ಸಿಂದಗಿ: ಮಳೆಗಾಲದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ತೀವ್ರವಾದ ಜ್ವರ, ತಲೆ ನೋವು, ವಾಂತಿ, ಮಾಂಸ ಖಂಡಗಳಲ್ಲಿ ನೋವು ಕಂಡು ಬಂದಲ್ಲಿ ಡೆಂಘೀ ಜ್ವರದ ಲಕ್ಷಣಗಳಾಗಿವೆ. ನಿರ್ಲಕ್ಷö್ಯ ವಹಿಸದೆ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ಹೇಳಿದರು.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಿಂದಗಿ ತಾಲೂಕು ಆಯುಷ್ಯ ಘಟಕದ ಸಹಯೋಗದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಹಮ್ಮಿಕೊಂಡ ಡೆಂಘೀ ವಿರೋಧಿ ಮಾಸಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಬಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಡೆಂಘೀ ಹರಡಲು ಪ್ರಮುಖ ಕಾರಣ ಈಡಿಸ್ ಸೊಳ್ಳೆ. ಇವು ಹೆಚ್ಚಾಗಿ ನಿಂತ ನೀರಿನಲ್ಲಿ ಉತ್ಪತ್ತಿಯಾಗುತ್ತವೆ. ನೀರಿನ ಟ್ಯಾಂಕರ್, ಬಿಂದಿಗೆ ಸ್ವಚ್ಚಗೊಳಿಸುತ್ತಾ ಯಾವಾಗಲೂ ಮುಚ್ಚಿಡುವ ಮುಖಾಂತರ ಸೊಳ್ಳೆ ಉತ್ಪತ್ತಿ ತಡೆಗಟ್ಟಬೇಕು. ವಾರಕ್ಕೊಮ್ಮೆ ಬೇವಿನ ತಪ್ಪಲಿನ ಹೊಗೆ ಹಾಯಿಸಬೇಕು ಎಂದರು.
ಈ ವೇಳೆ ಡಾ.ಮಹಾಂತೇಶ ಹಿರೇಮಠ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ವಾಯ್.ಚೌಡಕಿ, ಮಾತನಾಡಿ, ವಿದ್ಯಾರ್ಥಿಗಳು ಆರೋಗ್ಯದೆಡೆಗೆ ಹೆಚ್ಚಿನ ಗಮನ ಹರಿಸಬೇಕು. ಉತ್ತಮ ಆಹಾರ ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಕ್ಕಳಿಗೆ ವಯಸ್ಸಿನುಗುಣವಾಗಿ ಲಸಿಕೆ ಹಾಕಿಸಬೇಕು. ಮನೆ ಹಾಗೂ ಸುತ್ತ ಮುತ್ತಲಿನ ಪರಿಸರ ಸ್ವಚ್ಛವಾಗಿಡಬೇಕು. ಮನೆಯ ಸುತ್ತಮುತ್ತಲು ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಆಶಾ ಕಾರ್ಯಕರ್ತೆಯರು ಸಮೀಕ್ಷೆಗೆ ಬಂದಾಗ ಸಹಕರಿಸಿ, ಸೊಳ್ಳೆ ಉತ್ಪತ್ತಿ ತಡೆಯವಲ್ಲಿ ಕೈಜೋಡಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸರಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಎನ್.ಆರ್.ಗಂಗನಳ್ಳಿ, ಬಿ.ಎನ್. ಬಿರಾದಾರ, ಶಶಿಧರ ಅವಟಿ, ಎಸ್.ಎಸ್.ಸುರಪುರ ಗುಲಾಬ ಮೋರಟಗಿ ಸೇರಿದಂತೆ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

