“ವೀಣಾಂತರಂಗ”- ವೀಣಾ ಹೇಮಂತ ಗೌಡ ಪಾಟೀಲ್, ಮುಂಡರಗಿ – ಗದಗ
ಬದುಕಿನ ಜ್ಯೋತಿಯನ್ನು ಉದ್ದೀಪಿಸುವ 3 ಅಗ್ನಿಗಳು
ಪಂಚ ಮಹಾಭೂತಗಳಿಂದ ಕೂಡಿರುವ ನಮ್ಮ ಶರೀರದಲ್ಲಿ ಮೂರು ವಿಧದ ಅಗ್ನಿಗಳಿವೆ. ಈ ಅಗ್ನಿಗಳು ನಮ್ಮ ಭೌತಿಕ ಶರೀರದ ದೈಹಿಕ,ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಅವುಗಳೆಂದರೆ ಜಠರಾಗ್ನಿ, ಮಾನಸ ಇಲ್ಲವೇ ಮನೋ ಅಗ್ನಿ ಮತ್ತು ಮೂರನೆಯದು ಭೂತಾಗ್ನಿ.
ಮೊದಲನೆಯದು ಜಠರಾಗ್ನಿ..
ನಮ್ಮ ದೇಹದ ಜೀರ್ಣಾಂಗ ವ್ಯೂಹಕ್ಕೆ ಸಂಬಂಧಪಟ್ಟದ್ದು ನಾವು ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳಲು ಅನುಕೂಲವಾಗುವಂತಹ ಆಮ್ಲಗಳನ್ನು ಬಿಡುಗಡೆ ಮಾಡುವುದರ ಮೂಲಕ ಉತ್ತಮ ಜೀರ್ಣ ಕ್ರಿಯೆಯ ಮೂಲಕ ಆಹಾರಕ್ಕೆ ರಕ್ತಗತವಾಗುವಂತೆ ಮಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.ಜಠರಾಗ್ನಿಯು ಪ್ರಬಲವಾಗಿದ್ದರೆ ಒಳ್ಳೆಯ ಜೀರ್ಣಶಕ್ತಿ ಇದೆ ಎಂದರ್ಥ. ಜಠರಾಗ್ನಿಯು ಮಂದವಾಗಿರುವ ವ್ಯಕ್ತಿಯು ಜೀರ್ಣ ಸಂಬಂಧಿ ತೊಂದರೆಗಳು ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಾನೆ. ಹೊಟ್ಟೆ ಉಬ್ಬರ, ಅಜೀರ್ಣ, ಹುಳಿತೇಗು, ವಾಕರಿಕೆ, ವಾಯುಬಾಧೆ ಮುಂತಾದ ತೊಂದರೆಗಳು ಆತನನ್ನು ಬಾಧಿಸುತ್ತವೆ.
ಎರಡನೆಯದು ಮಾನಸ ಅಗ್ನಿ..
ಈ ಅಗ್ನಿಯು ನಮ್ಮ ಮನಶ್ಶಕ್ತಿ ಗೆ ಸಂಬಂಧಪಟ್ಟದ್ದು ನಮ್ಮ ಜಾಣ್ಮೆ, ತಿಳುವಳಿಕೆ ಮತ್ತು ಗ್ರಹಿಕೆಗಳನ್ನು ಒಳಗೊಂಡಿರುತ್ತದೆ. ಮನಸ್ಸಿನ ಅಗ್ನಿಯು ಉಜ್ವಲವಾಗಿರುವ ವ್ಯಕ್ತಿಯು ಒಳ್ಳೆಯ ಗ್ರಹಣ ಶಕ್ತಿ,ತೀಕ್ಷ್ಣಮತಿ ಮತ್ತು ಬುದ್ಧಿ ಚಾತುರ್ಯಗಳನ್ನು ಒಳಗೊಂಡಿರುತ್ತಾನೆ. ಮಾನಸಿಕ ಅಗ್ನಿಯು ಮಂದವಾಗಿರುವ ವ್ಯಕ್ತಿಯು ಗೊಂದಲ, ಗಲಿಬಿಲಿ,ಮಂದ ಬುದ್ಧಿಯನ್ನು ಹೊಂದಿರುತ್ತಾನೆ. ನಿಖರ ಮತ್ತು ತತ್ ಕ್ಷಣದ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಆತನಿಗೆ ಅಸಾಧ್ಯವಾಗುತ್ತದೆ. ತನ್ನ ಸ್ವಂತ ನಿರ್ಧಾರಗಳ ಮೇಲೆ ಆತನಿಗೆ ನಂಬಿಕೆಯ ಕೊರತೆ ಕಾಣುತ್ತದೆ.
