ಕೆಂಭಾವಿ: ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಅನಧಿಕೃತವಾಗಿ ಉಸುಕು ದಾಸ್ತಾನು ಮಾಡಿ ಒಂದು ಲೋಡ್ ಉಸುಕಿಗೆ 25 ರಿಂದ 35 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿರುವ ದಲ್ಲಾಳಿಗಳ ಅವ್ಯವಹಾರ ಹಗಲಲ್ಲಿಯೇ ರಾಜಾರೋಷವಾಗಿ ನಡೆಯುತ್ತಿದ್ದು, ಲೋಕೋಪಯೋಗಿ ಬಂದರು ಮತ್ತು ಗಣಿಗಾರಿಕೆ ಇಲಾಖೆ, ತಾಲ್ಲೂಕಾಡಳಿತ, ಪೋಲೀಸ್ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆಂದು ದಲಿತ ಮುಖಂಡರಾದ ಮರೆಪ್ಪ ಎಂ ಕಟ್ಟಿಮನಿ ಹಾಗೂ ಬಸವರಾಜ ಮಾಳಳ್ಳಿಕರ್ ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುರಪುರ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದ ಅವರು, ಚುನಾವಣಾ ಪೂರ್ವದಲ್ಲಿ ಬಂದಾಗಿದ್ದ ಮರಳು ಮಾರಾಟ ರಾಯಲ್ಟಿ ಇತ್ತೀಚೆಗೆ ಆರಂಭಗೊಂಡು ಕೆಲವು ದಲ್ಲಾಳಿಗಳು ಸರ್ಕಾರಕ್ಕೆ ಒಂದೇ ರಾಯಲ್ಟಿ ಮೊತ್ತ ಸಂದಾಯ ಮಾಡಿ ಹತ್ತು ಲಾರಿ ಉಸುಕು ತುಂಬಿಕೊಂಡು ಬರುತ್ತಿದ್ದಾರೆ. ನೂರಾರು ಲಾರಿ ಉಸುಕು ಎಪಿಎಂಸಿ ಜಾಗದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿಕೊಂಡು, ರಾಯಲ್ಟಿ ಬಂದಾದ ಮೇಲೆ ಅತ್ಯಧಿಕ ಬೆಲೆಗೆ ವಿಜಯಪುರ ಹಾಗೂ ಕಲಬುರ್ಗಿ ಜಿಲ್ಲೆಗಳಿಗೆ ಮಾರಾಟ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಎಗ್ಗಿಲ್ಲದೇ ನಡೆಯುತ್ತಿರುವ ಮರುಳು ಮಾಫಿಯಾ ಮಟ್ಟಹಾಕಿ, ಜನಸಾಮಾನ್ಯರು ಮನೆ ಕಟ್ಟಿಕೊಳ್ಳಲು ಕಡಿಮೆ ಬೆಲೆಗೆ ಉಸುಕು ದೊರೆಯುವಂತಾಗಲಿ ಎಂದು ಅವರು ಒತ್ತಾಯಿಸಿದ್ದಾರೆ.
ಸುದ್ದಿ ತಿಳಿದ ಸುರಪುರ ತಹಸೀಲ್ದಾರ್ ವಿಜಯಕುಮಾರ ಸ್ಥಳಕ್ಕೆ ಬರುವ ಮುನ್ನವೇ ಎಚ್ಚೆತ್ತುಕೊಂಡು ದಲ್ಲಾಳಿಗಳು ಉಸುಕು ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ ಎಂದು ಸ್ಥಳದಲ್ಲಿದ್ದ ಬಸವರಾಜ ಮಾಳಳ್ಳಿಕರ್ ತಹಸೀಲ್ದಾರ್ ಗಮನಕ್ಕೆ ತಂದಿದ್ದಾರೆ.
ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಉಸುಕು ದಾಸ್ತಾನು ಮಾಡಿ ಸರ್ಕಾರಕ್ಕೂ ಹಾಗೂ ಸಾರ್ವಜನಿಕರಿಗೂ ವಂಚಿಸುತ್ತಿದ್ದ, ದಲ್ಲಾಳಿಗಳ ಮೇಲೆ ದಂಡಾಧಿಕಾರಗಳು ಸೂಕ್ತ ಕ್ರಮ ಕೈಗೊಳ್ಳುವರೇ ಎಂಬುದು ಕಾದು ನೋಡಬೇಕಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

