ತಾಪಂ-ಗ್ರಾಪಂ ಕಾರ್ಯಾಲಯಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಜಿ.ಪಂ.ಸಿಇಓ ರಿಷಿ ಆನಂದ ಸೂಚನೆ
ವಿಜಯಪುರ: ವಿಜಯಪುರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಗುರುವಾರ ವಿಜಯಪುರ ತಾಲೂಕಾ ಪಂಚಾಯತ್ ಕಚೇರಿ ಹಾಗೂ ಮದಭಾವಿ ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ದಿಢೀರವಾಗಿ ಭೇಟಿ ನೀಡಿ ಕಾರ್ಯವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.
ಮದಭಾವಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಸಿಬ್ಬಂದಿಯ ಹಾಜರಾತಿ ಹಾಗೂ ಸಿಬ್ಬಂದಿ ಇ-ಹಾಜರಾತಿ ವ್ಯವಸ್ಥೆ ಬಿಲ್ ಕಲೆಕ್ಟರ್ ಸಿಬ್ಬಂದಿಯು ತೆರಿಗೆ ವಸೂಲಾತಿ ಮಾಡುವ ಪಿ.ಓ.ಎಸ್ ಮಷಿನ್ ವ್ಯವಸ್ಥೆ, ಗ್ರಾಮ ಪಂಚಾಯತಿಯ ಸರಕಾರಿ ಗ್ರಂಥಾಲಯದಲ್ಲಿನನ ಮೂಲಭೂತ ಸೌಕರ್ಯಗಳಾದ ವಿದ್ಯುತ್ ವ್ಯವಸ್ಥೆ, ಓದುಗರಿಗೆ ಆಸನದ ವ್ಯವಸ್ಥೆ, ಗಾಳಿ, ಬೆಳಕು ಹಾಗೂ ಗ್ರಂಥಾಲಯದ ಪುಸ್ತಕಗಳನ್ನು ಇರಿಸಲು ಸ್ಥಳಾವಕಾಶ ಕುರಿತು ಪರಿಶೀಲನೆ ಮಾಡಿದರು.
ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಇಡಲು ಹೆಚ್ಚಿನ ರ‍್ಯಾಕ್ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಓದಲು ಈಗ ಇರುವ ಪುಸ್ತಕಗಳಷ್ಟೇ ಅಲ್ಲದೇ ಸ್ಪರ್ಧಾತ್ಮಕ ಪುಸ್ತಕ, ಸ್ಪೋಕನ್ ಇಂಗ್ಲೀಷ್ ಹಾಗೂ ಇತರೆ ಉತ್ತಮ ವಿಷಯಗಳನ್ನೊಳಗೊಂಡ ಪುಸ್ತಕಗಳನ್ನು ಒದಗಿಸಬೇಕು. ಗ್ರಂಥಾಲಯವು ವಿಶಾಲವಾಗಿರುವುದರಿಂದ ಹೆಚ್ಚಿನ ವಿದ್ಯುತ್ ದೀಪಗಳನ್ನು ಗ್ರಂಥಾಲಯದಲ್ಲಿ ಅಳವಡಿಸಿ ಮಾದರಿ ಗ್ರಂಥಾಲಯವನ್ನಾಗಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಗ್ರಂಥಾಲಯದಲ್ಲಿ ಕಲ್ಪಿಸಲಾದ ಇಂಟರ್ನೆಟ್, ಕಂಪ್ಯೂಟರ್ ವ್ಯವಸ್ಥೆ ಹಾಗೂ ಇತರೆ ವ್ಯವಸ್ಥೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತಿಯ ಆವರಣದಲ್ಲಿರುವ ಶೌಚಾಲಯ, ಉದ್ಯಾನವನ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಆವರಣದ ಸ್ವಚ್ಛತೆ ಕುರಿತು ಪರಿಶೀಲಿಸಿ, ಉದ್ಯಾನವನವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕು. ಗ್ರಾಮ ಪಂಚಾಯತಿಯ ಎಲ್ಲ ಸಿಬ್ಬಂದಿಗಳು ಪ್ರತಿದಿನ ನಿಗದಿತ ಸಮಯದಲ್ಲಿ ಹಾಜರಾಗಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು. ತೆರಿಗೆ ವಸೂಲಾತಿ ಹೆಚ್ಚಿಸಬೇಕು. ಗ್ರಾಮ ಪಂಚಾಯತಿ ಆವರಣದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಪ್ರಗತಿ ಹಂತದಲ್ಲಿರುವ ಮಳೆನೀರು ಕೊಯ್ಲು ಘಟಕ ಹಾಗೂ ಸಂಜೀವಿನಿ ಎನ್. ಆರ್.ಎಲ್.ಎಮ್ ಶೆಡ್ ಕಾಮಗಾರಿಗಳು ಹಾಗೂ ಕಟ್ಟಡ ಕಾಮಗಾರಿ ಸಾಮಗ್ರಿಗಳನ್ನು ಪರಿಶೀಲಿಸಿ ಸದರಿ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಅವರು ಸೂಚನೆ ನೀಡಿದರು.