ಮೂರನೆಯದು ಭೂತಾಗ್ನಿ..
ಭೂತಾಗ್ನಿಯು ನಮ್ಮ ಇಚ್ಛಾಶಕ್ತಿಯ ಕುರಿತಾದದ್ದು. ಇದು ಜೀವನದಲ್ಲಿ ನಾವು ಸಾಧಿಸಬಹುದಾದ ಗುರಿ ಮತ್ತು ಪ್ರಯತ್ನಗಳ ಕುರಿತಾಗಿದ್ದು ಯಾವ ರೀತಿ ನಮ್ಮ ವೈಯುಕ್ತಿಕ ಬೆಳವಣಿಗೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುತ್ತೇವೆ ಎಂಬುದನ್ನು ಕುರಿತಾಗಿದೆ.
ಈ ಮೂರು ಅಗ್ನಿಗಳು ನಮ್ಮ ವ್ಯಕ್ತಿತ್ವದ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗುವ ಅತ್ಯಂತ ಅವಶ್ಯಕವಾದ ಅಂಶಗಳನ್ನು ಹೊಂದಿವೆ.
ಈ ಮೂರು ಅಗ್ನಿಗಳ ಕೊರತೆಯಿಂದ ಉಂಟಾಗುವ ತೊಂದರೆಗಳಿಂದ ಪಾರಾಗಲು ಪರಿಹಾರಗಳು.
ಮಂದಗತಿಯನ್ನು ಹೊಂದಿರುವ ಜಠರಾಗ್ನಿಯ ಚಟುವಟಿಕೆಯನ್ನು ತೀವ್ರಗೊಳಿಸಲು ಸೂರ್ಯ ಸ್ನಾನದ ಅಗತ್ಯವಿದೆ. ಮುಂಜಾನೆ ಮತ್ತು ಸಾಯಂಕಾಲದ ಸಮಯದಲ್ಲಿನ ಎಳೆಯ ಮತ್ತು ತಿಳಿಯಾದ ಬಿಸಿಲಿಗೆ ದೇಹವನ್ನು ಒಡ್ಡುವ ಮೂಲಕ, ಎಳೆ ಸೂರ್ಯನ ಕಿರಣಗಳು ದೇಹಕ್ಕೆ ತಾಗುವಂತೆ ಪುಟ್ಟ ನಡಿಗೆಯನ್ನು ಮಾಡುವ ಮೂಲಕ ಜಠರಾಗ್ನಿಯ ಪುನರುಜ್ಜೀವನ ಸಾಧ್ಯವಾಗುತ್ತದೆ. ಬೆಳಗಿನ ಸೂರ್ಯನ ಬಿಸಿಲಿನಲ್ಲಿ ಬಿರುಸಾದ ಮತ್ತು ವೇಗವಾದ ನಡಿಗೆಯನ್ನು ಮಾಡುವ ಮೂಲಕ ಬಹುತೇಕ ಈ ತೊಂದರೆ ನಿವಾರಣೆಯಾಗುವುದರಲ್ಲಿ ಸಂಶಯವೇ ಇಲ್ಲ. ತುಸು ವಯಸ್ಸಾದ ಜನರು ಕೂಡ ಮುಂಜಾನೆ ಇಲ್ಲವೇ ಸಾಯಂಕಾಲದ ಬಿಸಿಲಿನಲ್ಲಿ ಕೊಂಚ ಹೊತ್ತು ಓಡಾಡಿ ಇಲ್ಲವೇ ಕುಳಿತುಕೊಂಡು ಸೂರ್ಯನ ಬಿಸಿಲಿನಲ್ಲಿ ಯಥೇಚ್ಛವಾಗಿರುವ ಜೀವಸತ್ವವನ್ನು ಹೀರಿಕೊಳ್ಳಲು ಮತ್ತು ಎಲುಬುಗಳಿಗೆ ಅವಶ್ಯಕವಾದ ಕ್ಯಾಲ್ಸಿಯಂ ಪೂರೈಕೆಗೆ ಅನುಕೂಲ ಕಲ್ಪಿಸಿಕೊಳ್ಳಬಹುದು.
ಹುಟ್ಟಿದ ಎಳೆಗೂಸುಗಳನ್ನು ಕೂಡ ಪ್ರತಿದಿನ ಮುಂಜಾನೆ ಮತ್ತು ಸಾಯಂಕಾಲದ ಸಮಯದಲ್ಲಿ ಸೂರ್ಯನ ಎಳೆ ಬಿಸಿಲಿಗೆ ಒಡ್ದುವುದು ಇದೇ ಕಾರಣಕ್ಕೆ.
