ತ್ವರಿತಗತಿಯಲ್ಲಿ ನೀರಾವರಿ ಯೋಜನೆ ಪೂರ್ಣಗೊಳಿಸುವ ಕುರಿತಂತೆ ಅಧಿವೇಶನದಲ್ಲಿ ಪ್ರಶ್ನೆ
ವಿಜಯಪುರ: ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ಅನ್ಯಾಯ ಹಾಗೂ ತ್ವರಿತಗತಿಯಲ್ಲಿ ಈ ಯೋಜನೆ ಪೂರ್ಣಗೊಳಿಸುವ ಕುರಿತಂತೆ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು, ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಬುಧವಾರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ೧,೫೮೧ ಮೂಲಕ ಸರ್ಕಾರದ ಗಮನಸೆಳೆದರು.
೧೯೬೩ ರಲ್ಲಿ ದಿ.ಲಾಲ್ ಬಹದ್ದೂರ್ ಶಾಸ್ತಿç ಅವರಿಂದ ಪ್ರಾರಂಭವಾದ ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಗೆ, ಕಳೆದ ಆರು ದಶಕಗಳಿಂದ ಅನ್ಯಾಯ ಆಗುತ್ತಲೇ ಬಂದಿದೆ. ಇದರಿಂದ ಉತ್ತರ ಕರ್ನಾಟಕ ಭಾಗ ನೀರಾವರಿಯಿಂದ ವಂಚಿತವಾಗಿದೆ. ಇದು ನಮ್ಮ ಭಾಗದ ರೈತರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕೃಷ್ಣಾ ನದಿಯಿಂದ ಶೇ ೬೮ ರಷ್ಟು ನೀರಾವರಿ ವ್ಯವಸ್ಥೆ ಕಲ್ಪಿಸುವ ದೊಡ್ಡ ಯೋಜನೆಯಾದರೆ, ಕಾವೇರಿ ನದಿಯಿಂದ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವುದು ಮತ್ತು ಕೇವಲ ಶೇ ೧೨ ರಷ್ಟು ಮಾತ್ರ ನೀರಾವರಿ ವ್ಯವಸ್ಥೆಯಿದೆ. ಆದರೆ, ಅಧಿಕಾರಕ್ಕೆ ಬಂದ ಪ್ರತಿಯೊಂದು ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳು ಕೃಷ್ಣೆಗೆ ಅನ್ಯಾಯ ಮಾಡುತ್ತಲೇ ಬಂದಿವೆ. ಆಣೆ, ಪ್ರಮಾಣ ಮಾಡಿದರೂ ಏನು ಆಗಲೇ ಇಲ್ಲ. ಇದರಿಂದ ನಮ್ಮ ಭಾಗದ ನೀರಾವರಿ ಯೋಜನೆಗಳು ಆಮೆಗತಿಯಲ್ಲಿ ಸಾಗಿವೆ. ನಮ್ಮ ಈ ದೊಡ್ಡ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆಗೆ ಕಾವೇರಿಗಿಂತ ೨೦ ಪಟ್ಟು ಹೆಚ್ಚು ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಉತ್ತರ ಕರ್ನಾಟಕ ಭಾಗದ ಜನರ ಭವಿಷ್ಯದ ದೃಷ್ಟಿಯಿಂದ ಹಾಗೂ ಸಮಗ್ರ ಕರ್ನಾಟಕ ರಾಜ್ಯದ ಅಭಿವೃದ್ಧಿಗಾಗಿ ಯಾದಗಿರಿ, ಕಲಬುರ್ಗಿ, ವಿಜಯಪುರ, ಬಾಗಲಕೋಟ, ರಾಯಚೂರು, ಕೊಪ್ಪಳ, ಗದಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ೫.೯೪ ಲಕ್ಷ ಹೆಕ್ಟೆರ್ ನೀರಾವರಿ ಸೌಲಭ್ಯ ಕಲ್ಪಿಸುವ ಈ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-೩ ತುರ್ತಾಗಿ ಪರಿಪೂರ್ಣಗೊಳ್ಳುವುದು ಅಗತ್ಯವಿದೆ.
ಆದರೆ, ರೂ.೧.೫ ಲಕ್ಷ ಕೋಟಿಯ ದೊಡ್ಡ ಯೋಜನೆ ಅನುಷ್ಠಾನಕ್ಕೆ ೧,೩೩,೮೬೭ ಎಕರೆ ಜಮೀನು ಕ್ಷೇತ್ರವನ್ನು ಭೂಸ್ವಾಧೀನಕ್ಕೆ ಒಳಪಡಿಸಲಾಗಿದ್ದು, ಇದುವರೆಗೆ ೨೮,೬೬೮ ಎಕರೆ ಕ್ಷೇತ್ರ ಮಾತ್ರ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇದಕ್ಕಾಗಿ ಕೇವಲ ರೂ.೨,೭೩೯ ಕೋಟಿ ಖರ್ಚು ಮಾಡಲಾಗಿದೆ. ಹೀಗೆ ಆದರೆ, ಈ ಯೋಜನೆ ಮುಗಿಯುವುದು ಯಾವಾಗ ಎಂದು ಪ್ರಶ್ನಿಸಿದರು.
ಯೋಜನೆಯನ್ನು ಪೂರ್ಣಗೊಳಿಸುವುದಕ್ಕೆ ಯಾವುದೇ ತೊಡಕಿದ್ದರೂ ಸಹ ಅದನ್ನು ನಿವಾರಿಸಬೇಕಾದದ್ದು ಸರ್ಕಾರದ ಜವಾಬ್ದಾರಿ. ಅಗತ್ಯ ಅನುದಾನ ನೀಡಿ, ಮುಂದಿನ ಎರಡು ವರ್ಷಗಳಲ್ಲಿ ಸಂಪೂರ್ಣ ಯೋಜನೆ ಪೂರ್ಣಗೊಳಿಸಿ, ನಮ್ಮ ಭಾಗದ ರೈತರಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