ವಿಜಯಪುರ ತಾಲೂಕ ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ನೀಡಿದ ಅವರು, ತಾಲೂಕ ಪಂಚಾಯತಿಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿ ಪರಿಶೀಲಿಸಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಯೋಜನೆಗಳಾದ ಮಹಾತ್ಮಗಾಂಧಿ ನರೇಗಾ ಯೋಜನೆ, ವಸತಿ ಯೋಜನೆ, ಸ್ವಚ್ಚ ಭಾರತ ಮಿಷನ್(ಗ್ರಾ.ಉ), ಸಕಾಲ, ಪಂಚಾಯತ್ ರಾಜ್ ವಿಷಯಗಳಾದ ತೆರಿಗೆ ವಸೂಲಾತಿ, ಆಸ್ತಿಗಳ ಸಮೀಕ್ಷೆ, ಗ್ರಂಥಾಲಯಗಳ ಡಿಜಿಟಲೀಕರಣ, ಇ-ಸ್ವತ್ತು, ಹಾಗೂ ವಿವಿಧ ವಿಷಯಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.
ತಾಲೂಕು ಪಂಚಾಯತಿಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಯವರು ಪ್ರತಿಯೊಬ್ಬರೂ ತಮಗೆ ವಹಿಸಿದ ಕರ್ತವ್ಯಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ, ವಿವಿಧ ಯೋಜನೆಗಳ ಪ್ರಗತಿಯನ್ನು ನಿಗದಿತ ಅವಧಿಯೊಳಗೆ ಗುರಿ ಸಾಧಿಸಬೇಕು. ಯಾವುದೇ ಪ್ರಕರಣಗಳು ಬಾಕಿ ಉಳಿಯದಂತೆ ನೋಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ವಿಜಯಪುರ ತಾಲೂಕಿನ ಎಲ್ಲ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮತ್ತು ಎಲ್ಲಾ ಸಿಬಂದಿಯವರಿಗೆ ಕಡ್ಡಾಯವಾಗಿ ಇ-ಹಾಜರಾತಿಯ ಮೂಲಕವೇ ವೇತನ ಪಾವತಿಸಬೇಕು, ಗ್ರಾಮ ಪಂಚಾಯತಗಳಲ್ಲಿ ಗ್ರಂಥಾಲಯಗಳ ಉನ್ನತೀಕರಣಕ್ಕಾಗಿ ತಾಲೂಕಿನ ಎಲ್ಲಾ ಪಂಚಾಯತಗಳಲ್ಲಿನ ಗ್ರಂಥಾಲಯಗಳನ್ನು ಡಿಜಟಲೀಕರಣ ಮಾಡಿ, ಅದಕ್ಕೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವಿಜಯಪುರ ತಾಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಹೊಂಗಯ್ಯ, ಸಹಾಯಕ ನಿರ್ದೇಶಕರು(ಗ್ರಾ.ಉ) ಖಾಸಿಮಸಾಬ ಮಸಳಿ, ಮಧ್ಯಾಹ್ನ ಉಪಹಾರ ಯೋಜನೆಯ ಸಹಾಯಕ ನಿರ್ದೇಶಕರಾದ ಎಸ್. ಎಸ್. ಕುಂಬಾರ, ತಾಲೂಕು ಪಂಚಾಯತಿಯ ವ್ಯವಸ್ಥಾಪಕರಾದ ವ್ಹಿ. ಎಮ್. ಬಿಸನಾಳ, ಸಹಾಯಕ ಲೆಕ್ಕಾಧಿಕಾರಿ ರಾಮು ಹುಲಗಬಾಳ, ಮದಭಾವಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಎಸ್. ಆರ್. ಕಟ್ಟಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುಜಾತಾ ಚಲವಾದಿ, ಉಪಾಧ್ಯಕ್ಷರಾದ ಕಣ್ಣಪ್ಪ ಪೂಜಾರಿ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಪ್ರಶಾಂತ ಸಜ್ಜನ, ತಾಲೂಕ ಪಂಚಾಯತಿಯ ಹಾಗೂ ಗ್ರಾಮ ಪಂಚಾಯತಿಯ ಎಲ್ಲ ಅಧಿಕಾರಿಗಳು, ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು.

