ಬಸವನಬಾಗೇವಾಡಿ: ವಿದ್ಯಾರ್ಥಿ ದೆಸೆಯಿಂದಲೇ ಸಾಮಾಜಿಕ ಸೇವೆಯ ಮನೋಭಾವ ಮತ್ತು ಸಹಬಾಳ್ವೆಯ ಜೀವನ ಶೈಲಿಯನ್ನು ರೂಪಿಸಿಕೊಳ್ಳುವಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವು ಮಹತ್ವದ ಪಾತ್ರ ವಹಿಸುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಎಸ್.ಎಸ್.ಬಿರಾದಾರ ಹೇಳಿದರು.
ತಾಲೂಕಿನ ಕರಿಭಂಟನಾಳ ಗ್ರಾಮದ ಅರುಣೋದಯ ಪ್ರೌಢಶಾಲೆಯಲ್ಲಿ ಶನಿವಾರ ಬಸವನಬಾಗೇವಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಏಳು ದಿನಗಳ ಕಾಲ ನಡೆಯಲಿರುವ ಎನ್ಎಸ್ಎಸ್ ಶಿಬಿರದಲ್ಲಿ ವಿದ್ಯಾರ್ಥಿಗಳು ಕ್ರಿಯಾಶೀಲವಾಗಿ ಪ್ರತಿಯೊಂದು ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವಂತಾಗಬೇಕು. ಇದರಿಂದ ಪರಿವರ್ತನೆ ಹೊಂದಲು ಅವಕಾಶ ಸಿಗಲಿದೆ. ಈ ಶಿಬಿರದಲ್ಲಿ ಶ್ರಮದಾನದ ಮಹತ್ವವನ್ನು ತಿಳಿದುಕೊಳ್ಳಬಹುದಾಗಿದೆ. ಶಿಬಿರಾರ್ಥಿಗಳು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ನೀಲಪ್ಪ ಹೊಸಮನಿ ಮಾತನಾಡಿ, ಪಠ್ಯದ ಜೊತೆಗೆ ಸೇವಾ ಮನೋಭಾವ ಬರುವ ಉದ್ದೇಶದಿಂದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ ಹಮ್ಮಿಕೊಳ್ಳಲಾಗುತ್ತದೆ. ನಮ್ಮ ಕಾಲೇಜಿನಿಂದ ಜು.೬ ರಿಂದ ೧೨ ರವರೆಗೆ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ಈ ಶಿಬಿರದಲ್ಲಿ ಪರಿಸರ ಸಂರಕ್ಷಣೆಯಲ್ಲಿ ಸಮಾಜದ ಪಾತ್ರ ಹಾಗೂ ಸಸಿ ನೆಡುವದು, ರಾಷ್ಟ್ರೀಯ ಸೇವಾ ಯೋಜನೆಯ ಪ್ರಾಮುಖ್ಯತೆ, ರಕ್ತದಾನದ ಮಹತ್ವ, ಕಾನೂನು ಅರಿವು ಕಾರ್ಯಕ್ರಮ, ರೈತರಿಗೆ ತೋಟಗಾರಿಕೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳು ಕುರಿತು ಸಂಬಂಧಿಸಿದ ವಿಷಯ ಪರಿಣಿತರಿಂದ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ಶ್ರಮದಾನ, ಸಾಂಸ್ಕ್ರತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಶಿಬಿರಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಸಾನಿಧ್ಯವನ್ನು ಮಲ್ಲಯ್ಯ ಸ್ವಾಮೀಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹುಣಶ್ಯಾಳ ಪಿಬಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಪ್ಪು ನಾಯಕ, ಪ್ರೊ.ರೇಣುಕಾ ಅಂಬಲಿ. ಡಾ.ಶ್ರೀಶೈಲ ಪೂಜಾರಿ, ಡಾ.ಪುಥಳಾ ಪಾಟೀಲ, ಡಾ.ಬಾನು ನಿಡಗುಂದಿ, ಲೀಲಾವತಿ, ವಿಜಯಲಕ್ಷ್ಮೀ ಇತರರು ಇದ್ದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ.ಎಚ್.ಎಂ.ನಾಟೀಕಾರ ಪ್ರಾಸ್ತವಿಕವಾಗಿ ಮಾತನಾಡಿದರು. ರಾಜೇಶ್ವರಿ ಪೂಜಾರಿ ಸ್ವಾಗತಿಸಿದರು. ಪ್ರಶಾಂತ ತೊನಶ್ಯಾಳ ನಿರೂಪಿಸಿದರು. ಭಾವನಾ ಬೀರಕಬ್ಬಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

