ಅಫಜಲಪುರ: ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರದ ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದ ಗುರುಪೂರ್ಣಿಮೆ ಸಂಭ್ರಮದಲ್ಲಿ ದತ್ತಾತ್ರೇಯರ ಭಕ್ತರು ದರ್ಶನ ಪಡೆದು ಮಿಂದೆದ್ದರು.
ಪ್ರತಿವರ್ಷ ನಡೆಯುವ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ನಾನಾ ಭಾಗಗಳಿಂದ ಬರುವ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದುಕೊಂಡರು. ದೇವಸ್ಥಾನದಲ್ಲಿ ನಸುಕಿನ ೩ ಗಂಟೆಗೆ ಕಾಕಡಾರತಿ, ಲಗುನ್ಯಾಸಪೂರ್ವಕ ರುದ್ರಾಭಿಷೇಕ, ಗುರುಪಾದುಕೆಗಳಿಗೆ ಕೇಸರ ಲೇಪನ ಸೇವೆ ನಡೆಯಿತು. ಬಳಿಕ ವ್ಯಾಸಪೂಜೆಯನ್ನು ದೇವಸ್ಥಾನದ ಪ್ರಾಂಗಣದಲ್ಲಿ ವಿಪ್ರಬಾಂಧವರು ನಡೆಸಿಕೊಟ್ಟರು. ನಂತರ ಬಂದ ಭಕ್ತರಿಗೆ ಅನ್ನದಾನ ನಡೆಯಿತು. ಸಾಯಂಕಾಲ ಪಲ್ಲಕ್ಕಿ ಸೇವೆ ನಡೆಯಿತು.
ಈ ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ಮಹಾರಾಷ್ಟ್ರ, ಸೀಮಾಂಧ್ರ, ತೆಲಂಗಾಣ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಯ ಭಕ್ತರು ಆಗಮಿಸಿ ದತ್ತಾತ್ರೇಯ ಮಹಾರಾಜರ ದರ್ಶನಾಶಿರ್ವಾದ ಪಡೆದು ಪುನೀತರಾದರು. ಅಲ್ಲದೆ ಗ್ರಾಮದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಖ್ಯ ರಸ್ತೆಯಿಂದ ದೇವಸ್ಥಾನದ ವರೆಗೆ ಸರತಿ ಸಾಲಿನಲ್ಲಿ ನಿಂತು ದತ್ತ ಮಹಾರಾಜರ ದರ್ಶನ ಪಡೆದುಕೊಳ್ಳುವಂತಾಯಿತು.
ಇನ್ನು ಗುರುಪೂರ್ಣಿಮೆ ಪ್ರಯುಕ್ತ ದೂರದೂರದಿಂದ ಬಂದಂತ ಸಾವಿರಾರು ಭಕ್ತರು ತಮ್ಮ ವಾಹನಗಳ ನಿಲುಗಡೆ ಮಾಡಲು ಪಾರ್ಕಿಂಗ್ ಜಾಗವಿಲ್ಲದ್ದರಿಂದ ಮುಖ್ಯ ರಸ್ತೆಗಳಲ್ಲೇ ವಾಹನಗಳನ್ನು ನಿಲ್ಲಿಸುವಂತಾಯಿತು. ಇದರಿಂದಾಗಿ ಗಾಣಗಾಪೂರದಲ್ಲಿ ಸಂಚಾರ ದಟ್ಟಣೆ ಉಂಟಾಗಿ ದತ್ತನ ಭಕ್ತರಿಗೆ ಕಿರಿಕಿರಿಯಾಯಿತು. ಅಲ್ಲದೆ ಸಾರಿಗೆ ಬಸ್ಸುಗಳ ಸಂಚಾರಕ್ಕೂ ಅಡಚಣೆ ಉಂಟಾದ ಘಟನೆ ನಡೆಯಿತು. ಸಂಚಾರ ದಟ್ಟಣೆ ನೀಗಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತಮ್ಮ, ಸಾಲಕಾರಿ ಕಾರ್ಯದರ್ಶಿ ಶ್ರೀಕಾಂತ ಭಟ್ ಪೂಜಾರಿ, ಪ್ರಿಯಾಂಕ್ ಪೂಜಾರಿ, ಪ್ರಸನ್ನ ಪೂಜಾರಿ, ಗುರುದತ್ ಪೂಜಾರಿ, ಪ್ರಖ್ಯಾತ ಪೂಜಾರಿ, ನಾಗೇಶ ಪೂಜಾರಿ, ಸಚಿನ ಪೂಜಾರಿ, ಕಿರಣ ಪೂಜಾರಿ, ದೇವಸ್ಥಾನದ ಸಿಬ್ಬಂದಿ ದತ್ತು ನಿಂಬರ್ಗಿ ಸೇರಿದಂತೆ ಗಾಣಗಾಪೂರ ಠಾಣೆ ಪೊಲೀಸ್ ಸಿಬ್ಬಂದಿಗಳು, ಗೃಹ ರಕ್ಷಕ ದಳದವರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

