ಉತ್ತರ ಕರ್ನಾಟಕ ಭಾಗದ ರೈತರ ಜೀವನಾಡಿ ಕೃಷ್ಣೆಗೆ ಇಂದು ವಿಶೇಷ ಪೂಜೆ & ಬಾಗಿನ ಅರ್ಪಣೆ
ವಿಜಯಪುರ: ಉತ್ತರ ಕರ್ನಾಟಕ ಭಾಗದ ರೈತರ ಜೀವನಾಡಿ ಎಂದೇ ಕರೆಯಲ್ಪಡುವ ಕೃಷ್ಣಾನದಿಯ ಉಗಮಸ್ಥಾನವಾದ ಮಹಾರಾಷ್ಟ್ರದ ಪಂಚಗಂಗಾ ಕ್ಷೇತ್ರದಲ್ಲಿ ತಮ್ಮ ನೇತೃತ್ವದಲ್ಲಿ ವಿಜಯಪುರ- ಬಾಗಲಕೋಟ ಅವಳಿ ಜಿಲ್ಲೆಯ ನೂರಾರು ರೈತರು ಜುಲೈ 21ರಂದು ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಲಿದ್ದಾರೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ತಿಳಿಸಿದರು.
ಅವರು ಶನಿವಾರ ನಗರದ ಹೊಸ ಪ್ರವಾಸಿ ಮಂದಿರದಿಂದ ನೂರಾರು ರೈತರು ಹಾಗೂ ಬಿಜೆಪಿ ಕಾರ್ಯಕರ್ತರ ಜೊತೆಯಲ್ಲಿ ಮಹಾಬಲೇಶ್ವರಕ್ಕೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಮಾತನಾಡಿದರು.
ಪ್ರತಿ ವರ್ಷದ ಕಡ್ಲಿಗರ ಹುಣ್ಣಿಮೆಯಂದು ತಾವು ದಂಪತಿ ಸಮೇತ ಈ ಭಾಗದ ಕೃಷಿಕರೊಂದಿಗೆ ಮಹಾಬಲೇಶ್ವರಕ್ಕೆ ತೆರಳಿ ಕೃಷ್ಣೆಯ ಉಗಮಸ್ಥಾನದಲ್ಲಿ ಉಡಿ ತುಂಬಿ, ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುವುದು ಕಳೆದ 15 ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಸಂಪ್ರದಾಯವಾಗಿದೆ ಎಂದು ಬೆಳ್ಳುಬ್ಬಿ ತಿಳಿಸಿದರು.
ಜುಲೈ 21 ರಂದು ಬೆಳಿಗ್ಗೆ 6ಕ್ಕೆ ಗುರುಪೂರ್ಣಿಮೆಯಂದು ಸಾತಾರಾದಿಂದ ಮಹಾಬಲೇಶ್ವರದ ಪಂಚಗಂಗಾ ಸನ್ನಿಧಿಗೆ ತೆರಳಿ ಬೆಳಿಗ್ಗೆ 10ಕ್ಕೆ ಕೃಷ್ಣಾ ನದಿಯ ಉಗಮಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ಜರುಗಲಿದೆ. ವಿವಿಧ ಸ್ವಾಮೀಜಿಗಳು, ಸಾತಾರಾದ ಶಾಸಕ, ಸಂಸದರೂ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದವರು ತಿಳಿಸಿದರು.
ಇನ್ನು ದಕ್ಷಿಣ ಕರ್ನಾಟಕದಲ್ಲಿ ಮಳೆ ಆವಾಂತರದಿಂದ ಆಗಿರುವ ಜೀವಹಾನಿ ಕುರಿತು ಅವರು ಸಂತಾಪ ಸೂಚಿಸಿದರು.

