ವಿಜಯಪುರ: ಪ್ರತೀ ವರ್ಷದಂತೆ ಈ ವರ್ಷವೂ ನಗರದ ಇಬ್ರಾಹಿಂಪುರದಲ್ಲಿ ಮಾತಾ ಶ್ರೀ ಮರಗಮ್ಮ ದೇವಿ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ಜಾತ್ರೆಯ ಪ್ರಯುಕ್ತ ಶ್ರೀ ಮರಗಮ್ಮದೇವಿ ದೇವಸ್ಥಾನಕ್ಕೆ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಿ ಮುಂಭಾಗದಲ್ಲಿ ಭವ್ಯ ಶಾಮೀಯಾನ ನಿರ್ಮಿಸಿ ಬಾಳೆಗಿಡ, ತಳಿರು-ಹೂವಿನ ತೋರಣ ಕಟ್ಟಲಾಗಿತ್ತು.
ದೇವಿಗೆ ಹೂವಿನದಂಡೆ, ಹಾರಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.
ಬೆಳಗ್ಗೆ ದೇವಿಗೆ ಅಭಿಷೇಕ, ಆರತಿ, ವಿಶೇಷ ಪೂಜೆ ನಡೆಯಿತು. ದೇವಿಯ ದರ್ಶನಕ್ಕೆ ಜಿಟಿ-ಜಿಟಿ ಮಳೆಯ ನಡುವೆಯೇ ಭಕ್ತರು ಬೆಳಗಿನ ಜಾವದಿಂದಲೇ ದೇವಸ್ಥಾನಕ್ಕೆ ತೆರಳುತ್ತಿದ್ದುದು ಕಂಡುಬಂತು. ದೇವಸ್ಥಾನಕ್ಕೆ ಬರುವ ಭಕ್ತರಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕವಾಗಿತ್ತು.
ಇಬ್ರಾಹಿಂಪುರ ಹಾಗೂ ಸುತ್ತಮುತ್ತಲಿನ ವಿವಿಧ ಬಡಾವಣೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವಿಗೆ ನೀರೆರೆದು ಹೂವು, ಕಾಯಿ, ನೈವೇದ್ಯ ಸಮರ್ಪಿಸಿ ಭಕ್ತಿಭಾವದಿಂದ ನಮಿಸಿದರು.
ಮಧ್ಯಾಹ್ನ ಗ್ರಾಮದಲ್ಲಿ ಡೊಳ್ಳು ಹಾಗೂ ವಿವಿಧ ವಾದ್ಯಮೇಳಗಳೊಂದಿಗೆ ಮರಗಮ್ಮ ದೇವಿಯ ಪಲ್ಲಕ್ಕಿ ಉತ್ಸವ ವೈಭವದಿಂದ ನಡೆಯಿತು.
ಪಲ್ಲಕ್ಕಿ ಉತ್ಸವದ ಬಳಿಕ ಸಂಜೆ ಮರಗಮ್ಮ ದೇವಿ ದೇವಸ್ಥಾನದ ಮುಂದೆ ಪ್ರತೀ ವರ್ಷದ ಪದ್ಧತಿಯಂತೆ ಈ ವರ್ಷದ ಜಾತ್ರೆಯಲ್ಲೂ ಪ್ರಾಣಿಬಲಿ ನಿರಾತಂಕವಾಗಿ ನಡೆಯಿತು. ಹರಕೆ ಹೊತ್ತ ಭಕ್ತರು ದೇವಿಗೆ ಕುರಿ-ಹುಂಜಗಳನ್ನು ಬಲಿಕೊಟ್ಟು ತಮ್ಮ ಹರಕೆ ತೀರಿಸಿದರು.
ಜಾತ್ರೆಗೆ ಬರುವ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಿರಂತರ ಅನ್ನ ದಾಸೋಹ ನಡೆಯಿತು.
ಮರಗಮ್ಮದೇವಿ ದೇವಸ್ಥಾನ ಸೇವಾ ಸಮಿತಿಯ ಎಲ್ಲ ಸದಸ್ಯರು ಜಾತ್ರಾ ಮಹೋತ್ಸವದ ಯಶಸ್ವಿಗೆ ಒಗ್ಗೂಡಿ ಶ್ರಮಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

