ಬಸವನಬಾಗೇವಾಡಿ: ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಮಣ್ಣೆತ್ತಿನ ಅಮವಾಸ್ಯೆ ಮರುದಿನ ಸಂಪ್ರದಾಯದಂತೆ ನಡೆದುಕೊಂಡು ಬಂದಿರುವ ರಾಮ-ಲಕ್ಷ್ಮಣ-ಸೀತಾ, ಹನುಮಂತ, ಸಿಂಧೂರ ಲಕ್ಷ್ಮಣ, ರಾಕ್ಷಸ ವೇಷಧಾರಿ ಪಾತ್ರಗಳ ಮೆರವಣಿಗೆ ಶನಿವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು.
ಸ್ವಾತಂತ್ರ್ಯ ಯೋಧರ ಗ್ರಾಮ ಮಸಬಿನಾಳ ಗ್ರಾಮದಲ್ಲಿ ಸ್ವಾತಂತ್ಯ ಹೋರಾಟ ನಡೆಯುವ ಸಂದರ್ಭದಲ್ಲಿ ಸಿಂಧೂರ ಲಕ್ಷ್ಮಣ ಅವರು ಮಣ್ಣೆತ್ತಿನ ಅಮವಾಸ್ಯೆ ದಿನ ಗ್ರಾಮಕ್ಕೆ ಬಂದಿರುತ್ತಾರೆ. ಮರುದಿನ ಆಗ ಬ್ರಿಟಿಷ ಪೊಲೀಸರು ಸಿಂಧೂರ ಲಕ್ಷ್ಮಣ ಅವರನ್ನು ಬಂಧಿಸಿಲು ಗ್ರಾಮಕ್ಕೆ ಬಂದಾಗ ಗ್ರಾಮದ ವಿರಕ್ತಮಠದ ಲಿಂ.ಶಿವಾನಂದ ಶಿವಯೋಗಿಗಳು ಸಿಂಧೂರ ಲಕ್ಷ್ಮಣ ಅವರನ್ನು ರಕ್ಷಿಸಲು ಗ್ರಾಮದ ಭಕ್ತಸಮೂಹಕ್ಕೆ ರಾಮ-ಲಕ್ಷ್ಮಣ-ಸೀತಾ, ಹನುಮಂತ, ಸಿಂಧೂರ ಲಕ್ಷ್ಮಣ, ರಾಕ್ಷಸ ವೇಷ ಧರಿಸುವಂತೆ ಸೂಚನೆ ನೀಡುತ್ತಾರೆ. ಅದರಂತೆ ಎಲ್ಲರೂ ಈ ವೇಷಗಳನ್ನು ಹಾಕಿಕೊಂಡು ಗ್ರಾಮದಲ್ಲಿ ಕಾಣಿಸಿಕೊಳ್ಳುತ್ತಾರೆ. ಸಿಂಧೂರ ಲಕ್ಷ್ಮಣ ಅವರನ್ನು ಬಂಧಿಸಲು ಬಂದ ಬ್ರಿಟಿಷರ ಪೊಲೀಸರು ಗ್ರಾಮದ ಬೀದಿ ಬೀದಿಗಳಲ್ಲಿ ರಾಮ-ಲಕ್ಷ್ಮಣ-ಸೀತಾ, ಹನುಮಂತ, ಸಿಂಧೂರ ಲಕ್ಷ್ಮಣ, ರಾಕ್ಷಸ ವಿವಿಧ ವೇಷಧಾರಿಗಳನ್ನು ಕಂಡು ಕಕ್ಕಾಬಿಕ್ಕಿಯಾಗಿ ಸಿಂಧೂರ ಲಕ್ಷ್ಮಣ ಅವರನ್ನು ಗುರುತಿಸಲು ವಿಫಲರಾಗಿ ಮರಳಿ ಹೋಗುತ್ತಾರೆ. ಸಿಂಧೂರ ಲಕ್ಷ್ಮಣ ಅವರನ್ನು ರಕ್ಷಿಸಿದ ಕೀರ್ತಿ ಗ್ರಾಮಕ್ಕೆ ಸಂದಿದೆ. ಮಣ್ಣೆತ್ತಿನ ಅಮವಾಸ್ಯೆ ಮರುದಿನ ಗ್ರಾಮದ ವಿರಕ್ತಮಠದ ಲಿಂ.ಶಿವಾನಂದ ಶಿವಯೋಗಿಗಳು ನಾಂದಿ ಹಾಡಿದ ಈ ಸಂಪ್ರದಾಯ ಇಂದಿಗೂ ಗ್ರಾಮದಲ್ಲಿ ಮುಂದುವರಿದಿದೆ ಎಂದು ಗ್ರಾಮದ ಬಸಲಿಂಗಯ್ಯ ಕೂಡಗಿಮಠ ಹೇಳುತ್ತಾರೆ.
ಈ ವರ್ಷ ರಾಮನ ವೇಷವನ್ನು ಪರಶು ಬಿರಗೊಂಡ, ಲಕ್ಷ್ಮಣ ವೇಷವನ್ನು ಯಮನೂರಿ ಬಿರಗೊಂಡ, ಸೀತಾ ವೇಷವನ್ನು ಜಟ್ಟಪ್ಪ ಹಾರಿವಾಳ, ಹನುಮಂತನ ವೇಷವನ್ನು ಮಾಳಪ್ಪ, ಸಂಗಮೇಶ ಶಿವರಾಜ ಮಂಜು, ಸಿಂಧೂರ ಲಕ್ಷ್ಮಣ ವೇಷವನ್ನು ಕಲ್ಲಪ್ಪ ಹಿರೇಕುರಬರ, ರಾಕ್ಷಸ ವೇಷವನ್ನು ರಾಮಲಿಂಗ ಯಮನೂರಿ ಹಾಕಿಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಮೆರವಣಿಗೆಯಲ್ಲಿ ಶಂಕರ ಹಿರೇಕುರಬರ, ಮುತ್ತು ಬಿರಗೊಂಡ, ರಾಮು ಕೆರಪ್ಪಗೋಳ, ಬಾಬು ಗಂಗಪ್ಪಗೋಳ, ಪರಮಾನಂದ ತೋಟದ, ರವಿ ಕತ್ನಳ್ಳಿ, ಮಂಜು ಬೀರಗೊಂಡ, ಮುದುಕಪ್ಪ ಬೈಚಬಾಳ, ಯಲಗೂರಿ ದಿಂಡವಾರ, ಬಾಬಗೌಡ ಪಾಟೀಲ, ರಾಜುಗೌಡ ಪಾಟೀಲ, ಅಪ್ಪಸಾಹೇಬ ಮನಗೊಂಡ, ಬಸಲಿಂಗಯ್ಯ ಕೂಡಗಿಮಠ, ಬಸವರಾಜ ಬಂದಾಳ, ಶಂಕರಗೌಡ ಬಿರಾದಾರ ಸೇರಿದಂತೆ ಇತರರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

