ವೇದಾಂತಕೇಸರಿ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಸ್ಮರಣೋತ್ಸವ & ಗುರುಪೂರ್ಣಿಮೆ ಮಹೋತ್ಸವ
– ದೇವೇಂದ್ರ ಹೆಳವರ
ವಿಜಯಪುರ: ನಗರದ ಜ್ಞಾನಯೋಗಾಶ್ರಮದಲ್ಲಿ ರವಿವಾರ ಹಮ್ಮಿಕೊಂಡಿದ್ದ ವೇದಾಂತಕೇಸರಿ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಸ್ಮರಣೋತ್ಸವ ಹಾಗೂ ಗುರುಪೂರ್ಣಿಮೆ ಮಹೋತ್ಸವಕ್ಕೆ ಭಕ್ತರ ಮಹಾಪೂರವೇ ಹರಿದು ಬಂದಿತ್ತು.
ಜ್ಞಾನಯೋಗಾಶ್ರಮದಲ್ಲಿ ವರ್ಷದಲ್ಲಿ ಎರಡು ಬಾರಿ ದೊಡ್ಜ ಜಾತ್ರೆಯಂತೆ ಲಕ್ಷಾಂತರ ಭಕ್ತರು ಸೇರುವ ದೊಡ್ಡ ಪ್ರಮಾಣದ ಎರಡು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.
ಒಂದು ಗುರುನಮನ ಮಹೋತ್ಸವ. ಇನ್ನೊಂದು ಗುರುಪೂರ್ಣಿಮೆ ಮಹೋತ್ಸವ.
ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ದೇಹತ್ಯಾಗ ಮಾಡಿ ಬಯಲಲ್ಲಿ ಬಯಲಾಗಿ ಒಂದು ವರ್ಷವಾದ ಪ್ರಯುಕ್ತ 2024 ರ ಜನೇವರಿ 1 ಮತ್ತು 2 ರಂದು ಗುರುನಮನ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಶ್ರೀಗಳಿಗೆ ಭಕ್ತಿಯ ನಮನ ಸಲ್ಲಿಸಲಾಯಿತು. ಈ ಕಾರ್ಯಕ್ರಮ ಪ್ರತೀ ವರ್ಷ ಆಶ್ರಮದಲ್ಲಿ ಆಚರಿಸುವ ಗುರುಪೂರ್ಣಿಮೆ ಮಹೋತ್ಸವ ನೆನಪಿಸುವಂತೆ ದೊಡ್ಡ ಪ್ರಮಾಣದಲ್ಲಿಯೇ ನಡೆಯಿತು. ಅದೇ ಸಂದರ್ಭದಲ್ಲಿ ಈ ವರ್ಷದಿಂದ ಇನ್ನು ಮುಂದೆ ಆಶ್ರಮದಲ್ಲಿ ಜನೇವರಿಯಲ್ಲಿ ಗುರುನಮನ ಮಹೋತ್ಸವ, ಜುಲೈನಲ್ಲಿ ಗುರುಪೂರ್ಣಿಮೆ ಮಹೋತ್ಸವ ಕಾರ್ಯಕ್ರಮಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತವೆ ಎಂದು ಪ್ರಕಟಿಸಲಾಯಿತು.
