ಕಾರ್ಯನಿರತ ಪತ್ರಕರ್ತರ ಸಂಘ & ವಿತರಕರ ಸಂಘದಿಂದ ಪತ್ರಿಕಾ ವಿತರಕ ದಿ.ಮಲ್ಲಪ್ಪ ಮಂಗಾನವರ ಶ್ರದ್ಧಾಂಜಲಿ ಸಭೆ
ವಿಜಯಪುರ: ಕಳೆದ ಜು.೨ರಂದು ನಿಧನರಾದ ನಗರದ ಹಿರಿಯ ಪತ್ರಿಕಾ ವಿತರಕ ಮಲ್ಲಪ್ಪ ಆರ್.ಮಂಗಾನವರ ಅವರ ಶ್ರದ್ಧಾಂಜಲಿ ಸಭೆಯನ್ನು ನಗರದ ಹೊಸ ಪತ್ರಿಕಾ ಭವನದಲ್ಲಿ ಶನಿವಾರ ಆಚರಿಸಲಾಯಿತು.
ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪತ್ರಿಕಾ ವಿತರಕರ ಸಂಘ ಜಂಟಿಯಾಗಿ ಆಯೋಜಿಸಿದ ಈ ಸಭೆಯಲ್ಲಿ ದಿ.ಮಲ್ಲಪ್ಪ ಮಂಗಾನವರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಒಂದು ನಿಮಿಷ ಮೌನ ಆಚರಿಸಲಾಯಿತು.
ಈ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಮಾತನಾಡಿ, ಪತ್ರಿಕೆಯು ಸುದ್ದಿಮನೆಯಿಂದ ಓದುಗರ ಮನೆ ಬಾಗಿಲಿಗೆ ತಲುಪಲು ಪತ್ರಿಕಾ ವಿತರಕರ ಪಾತ್ರ ದೊಡ್ಡದು. ಈ ವೃತ್ತಿಯಲ್ಲಿ ೪೦ವರ್ಷಕ್ಕೂ ಅಧಿಕ ಕಾಲ ದಣಿವರಿಯದ ಸೇವೆ ಸಲ್ಲಿಸಿದವರು ದಿ.ಮಂಗಾನವರ ಅವರು. ಈ ವೃತ್ತಿಯಿಂದಲೂ ಆರ್ಥಿಕವಾಗಿ ಸಬಲರಾಗಬಹುದು ಎಂದು ಅವರು ತೋರಿಸಿಕೊಟ್ಟರು. ಅವರ ಕಾಯಕ ನಿಷ್ಠೆ ವಿತರಕರಿಗೆ ಮಾದರಿಯಾಗಿದೆ ಎಂದು ಹೇಳಿದರು.
ವಿಜಯ ಕರ್ನಾಟಕ ಪತ್ರಿಕೆ ಪ್ರಸಾರಾಂಗ ವಿಭಾಗದ ರಮೇಶ ವಿಟ್ಲಾಪೂರ ಮಾತನಾಡಿ, ದಿ.ಮಲ್ಲಪ್ಪ ಮಂಗಾನವರ ಅವರು, ಹತ್ತಾರು ಪತ್ರಿಕೆಗಳ ವಿತರಕರಾಗಿ ಎಲ್ಲರಿಗೂ ಪ್ರತಿ ತಿಂಗಳು ನಿಯಮಿತವಾಗಿ ಬಿಲ್ ಪಾವತಿಸುತ್ತಿದ್ದರು. ಹಲವಾರು ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದ ಅವರು ತಮ್ಮ ವೃತ್ತಿಯಲ್ಲಿ ಎಂದೂ ನಷ್ಠ ಅನುಭವಿಸಲಿಲ್ಲ. ಅವರ ನಿಧನದಿಂದಾಗಿ ಪತ್ರಿಕಾ ವಿತರಕರ ಕ್ಷೇತ್ರ ಬಡವಾಗಿದೆ ಎಂದರು.
ಕಾನಿಪ ಸಂಘದ ಪ್ರ.ಕಾರ್ಯದರ್ಶಿ ಮೋಹನ ಕುಲಕರ್ಣಿ, ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಮಹೇಶ ಶೆಟಗಾರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಕೆ.ಕುಲಕರ್ಣಿ, ಕಾರ್ಯದರ್ಶಿ ಅವಿನಾಶ ಬಿದರಿ, ಖಜಾಂಚಿ ರಾಹುಲ್ ಆಪ್ಟೆ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಗುರು ಗದ್ದನಕೇರಿ, ಬಸವರಾಜ ಉಳ್ಳಾಗಡ್ಡಿ, ವಿನೋದ ಸಾರವಾಡ, ಸುನೀಲ ಕಾಂಬಳೆ, ಸುನೀಲ ಗೋಡೆನ್ನವರ, ಸಂಗಮೇಶ ಉತ್ನಾಳ, ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಗಣೇಶ ರುದ್ರಗಂಟಿ ಸೇರಿದಂತೆ ಹಲವರಿದ್ದರು.

