ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕಡ್ಲಿಗಾರ ಹುಣ್ಣಿಮೆಯಂಗವಾಗಿ ಭಾನುವಾರ ಮಹಿಳೆಯರು ತಮ್ಮ ಹತ್ತಿರವಿರುವ ಭಾವಿ, ಬೋರವೆಲ್ಗಳಿಗೆ ಪೂಜೆ ಸಲ್ಲಿಸುವ ಮೂಲಕ ಗಂಗಾಮಾತೆಗೆ ನಮನ ಸಲ್ಲಿಸಿದರು. ಪಟ್ಟಣದ ಐತಿಹಾಸಿಕ ಬಸವೇಶ್ವರ ದೇವಸ್ಥಾನದ ಬಸವತೀರ್ಥ ಬಾವಿಗೆ ಆಗಾಗ್ಗೆ ಬರುತ್ತಿದ್ದ ಜಿಟಿ ಜಿಟಿ ಮಳೆಯಲ್ಲಿಯೇ ಮಹಿಳೆಯರು ತಮ್ಮ ಕುಟುಂಬ ಸದಸ್ಯರೊಂದಿಗೆ ತೆರಳಿ ಬಾವಿಗೆ ಪೂಜೆ ಸಲ್ಲಿಸಿ ಮುತ್ತೈದೆಯರಿಗೆ ಉಡಿ ತುಂಬಿದರು. ಕೆಲವರು ಬೋರವೆಲ್ಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಡ್ಲಿಗಾರ ಹುಣ್ಣಿಮೆ ಆಚರಿಸಿದರು.
ಮಣ್ಣೆತ್ತಿನ ಅಮವಾಸ್ಯೆಯ ನಂತರ ಬರುವ ಕಡ್ಲಿಗಾರ ಹುಣ್ಣಿಮೆಯಂದು ಉತ್ತರ ಕರ್ನಾಟಕದ ಜನರು ಗಂಗಾಮಾತೆ ಪೂಜೆ ಸಲ್ಲಿಸುವುದು ಸಂಪ್ರದಾಯ. ಈ ವರ್ಷ ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತ ಬಾಂಧವರು ಈಗಾಗಲೇ ಬಿತ್ತನೆ ಮಾಡಿದ್ದಾರೆ. ನಿನ್ನೆಯಿಂದ ಆಗಾಗ್ಗೆ ಜಿಟಿ ಜಿಟಿ ಮಳೆ ಬರುವ ಮೂಲಕ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ. ಬಿತ್ತನೆ ಮಾಡಿದ ಬೆಳೆಗೆ ಉತ್ತಮ ಮಳೆಯಾಗಬೇಕಿದೆ. ಮಹಿಳೆಯರು ಉತ್ತಮ ಮಳೆ-ಬೆಳೆ ಬರಲಿ, ಎಲ್ಲರೂ ಸುಖ-ಶಾಂತಿಯಿಂದ ಇರಲೆಂದು ಗಂಗಾಮಾತೆಗೆ ಪೂಜೆ ಸಲ್ಲಿಸಿದರು. ಇಂದು ಗುರುಪೂರ್ಣಿಮೆಯೆಂದು ಆಚರಣೆ ಮಾಡುವದರಿಂದ ಕೆಲವರು ತಮ್ಮ ಮನೆಯ ಗುರುಗಳ ದರ್ಶನ ಪಡೆದುಕೊಂಡು ಆಶೀರ್ವಾದ ಪಡೆದುಕೊಂಡರೆ ಕೆಲವರು ಗುರುವಿನ ಮಠ-ಮಂದಿರಗಳಿಗೆ ತೆರಳಿ ದರ್ಶನ ಪಡೆದುಕೊಂಡರು.
Subscribe to Updates
Get the latest creative news from FooBar about art, design and business.
Related Posts
Add A Comment

