫೇಸ್ ಬುಕ್‌ಗಳಿರಲಿಲ್ಲ ಹೀಗಾಗಿ ಜನ ಪರಸ್ಪರರ ಮಾತುಗಳಿಗೆ ಕಿವಿಯಾಗುತ್ತಿದ್ದರು. ಸ್ವಯಂ ಸ್ಪೂರ್ತಿಯಿಂದ ಇತರರ ನೆರವಿಗೆ ಮುಂದಾಗುತ್ತಿದ್ದರು. ಆಲಿಸಲು ನಮಗೆ ಪುರುಸೊತ್ತೆಲ್ಲಿದೆ? ಎಂದು ನೆಪ ಹೇಳುತ್ತ ಗ್ಯಾಜೆಟ್‌ಗಳಲ್ಲಿ ಕಳೆದು ಹೋಗುತ್ತಿದ್ದೇವೆ. ಇದರಿಂದಾಗಿ ಏಕಾಂಗಿತನ ನಿರಾಶತನ ಸಿನಿಕತೆ ಕಾಡುತ್ತಿವೆ.. ಹಿರಿಯರಲ್ಲಿ ಅಸಹಾಯಕರಲ್ಲಿ ನೋವಿನ ಗೆರೆಗಳು ಢಾಳಾಗಿ ಕಾಣಿಸಿಕೊಳ್ಳುವುದಕ್ಕೆ ಕಾರಣ ಇತರರು ಅವರನ್ನು ಆಲಿಸದಿರುವುದೇ ಆಗಿದೆ. ಪ್ರೀತಿಯಿಂದ ಕೊಂಚ ಕಿವಿಗೊಟ್ಟರೂ ಆ ಜೀವಿಗಳು ಹಿರಿ ಹಿರಿ ಹಿಗ್ಗುತ್ತವೆ. ಇತರರನ್ನು ಆಲಿಸಿದಷ್ಟೂ ನೀವು ಅವರ ಎದೆಗೆ ಹತ್ತಿರವಾಗುತ್ತೀರಿ. ಆಲಿಸುವಿಕೆ ನಮ್ಮ ದೇಹವನ್ನು ಮನಸ್ಸನ್ನು ಚಕಿತಗೊಳಿಸಬಲ್ಲದು.
ಈ ಸೂತ್ರಗಳನ್ನು ಪಾಲಿಸಿ – ಆಲಿಸಿ
ಹೇಳುವವರ ಮುಖ ನೇರವಾಗಿ ನೋಡದಿದ್ದರೆ, ಹೇಳುಗರಿಗೆ ತಮ್ಮನ್ನು ಅಲಕ್ಷಿಸುತ್ತಿದ್ದಾರೆಂಬ ಭಾವ ಉಂಟಾಗಬಹುದು ಆದ್ದರಿಂದ ಅವರತ್ತ ನೋಡಿ. ಕಣ್ಣಲ್ಲಿ ಕಣ್ಣಿಟ್ಟು ಆಲಿಸಿ.
ಹೇಳುವುದನ್ನು ಪೂರ್ಣ ಕೇಳಿಸಿಕೊಳ್ಳುವ ಮುನ್ನವೇ ಸಮಾಧಾನ ಹೇಳಬೇಡಿ.
ಶ್ರದ್ಧೆಯಿಂದ ಆಲಿಸಿ. ಕೇಳಿಸಿಕೊಳ್ಳುವುದನ್ನು ಖಂಡಿಸಬೇಕೆನ್ನಿಸಿದರೆ ನಯವಾದ ಮಾತುಗಳಲ್ಲಿ ತಿಳಿ ಹೇಳಿ. ಅನಗತ್ಯವಾಗಿ ಪ್ರಶ್ನಿ¸ಲು ಮುಂದಾಗ ಬೇಡಿ.
ನೀವು ಆಸಕ್ತಿಯಿಂದ ಆಲಿಸುತ್ತಿದ್ದೀರಿ ಎನ್ನುವುದನ್ನು ಹೇಳುಗರಿಗೆ ತಿಳಿಸಲು ಮುಗಳ್ನಗಬೇಕು. ನಿಜ ಎಂದು ಸಮರ್ಥಿಸಲು ಆಗಾಗ ಹ್ಞೂಂಗುಡಬೇಕು..
ಆಲಿಸುವಾಗ ಪೇಪರ್ ಓದುವುದರಲ್ಲಿ ಮಗ್ನರಾಗುವುದು ಟಿವಿ ನೋಡುವುದು ಮೊಬೈಲ್, ಕಂಪ್ಯೂಟರ್‌ನಲ್ಲಿ ಮುಖ ಹುದುಗಿಸಬೇಡಿ.
ಉಳಿದ ಕಲೆಗಳಂತೆಯೇ ಇದು ಸಹ ತಕ್ಷಣವೇ ಸಿದ್ಧಿಸುವುದಿಲ್ಲ. ಅನುದಿನ ಸಾಧನೆಯ ಅವಶ್ಯಕತೆಯಿದೆ. ಆಲಿಸುವಿಕೆಯನ್ನು ತುಂಬು ಮನಸ್ಸಿನಿಂದ ಅನುಭವಿಸಿ.. ವಿಜಯ ಪಥದತ್ತ ಹೆಜ್ಜೆ ಹಾಕಲು ಸಿದ್ಧರಾಗಿ.

