ಉದಯರಶ್ಮಿ’ ವರದಿಗಾರ ಚೇತನ ಶಿವಶಿಂಪಿ ಸೇರಿದಂತೆ ಐವರಿಗೆ “ತಾಲೂಕು ಉತ್ತಮ ಪತ್ರಕರ್ತ” ಪ್ರಶಸ್ತಿ
ಮುದ್ದೇಬಿಹಾಳ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ೨೦೨೪-೨೫ ನೇ ಸಾಲಿನ ಪತ್ರಿಕಾ ದಿನಾಚರಣೆ ನಡೆಸುವ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ವಿಶೇಷ ಚರ್ಚೆಗಳು ನಡೆದವು.
ಈ ವೇಳೆ ಸದಸ್ಯ ಚೇತನ ಶಿವಶಿಂಪಿ ಮಾತನಾಡಿ, ಕಾರ್ಯಕ್ರಮದ ಬಳಿಕ ಸದಸ್ಯರೆಲ್ಲರಿಗೆ ಲೆಕ್ಕಪತ್ರಗಳ ಮಾಹಿತಿ ನೀಡಿದಲ್ಲಿ ಸಂಘದ ಶಿಸ್ತನ್ನು ಕಾಯ್ದುಕೊಂಡಂತಾಗುತ್ತದೆ ಎಂದರು.
ಹಿರಿಯ ಸದಸ್ಯ ಪರಶುರಾಮ ಕೊಣ್ಣೂರ ಮಾತನಾಡಿ, ಕೆಲವರು ತಮ್ಮ ಲಾಬಿಗಾಗಿ ಸಂಘದಲ್ಲಿ ಪತ್ರಕರ್ತರಲ್ಲದವರನ್ನು ಸೇರಿಸಿದ್ದಾರೆ. ಕೂಡಲೇ ಅಂತವರನ್ನು ಗುರುತಿಸಿ ಸಂಘದಿಂದ ಕೈಬಿಡಬೇಕು ಎಂದರು.
ಎಚ್.ಆರ್.ಬಾಗವಾನ, ಅಲ್ಲಾಭಕ್ಷ ನಿಡಗುಂದಿ, ಡಿ.ಬಿ.ವಡವಡಗಿ ಮತ್ತೀತರರು ಮಾತನಾಡಿ ಸಲಹೆಗಳನ್ನು ನೀಡಿದರು.
ಜು.೩೧ ಕ್ಕೆ ಪಟ್ಟಣದ ವಿದ್ಯಾನಗರದಲ್ಲಿರುವ ಅಭ್ಯುದಯ ಕಾಲೇಜಿನಲ್ಲಿ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಯಿತು.
ಈ ವೇಳೆ ರವೀಂದ್ರ ನಂದೆಪ್ಪನವರ, ಲಾಡ್ಲೇಮಶಾಕ ನದಾಫ, ಸಿದ್ದು ಚಲವಾದಿ, ಮುತ್ತು ಬೀರಗೊಂಡ, ಹಣಮಂತ ಬೀರಗೊಂಡ, ಯಲ್ಲಾಲಿಂಗ ಕೊಡೇಕಲ್, ಕೃಷ್ಣ ಕುಂಬಾರ, ಸಾಗರ ಉಕ್ಕಲಿ, ಈಶ್ವರ ಈಳಗೇರ, ಬಿ.ಎಸ್.ಪಾಟೀಲ ಇದ್ದರು.
ಪ್ರಸಕ್ತ ಸಾಲಿನ “ತಾಲೂಕು ಉತ್ತಮ ಪತ್ರಕರ್ತ” ಪ್ರಶಸ್ತಿಗೆ ಸಂಯುಕ್ತ ಕರ್ನಾಟಕ ಹಾಗೂ ಉದಯರಶ್ಮಿ ವರದಿಗಾರ ಚೇತನ ಶಿವಶಿಂಪಿ, ಪುಂಡಲೀಕ ಮುರಾಳ, ಅಲ್ಲಾಭಕ್ಷ ನಿಡಗುಂದಿ, ಸಿದ್ದು ಚಲವಾದಿ ಮತ್ತು ಬಸವರಾಜ ಹುಲಗಣ್ಣಿ ಅವರನ್ನ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಮಾತಿನ ಚಕಮಕಿ
ಚರ್ಚೆಯಲ್ಲಿ ಮಾತಿನ ಚಕಮಕಿ ಜೋರಾಗುತ್ತಿದ್ದಂತೆ ಅಧ್ಯಕ್ಷ ಮುತ್ತಣ್ಣ ವಡವಡಗಿ ಟೇಬಲ್ ಬಡಿದು ಮೇಲು ಧ್ವನಿಯಲ್ಲಿ ಇಬ್ಬರು ಸದಸ್ಯರಿಗೆ ನಿಮ್ಮಿಬ್ಬರದು ಜಾಸ್ತಿಯಾಗಿದೆ. ಬಂದುಬಿಡಿ ಎಂದು ಮಾತನಾಡಿ ಸಭೆಗೆ ಅವಮಾನಿಸಿದ ಘಟನೆ ನಡೆಯಿತು.
ಎಲ್ಲ ಸದಸ್ಯರನ್ನು ಒಗ್ಗೂಡಿಸಿ ಸಂಘಟನೆಯನ್ನು ಬೆಳೆಸುವ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಹಿರಿಯ ಸದಸ್ಯರಿದ್ದರೂ ತಾಳ್ಮೆ ಕಳೆದುಕೊಂಡು ಈ ರೀತಿ ನಡೆದುಕೊಂಡಿದ್ದು ಸಂಘದ ತಾಲೂಕು ಘಟಕದ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿಯಲಿದೆ ಎನ್ನುವ ಮಾತುಗಳು ಕೇಳಿಬಂದವು.
ರಾಜೀನಾಮೆ ಸಲ್ಲಿಸಿದ ಹಿರಿಯ ಸದಸ್ಯ
ಸುಮಾರು ಹದಿನೈದು ವರ್ಷಗಳಿಂದ ಹಿರಿಯ ಸದಸ್ಯನಾಗಿ ಸಂಘದ ಬೆಳವಣಿಗೆಯಲ್ಲಿ ಪಾತ್ರವಹಿಸಿದ್ದ ಪರಶುರಾಮ ಕೊಣ್ಣೂರ ಸಂಘದ ಸದಸ್ಯತ್ವಕ್ಕೆ ಸಂಘದ ವಾಟ್ಸ್ಅಪ್ ಗ್ರೂಪ್ ಮೂಲಕ ರಾಜೀನಾಮೆ ಸಲ್ಲಿಸಿದರು.
ಸದಸ್ಯರೊಬ್ಬರು ಅಧ್ಯಕ್ಷರ ಗೂಂಡಾಗಿರಿ ವರ್ತನೆ ಬಗ್ಗೆ ಜಿಲ್ಲಾ ಮತ್ತು ರಾಜ್ಯಾಧ್ಯಕ್ಷರ ಗಮನಕ್ಕೆ ತರೋಣ ಎಂದು ಹೇಳಿದರೂ ಅವರು ತಮ್ಮ ನಿರ್ಧಾರವನ್ನು ಬದಲಿಸಲಿಲ್ಲ.

