ಸ್ವಚ್ಚತೆ ಇಲ್ಲಿ ಮರೀಚಿಕೆ | ಜಾಣ ಮೌನಕ್ಕೆ ಜಾರಿದ ಅಧಿಕಾರಿಗಳು | ಗಮನ ಹರಿಸದ ಜನಪ್ರತಿನಿಧಿಗಳು

– ರಶ್ಮಿ ನೂಲಾನವರ
ಸಿಂದಗಿ: ರಾಜ್ಯದಲ್ಲಿರುವ ಸರಕಾರಿ ವಸತಿ ಶಾಲೆಗಳು, ವಸತಿ ನಿಲಯಗಳು ಸೇರಿದಂತೆ ಸರಕಾರಿ ಶಾಲೆಗಳ ಅವ್ಯವಸ್ಥೆ ಆಗರವಾಗಿವೆ. ಬಹಳಷ್ಟು ಸರಕಾರಿ ಶಾಲೆ, ವಸತಿ ನಿಲಯಗಳಲ್ಲಿ ಸ್ವಚ್ಚತೆ ಎಂಬುದು ಮರೀಚಿಕೆಯಾಗುತ್ತಿದೆ. ಆದರೆ ಮುಂಬರುವ ದಿನಮಾನಗಳಲ್ಲಿ ಸುಧಾರಣೆ ಮಾಡುತ್ತೇವೆ ಎನ್ನುವು ವಾಗ್ದಾನದೊಂದಿಗೆ ಅಧಿಕಾರ ಹಿಡಿಯುವ ಎಲ್ಲ ಸರಕಾರಗಳು ಮಾತ್ರ ಜಾಣ ಕುರುಡುತನದಿಂದ ವಿದ್ಯಾರ್ಥಿಗಳು ಸಂಕಷ್ಟ ಎದುರಿಸಬೇಕಾಗಿದೆ.
ಪಟ್ಟಣದ ಗೋಲಗೇರಿ ರಸ್ತೆಯಲ್ಲಿರುವ ಶ್ರೀ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಅವ್ಯವಸ್ಥೆಯ ಆಗರವಾಗಿದೆ. ಅಶುಚಿತ್ವ ಶೌಚಾಲಯ, ಸೋಳ್ಳೆಗಳ ಕಾಟ, ಪ್ಯಾನ್ ಇಲ್ಲ, ಶೌಚಾಲಯಕ್ಕೆ ನೀರು ಸರಬರಾಜಿಲ್ಲ ಹೀಗೆ ಇಲ್ಲಗಳ ದೊಡ್ಡ ಪಟ್ಟಿಯನ್ನೇ ತೆರದಿಟ್ಟಿರುವ ಡಿವೈಎಫ್‌ಐ ರಾಜ್ಯ ಸಮಿತಿ ಸದಸ್ಯ ರಮೇಶ ಸಾಸಾಬಾಲ ಅವರು ಸರಕಾರ ಮತ್ತು ಅಧಿಕಾರಿಗಳ ಜಾಣ ಮೌನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಶುಚಿತ್ವ ಶೌಚಾಲಯ: ವಿದ್ಯಾರ್ಥಿ ನಿಲಯವನ್ನು ಒಂದು ಸುತ್ತು ಬಂದರೆ ಇಲ್ಲಿ ಕೇವಲ ಸಮಸ್ಯೆಗಳೇ ಕಣ್ಣಿಗೆ ಗೋಚರಿಸುತ್ತವೆ. ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಶೌಚಾಲಯ ಹೇಗಿದೆ ಎಂದರೆ ನೋಡಿದರೆ ತಲೆ ತಿರುಗಿ ವಾಂತಿ ಮಾಡಿಕೊಂಡು ತಿರುಗಿ ಬಿಳುವುದು ಖಚಿತ. ಹೀಗಿರುವಾಗ ಮಕ್ಕಳು ಅದನ್ನು ಬಳಸುವುದಾದರೂ ಹೇಗೆ? ಶೌಚಾಲಯ ಸ್ವಚ್ಚವಾಗಿಲ್ಲ. ಗಬ್ಬೆದ್ದು ನಾರುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಶೌಚ ಮತ್ತು ಸ್ನಾನಕ್ಕಾಗಿ ಹೋರಗೆ ಹೋಗುವುದು ಅನಿವಾರ್ಯ ಎದುರಾಗಿದೆ.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನ ಹರಿಸುವರೆ? ಹಿಂದುಳಿದ ಹಳ್ಳಿಗಳಲ್ಲಿ ಕೂಲಿನಾಲಿ ಮಾಡಿ ಬದುಕನ್ನು ಸಾಗಿಸುವ ಹಿಂದುಳಿದ ಮಕ್ಕಳ ವ್ಯಾಸಂಗಕ್ಕೆ ಅನುಕೂಲವಾಗಲಿ ಎಂದು ಸರಕಾರ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪನೆ ಮಾಡಿದೆ. ಆದರೆ ಅಧಿಕಾರಿಗಳು ನಿರ್ವಹಣೆ ವಿಚಾರದಲ್ಲಿ ಎಡವುತ್ತಿರುವುದರಿಂದ ಇಂತಹ ಸಮಸ್ಯೆಗಳು ಎದುರಾಗಿವೆ. ಅಷ್ಟೇ ಅಲ್ಲದೇ ಸರಕಾರಿ ಶಾಲೆ ಮತ್ತು ವಸತಿ ನಿಲಯಗಳು ಸಮಸ್ಯೆಗಳ ಆಗರವಾಗಿದೆ. ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಇಷ್ಟೊಂದು ಸಮಸ್ಯೆಗಳಿರುವಾಗ ಉಳಿದ ವಿದ್ಯಾರ್ಥಿ ನಿಲಯಗಳ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ನೀವೇ ಉಹಿಸಬಹುದು. ಇನ್ನಾದರೂ ಜನಪ್ರತಿನಿಧಿಗಳು, ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ವಿದ್ಯಾರ್ಥಿ ನಿಲಯದ ಸಮಸ್ಯೆಯನ್ನು ಪರಿಹರಿಸುತ್ತಾರೆಯೇ ಕಾದು ನೋಡಬೇಕಿದೆ.
ರಾತ್ರಿಯಾದರೆ ಸೊಳ್ಳೆ ಕಾಟ: ರಾಜ್ಯದಲ್ಲಿ ಮೊದಲೇ ಡೆಂಘೀ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಸರಕಾರ ಮಾತ್ರ ಅದರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಾಗೃತಿ ಮೂಡಿಸುತ್ತಲೇ ಇದೆ. ಆದರೆ ವಸತಿ ನಿಲಯದಲ್ಲಿ ರಾತ್ರಿಯಾದರೆ ಸಾಕು ಸೊಳ್ಳೆಗಳ ಕಾಟವೇ ಹೆಚ್ಚು. ಇದ್ದ ಪ್ಯಾನ್‌ಗಳು ಸಹ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಿಂಗೆ ಆದರೆ ನಮ್ಮ ಮಕ್ಕಳ ಸ್ಥಿತಿ ಏನು ಎಂಬುದು ಪಾಲಕರ ಅಭಿಪ್ರಾಯವಾಗಿದೆ.
” ಈಗಾಗಲೇ ತಾಪಂ ಇಒ ಅವರು ಭೇಟಿ ನೀಡಿ ಸ್ವಚ್ಚತೆಯ ಕೊರೆತೆಯಿದೆ ಅದನ್ನು ಸರಿಪಡಿಸಿಕೊಳ್ಳಿ ಎಂದು ಹೇಳಿದ್ದಾರೆ. ವಸತಿ ನಿಲಯಕ್ಕೆ ಭೇಟಿ ನೀಡಿ ಸ್ವಚ್ಚತೆ ಮಾಡಿಸುವೆ. ಮಕ್ಕಳ ವಿಚಾರಕ್ಕೆ ಏನೂ ತೊಂದರೆಯಾಗದ ಹಾಗೆ ನೋಡಿಕೊಳ್ಳುವೆ.”
ರವೀಂದ್ರ ಭಂಥನಾಳ
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ
” ಕಳೆದ ವಾರ ನಾನು ಮತ್ತು ತಾಪಂ ಇಒ ಅವರು ವಸತಿ ನಿಲಯಕ್ಕೆ ಭೇಟಿ ನೀಡಿದಾಗ ಅಶುಚಿತ್ವದ ಆಗರವಾಗಿತ್ತು. ವಸತಿ ನಿಲಯದ ಮೇಲ್ವಿಚಾರಕರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಮೇಲಾಧಿಕಾರಿಗಳಿಗೆ ಕರೆ ಮಾಡಿ ಕೇಳಿದರೆ ನಾನು ಹೇಳುತ್ತೇನೆ ಹೋಗಲಿ ಬೀಡು ಎಂದು ಉತ್ತರಿಸುತ್ತಾರೆ. ಮಕ್ಕಳ ಭವಿಷ್ಯವಿದೆ ಅಧಿಕಾರಿಗಳು ಕೂಡಲೇ ವಸತಿ ನಿಲಯದ ಸಮಸ್ಯೆಯನ್ನು ಪರಿಹರಿಸಬೇಕು.”
ರಮೇಶ ಸಾಸಾಬಾಳ
ಡಿವೈಎಫ್‌ಐ ರಾಜ್ಯ ಸಮಿತಿ ಸದಸ್ಯ

