ಆಲಮೇಲದಲ್ಲಿ ರೂ.೩.೫ ಕೋಟಿ ವೆಚ್ಚದ ಕೆರೆ ಅಭಿವೃದ್ದಿ ಕಾಮಗಾರಿಗೆ ಶಾಸಕರಿಂದ ಚಾಲನೆ
ಆಲಮೇಲ: ಪಟ್ಟಣದ ೫೪ ಎಕರೆ ವಿಶಾಲವಾದ ಕೆರೆಯನ್ನು ಅಭಿವೃದ್ದಿಗೊಳಿಸಿ, ಕೆರೆಯ ಸುತ್ತಲೂ ತಡೆಗೊಡೆ ನಿರ್ಮಿಸಿ ಸಾರ್ವಜನಿಕರಿಗೆ ವಾಯುವಿಹಾರದ ವ್ಯವಸ್ಥೆ ಮಾಡುವ ಮೂಲಕ ಮಾದರಿ ಕೆರೆಯನ್ನಾಗಿ ಮಾಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಭಾನುವಾರ ಸಣ್ಣ ನೀರಾವರಿ ಇಲಾಖೆಯಿಂದ ೩.೫ ಕೋಟಿ ವ್ಯೆಚ್ಚದ ಕೆರೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪಟ್ಟಣದ ಕೆರೆಯಲ್ಲಿನ ಹೊಳು ತಗೆದು ಮಳೆ ನೀರು ಮತ್ತು ಕಾಲುವೆ ಮೂಲಕ ಕೆರೆ ತುಂಬುವ ಯೋಜನೆ ಇದಾಗಿದ್ದು ಇದರಿಂದ ಪಟ್ಟಣದ ಜನರ ನೀರಿನ ಸಮಸ್ಯೆ ನಿವಾರಿಸಲಿದೆ ಮತ್ತು ಅಂತರ್ಜಲ ಹೆಚ್ಚಾಗಿ ಸುತ್ತಲಿನ ರೈತರಿಗೂ ಅನಕೂಲವಾಗಲಿದೆ. ೫೪ ಎಕರೆ ಕೆರೆಯ ಜಾಗದಲ್ಲಿ ಸಂಪೂರ್ಣ ಹೂಳೆತ್ತಿ ಸುತ್ತಲೂ ತಡೆಗೋಡೆಗಳನ್ನು ನಿರ್ಮಿಸಿ ವೀಕ್ಷಣೆಯ ಸ್ಥಳವನ್ನಾಗಿ ಮಾಡಲಾಗುವುದು ಎಂದರು.
ನಮ್ಮ ತಂದೆ ದಿ. ಎಂ.ಸಿ. ಮನಗೂಳಿ ಅವರು ಸಿಂದಗಿ ನಗರದ ಜನರಿಗೆ ನೀರಿನ ಬವಣೆ ನೀಗಿಸಲು ಕೆರೆ ಅಭಿವೃದ್ದಿಗೊಳಿಸಿ ಬೇರೆಡೆಯಿಂದ ಪೈಪಲೈನ್ ಮೂಲಕ ಕೆರೆಗೆ ನೀರು ತುಂಬಿಸುವ ಮೂಲಕ ಸಿಂದಗಿ ನಗರಕ್ಕೆ ಶಾಶ್ವತ ಯೋಜನೆ ಮಾಡಿದಂತೆ ಆಲಮೇಲ ಪಟ್ಟಣದ ಕೆರೆಯನ್ನು ಅಭಿವೃದ್ದಿಗೊಳಿಸುವ ಮೂಲಕ ನಮ್ಮ ತಂದೆಯ ಹಾದಿಯಲ್ಲಿ ಕ್ಷೇತ್ರವನ್ನು ಸಮಗ್ರ ಅಭಿವೃದ್ದಿ ಮಾಡುತ್ತೇನೆ. ಗ್ಯಾರೆಂಟಿ ಯೋಜನೆಯಿಂದ ಅಭಿವೃದ್ದಿ ಕೆಲಸಕ್ಕೆ ಅನುದಾನದ ಕೊರತೆ ಇದೆ, ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಹೇಳಿದರು.
ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಕರೂರ ಮಾತನಾಡಿ, ಕೆರೆ ಅಭಿವೃದ್ದಿಗಾಗಿ ಸಣ್ಣ ನೀರಾವರಿ ಇಲಾಖೆಯಿಂದ ೩.೫ ಕೋಟಿ ಮಂಜೂರಾಗಿದ್ದು. ಈ ಮೊತ್ತದಲ್ಲಿ ಕೆರೆಯಲ್ಲಿನ ಹೂಳೆತ್ತಿ ಸುತ್ತಲೂ ಕಲ್ಲಿನ ತಡೆಗೊಡೆಗಳನ್ನು ನಿರ್ಮಿಸಿ ಮಳೆಯಿಂದ ಬರುವ ನೀರು ಮತ್ತು ಕಾಲುವೆ ಮೂಲಕ ಕೆರೆ ತುಂಬಿಸುವ ನಾಲೆ ನಿರ್ಮಿಸಲಾಗುವದು ಮತ್ತು ಕೆರೆಯ ಮೇಲ್ಬಾಗದಲ್ಲಿ ಮನೆಗಳ ಬಳಕೆಯ ನೀರು ಚರಂಡಿ ನಿರ್ಮಿಸಿ ಚರಂಡಿಗೆ ಹರಿಯುವಂತ ವ್ಯೆವಸ್ಥೆ ಮಾಡಲಾಗುವದು ಎಂದು ಹೇಳಿದರು.
ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುರೇಶ ನಾಯಕ, ಗುತ್ತಿಗೆದಾರ ಮುತ್ತು ಮುಂಡೆವಾಡಿ, ಪ.ಪಂ ಸದಸ್ಯ ಅಶೋಕ ಕೊಳಾರಿ, ಸಾಧಿಕ ಸುಂಬಡ, ರಿಯಾಜ ಬಿಳವಾರ, ಮಲ್ಲು ಅಚಲೇರಿ, ಭಾಗ್ಯವಂತ ಆಲಮೇಲಕರ, ಮೈಬೂಬ ಮಸಳಿ, ದಯಾನಂದ ನಾರಾಯಣಕರ ಮುಂತಾದವರು ಇದ್ದರು.

