ಅವಳಿ ಜಿಲ್ಲೆಯ ನೂರಾರು ರೈತರು ಭಾಗಿ | ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ದಂಪತಿ ನೇತೃತ್ವ
ಆಲಮಟ್ಟಿ: ಉತ್ತರ ಕರ್ನಾಟಕ ಭಾಗದ ರೈತರ ಜೀವನಾಡಿ ಎಂದೇ ಕರೆಯಲ್ಪಡುವ ಕೃಷ್ಣಾನದಿಯ ಉಗಮಸ್ಥಾನವಾದ ಮಹಾರಾಷ್ಟ್ರದ ಪಂಚಗಂಗಾ ಕ್ಷೇತ್ರದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ಅವಳಿ ಜಿಲ್ಲೆಯ ನೂರಾರು ರೈತರು ಜು.21 ರಂದು ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಿದ್ದಾರೆ.
ಪ್ರತಿವರ್ಷದ ಕಡ್ಲಿಗರ ಹುಣ್ಣಿಮೆಯಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ದಂಪತಿ ಸಮೇತರಾಗಿ ಈ ಭಾಗದ ಕೃಷಿಕರೊಂದಿಗೆ ಮಹಾಬಲೇಶ್ವರಕ್ಕೆ ತೆರಳಿ ಕೃಷ್ಣೆಯ ಉಗಮಸ್ಥಾನದಲ್ಲಿ ಉಡಿಯನ್ನು ತುಂಬಿ, ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುವುದು ಕಳೆದ 15 ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಸಂಪ್ರದಾಯ.
ಅದೇ ರೀತಿ ಈ ಬಾರಿಯೂ ಮಹಾಬಲೇಶ್ವರಕ್ಕೆ ಬರಲು ಆಸಕ್ತಿ ಇರುವ ವಿಜಯಪುರ ಬಾಗಲಕೋಟ ಜಿಲ್ಲೆಯ ರೈತಮಿತ್ರರು ಜು.20 ರಂದು ಬೆಳಿಗ್ಗೆ 11 ಕ್ಕೆ ವಿಜಯಪುರ ಅಥಣಿ ರಸ್ತೆಯಲ್ಲಿರುವ ಪ್ರವಾಸಿ ಮಂದಿರದ ಬಳಿ ಬರಬೇಕು. ಅಲ್ಲಿಂದ ಮಧ್ಯಾಹ್ನ 12 ಕ್ಕೆ ತಿಕೋಟಾ, ಬಾಬಾನಗರ, ಬಿಜ್ಜರಗಿ, ಕನಮಡಿ, ಜತ್ತ, ಕರಾಡ, ಮೂಲಕ ಸಾತಾರ ನಗರ ತಲುಪಿ ಹಳೆಯ ಕೊಲ್ಹಾಪುರ ರಸ್ತೆಯ ಗೂಡೋಲಿ ಬಳಿ ಇರುವ ಶಿವರಾಜ್ ಪೆಟ್ರೋಲ್ ಬಂಕ್ ಹತ್ತಿರದ ಅಕ್ಷತಾ ಮಂಗಲ ಭವನದಲ್ಲಿ ರಾತ್ರಿ ವಾಸ್ತವ್ಯ ಮಾಡಲಾಗುವುದು.
ಜು.21 ರಂದು ಬೆಳಿಗ್ಗೆ 6 ಕ್ಕೆ ಗುರುಪೂರ್ಣಿಮೆಯಂದು ಸಾತಾರಾದಿಂದ ಮಹಾಬಲೇಶ್ವರದ ಪಂಚಗಂಗಾ ಸನ್ನಿಧಿಗೆ ತೆರಳಿ 10 ಕ್ಕೆ ಕೃಷ್ಣಾ ನದಿಯ ಉಗಮಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ಜರುಗಲಿದೆ. ಪೂಜಾ ಕಾರ್ಯಕ್ರಮದಲ್ಲಿ ವಿವಿಧ ಸ್ವಾಮೀಜಿಗಳು, ಸಾತಾರಾದ ಶಾಸಕ, ಸಂಸದರೂ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಮಹಾಬಲೇಶ್ವರಕ್ಕೆ ಆಗಮಿಸಲು ಅಪೇಕ್ಷಿಸುವ ರೈತಾಪಿ ಜನತೆ ಆನಂದ ಬಿಷ್ಟಗೊಂಡ (9845769528), ವಿಜಯ ಬಾಟಿ (6360077801) ಮತ್ತು ಸಾತಾರದಲ್ಲಿ ರಮೇಶ ಕುಂಬಾರ (9922815920) ಇವರನ್ನು ಸಂಪರ್ಕಿಸಬೇಕು ಎಂದು ಆನಂದ ಬಿಷ್ಟಗೊಂಡ ತಿಳಿಸಿದ್ದಾರೆ.