ಅದೇ ರೀತಿ ಪ್ರತಿ ವರ್ಷದಂತೆ ಈ ವರ್ಷವೂ ಇದೇ ಜುಲೈ 21 ರಂದು ರವಿವಾರ ವೇದಾಂತಕೇಸರಿ ಪರಮಪೂಜ್ಯ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಸ್ಮರಣೋತ್ಸವ ಹಾಗೂ ಗುರುಪೂರ್ಣಿಮೆ ಮಹೋತ್ಸವವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು
ನಾಡಿನ ನಾನಾ ಭಾಗಗಳಿಂದ ವಿಜಯಪುರ ಜ್ಷಾನಯೋಗಾಶ್ರಮಕ್ಕೆ ಭಕ್ತಸಾಗರವೇ ಹರಿದು ಬಂದಿತ್ತು. ಆಶ್ರಮ ರಸ್ತೆಯಲ್ಲಿ ಇಂದು ದಿನವಿಡೀ ಜನ ಹಾಗೂ ವಾಹನಗಳ ದಟ್ಟಣೆ ಇತ್ತು. ಎಲ್ಲಿ ನೋಡಿದಲ್ಲಿ ಜನವೋ ಜನ. ಪ್ರವಾಹೋಪಾದಿಯಲ್ಲಿ ಭಕ್ತರು ಆಶ್ರಮಕ್ಕೆ ಆಗಮಿಸುತ್ತಿದ್ದ ದೃಶ್ಯ ಕಂಡುಬಂತು. ಲಕ್ಷಾಂತರ ಜನ ಭಕ್ತರು ಸರತಿ ಸಾಲಿನಲ್ಲಿ ನಿಂತು ಪ್ರಣವಮಂಟಪದ ವೇದಾಂತಕೇಸರಿ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಕರ್ತೃ ಗದ್ದುಗೆಯ ದರ್ಶನ ಪಡೆದು ಭಕ್ತಿಭಾವದಲ್ಲಿ ಮಿಂದೆದ್ದರು.
ಗುರುಪೂರ್ಣಿಮೆ ಮಹೋತ್ಸವದ ಅಂಗವಾಗಿ ಆಶ್ರಮದಲ್ಲಿ ಇಂದು ಬೆಳಗಿನಜಾವ ಜಪಯಜ್ಞ, ವೇದಾಂತಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಪ್ರವಚನದ ಧ್ವನಿಸುರುಳಿ ಪ್ರಸಾರ ಮಾಡಲಾಯಿತು. ನಂತರ ಆಶ್ರಮದ ಅಧ್ಯಕ್ಷಗುರುಗಳಾದ ಶ್ರೀ ಬಸವಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನದೊಂದಿಗೆ ಪ್ರಣವಮಂಟಪದಲ್ಲಿ ಪೂಜಾ ಕಾರ್ಯಕ್ರಮ ಜರುಗಿತು. ನಾಡಿನ ಹಲವಾರು ಪೂಜ್ಯರು ಹಾಗೂ ಅಸಂಖ್ಯಾತ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಭಕ್ತಸಮೂಹದಿಂದ “ಶಿವಾಯ ನಮ: ಓಂ” ಎಂಬ ಮಂತ್ರಪಠಣ ಆಶ್ರಮದ ತುಂಬೆಲ್ಲ ಅನುರಣಿಸಿತು.
ಗುರುಪೂರ್ಣಿಮೆ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಹಲವು ಆಧ್ಯಾತ್ಮಿಕ ಪುಸ್ತಕಗಳ ಬಿಡುಗಡೆ, ಶಾಲಾ ಮಕ್ಕಳಿಂದ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಆಶ್ರಮದ ಆವರಣದಲ್ಲಿ ವೇದಾಂತಕೇಸರಿ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಹಾಗೂ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳವರ ಭಾವಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಶ್ರೀಗಳ ಬಾಲ್ಯದ ಹಾಗೂ ಬಗೆಯ ಪ್ರವಚನ ಹೇಳುವ ವಿವಿಧ ಬಗೆಯ ಭಾವಚಿತ್ರಗಳು ಭಕ್ತರ ಮನಸೂರೆಗೊಂಡವು.
ಆಶ್ರಮಕ್ಕೆ ಬರುವ ಭಕ್ತರಿಗೆ ನಿರಂತರ ಮಹಾಪ್ರಸಾದದ ವ್ಯವಸ್ಥೆಯೂ ಇತ್ತು. ದಿನವಿಡೀ ದಾಸೋಹ ನಡೆಯಿತು. ಭಕ್ತರು ಶಾಂತತೆಯಿಂದ ಆಶ್ರಮದ ವನಸಿರಿಯ ಮಧ್ಯೆ ಕುಳಿತು ರುಚಿ-ರುಚಿಯಾದ ಸಜ್ಜಕ, ಬಿಸಿ-ಬಿಸಿಯಾದ ಅನ್ನ – ಸಾಂಬಾರದ ಸವಿಯನ್ನು ಸವಿದು ಸಂತೃಪ್ತಿಪಟ್ಟರು.
ನಗರದ ಗೆಜ್ಜಿ ಅಕಾಡೆಮಿ ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ತಮಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.

