ಇಟ್ಟಂಗಿಹಾಳದಲ್ಲಿ ಜಲಧೂತ ಜಾಗೃತಿ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ
ವಿಜಯಪುರ: ನೀರು ಅಮೃತಕ್ಕೆ ಸಮಾನ, ನೀರಿದ್ದರೆ ಮಾತ್ರ ಜೀವ ಹಾಗೂ ಜೀವನ, ನೀರಿನ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದ್ದು, ನೀರನ್ನು ಹಿತವಾಗಿ ಬಳಸಿದಾಗ ಪ್ರತಿ ಜೀವಿಯ ಬದುಕು ಬಂಗಾರವಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್.ನಾಗೂರ ಕರೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಇಟ್ಟಂಗಿಹಾಳ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಜಲಧೂತ ಜಾಗೃತಿ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನೀರಿಲ್ಲದೇ ಜೀವವಿಲ್ಲ, ನೀರು ಇಲ್ಲದಿದ್ದರೆ ಉಸಿರಾಟ ನಡೆಯುವುದಿಲ್ಲ, ಪ್ರತಿ ಹನಿ ನೀರಿಗೂ ತುಂಬಾ ಬೆಲೆಯಿದೆ. ಹನಿ ಹನಿ ಕೂಡಿದರೆ ಹಳ್ಳ ಎಂಬುದು ಗಾದೆ ಮಾತಿನಂತೆ ನಾವು ಪ್ರತಿಯೊಬ್ಬರು ನೀರನ್ನು ಮಿತವಾಗಿ ಬಳಸಿ ನೀರನ್ನು ಉಳಿಸುವ ಕಾರ್ಯ ಮಾಡಬೇಕು ಎಂದು ಅವರು ಹೇಳಿದರು.
ಜಲಧೂತ ಜಾಗೃತಿ ಜಾಥಾವು ನೀರಿನ ಮಹತ್ವ ಸಾರುವ ವಿವಿಧ ಘೋಷವಾಕ್ಯಗಳೊಂದಿಗೆ ಶಾಲೆಯ ಸುತ್ತಮುತ್ತ ಹಾಗೂ ಊರಿನ ಓಣಿ-ಓಣಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು.
ಈ ಸಂದರ್ಭದಲ್ಲಿ ವಿವಿಧ ಶಿಕ್ಷಕರು, ಊರಿನ ಹಿರಿಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು

