ದೇವರಹಿಪ್ಪರಗಿ: ಆಲಮಟ್ಟಿ ಆಣೆಕಟ್ಟಿನಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದ್ದು ತಕ್ಷಣವೇ ಚಿಮ್ಮಲಗಿ ಮುಖ್ಯ ಕಾಲುವೆಯ ನಾಗಠಾಣ ಉಪಕಾಲುವೆಗೆ ನೀರು ಹರಿಸಬೇಕೆಂದು ನಿವಾಳಖೇಡ ಗ್ರಾಮದ ರೈತರು ಆಗ್ರಹಿಸಿದ್ದಾರೆ.
ತಾಲ್ಲೂಕು ಸೇರಿದಂತೆ ಮತಕ್ಷೇತ್ರದಲ್ಲಿ ವಾಡಿಕೆಯಂತೆ ಮುಂಗಾರಿನ ಬಹುತೇಕ ಮಳೆಗಳು ರೈತ ಸಮುದಾಯದ ನಿರೀಕ್ಷೆಯಂತೆ ಆಗದೇ ಇದ್ದು, ಇದೇ ಸಂದರ್ಭದಲ್ಲಿ ಕಾಲುವೆಗಳಿಗೆ ನೀರು ಪೂರೈಸುವ ಆಲಮಟ್ಟಿ ಆಣೆಕಟ್ಟಿನಲ್ಲಿ ದಿನದಿಂದ ದಿನಕ್ಕೆ ನೀರು ಸಂಗ್ರಹವಾಗುತ್ತಿದೆ. ಜೊತೆಗೆ ಈಗ ಮಹಾರಾಷ್ಟ್ರ ಸೇರಿದಂತೆ ಕೃಷ್ಣಾ ನದಿ ತೀರದ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದು, ಆಲಮಟ್ಟಿ ಆಣೆಕಟ್ಟಿನಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿದೆ. ಈ ನೀರನ್ನು ಕಾಲುವೆಗಳಿಗೆ ಹರಿಸಲು ಯಾವುದೇ ತೊಂದರೆಯಿಲ್ಲ. ಅದಕ್ಕಾಗಿ ತಕ್ಷಣವೇ ಕಾಲುವೆಗಳ ಮುಖಾಂತರ ನಿರಂತರ ನೀರು ಹರಿಸಿ ರೈತ ಸಮುದಾಯಕ್ಕೆ ಅನುಕೂಲ ಮಾಡಿಕೊಡಬೇಕು.
ದೇವರಹಿಪ್ಪರಗಿ ಭಾಗದ ಚಿಮ್ಮಲಗಿ ಮುಖ್ಯ ಕಾಲುವೆ ಹಾಗೂ ನಾಗಠಾಣ ಉಪಕಾಲುವೆಗಳಿಗೆ ಕಾಲುವೆಯ ಕೊನೆಯ ಭಾಗದವರೆಗೂ ತಲುಪುವಂತೆ ಕೂಡಲೇ ನೀರು ಹರಿಸಲು ಕೆಬಿಜೆಎನ್‌ಎಲ್ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಗ್ರಾಮದ ರೈತಸಂಘದ ಪದಾಧಿಕಾರಿಗಳಾದ ಚನ್ನಪ್ಪ ಕಾರಜೋಳ, ಬಸವರಾಜ ಭಂಟನೂರ, ವಿನೋದ ತಳವಾರ, ಅಶೋಕ ಭಂಟನೂರ, ಮಲಕಪ್ಪ ಹಿಪ್ಪರಗಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಆಗ್ರಹಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