ಮಾನಸ ಅಗ್ನಿಯನ್ನು ಹೆಚ್ಚಿಸಿಕೊಳ್ಳಲು ತ್ರಾಟಕ ಕ್ರಿಯೆಯನ್ನು ಮಾಡಬೇಕು. ಒಂದು ಕೋಣೆಯನ್ನು ಸಂಪೂರ್ಣವಾಗಿ ಕತ್ತಲೆ ಮಾಡಿ ಕಣ್ಣಿಗೆ ತುಸು ದೂರದಲ್ಲಿ ಇರುವಂತೆ ಎತ್ತರದ ಪೀಠದ ಮೇಲೆ ದೀಪವನ್ನು ಇರಿಸಿ ಅದನ್ನು ಕಣ್ಣು ಪಿಳುಕಿಸದೆ ನೆಟ್ಟ ದೃಷ್ಟಿಯಿಂದ ನೋಡುತ್ತಾ ಇರಬೇಕು. ಆರಂಭದಲ್ಲಿ ನಿರ್ದಿಷ್ಟ ಸಮಯದ ಅಂತರದಲ್ಲಿ ಮೊದಲು ಕಣ್ಣನ್ನು ಕಿರಿದಾಗಿಸಿ ನಂತರ ನಿಧನಿಧಾನವಾಗಿ ತುಸು ಹೆಚ್ಚು ಅಗಲವಾಗಿ ತೆರೆಯುತ್ತಾ ಅಂತಿಮವಾಗಿ ಸಂಪೂರ್ಣ ವಿಶಾಲವಾಗಿ ಕಣ್ಣನ್ನು ತೆರೆದು ದೀಪವನ್ನು ದಿಟ್ಟಿಸಿ ನೋಡುತ್ತಿರಬೇಕು. ಆರಂಭದಲ್ಲಿ ಕಣ್ಣಿನ ನರಗಳ ಮೇಲೆ ತುಸು ಒತ್ತಡ ಹೆಚ್ಚಾಗಿಯೇ ಬಿದ್ದರೂ ನಿರಂತರ ಅಭ್ಯಾಸದಿಂದ ಕಣ್ಣಿನ ನರಗಳು ಶಕ್ತಿಯುತವಾಗುತ್ತವೆ. ದೃಷ್ಟಿ ದೋಷಗಳು ಕಡಿಮೆಯಾಗುತ್ತವೆ. ಮನಸ್ಸು ಏಕಾಗ್ರಚಿತ್ತತೆಯನ್ನು ಸಾಧಿಸುತ್ತದೆ ತನ್ಮೂಲಕ ದೇಹ ಮತ್ತು ಮನಸ್ಸುಗಳು ಏಕತ್ರತೆಯನ್ನು ಹೊಂದಿ ವ್ಯಕ್ತಿಯ ಜ್ಞಾಪಕ ಶಕ್ತಿ ಉತ್ತಮವಾಗುತ್ತದೆ, ಗೊಂದಲಗಳು ಕಡಿಮೆಯಾಗುತ್ತವೆ. ತ್ರಾಟಕ ಕ್ರಿಯೆಯ ನಿರಂತರ ಅಭ್ಯಾಸದಿಂದ ವಿಪರೀತ ರಕ್ತದೊತ್ತಡ ಕೂಡ ಕಡಿಮೆಯಾಗುತ್ತದೆ. ( ಕಡಿಮೆ ರಕ್ತದೊತ್ತಡವನ್ನು ಹೊಂದಿರುವ ವ್ಯಕ್ತಿಗಳು ತ್ರಾಟಕ ಕ್ರಿಯೆಯನ್ನು ಮಾಡಬಾರದು), ಮನಸ್ಸು ಪ್ರಶಾಂತವಾಗಿ ಬುದ್ಧಿ ಪ್ರಖರವಾಗುತ್ತದೆ.
ಭೂತಾಗ್ನಿಯನ್ನು ಉದ್ದೀಪನಗೊಳಿಸಲು ನಿಮ್ಮ ಸುತ್ತ ಕಟ್ಟಿಕೊಂಡಿರುವ ಕೆಲ ವೈಯುಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಮಿಥ್ಯಗಳ ರಕ್ಷಣಾ ಗೋಡೆಯನ್ನು ಬೇಧಿಸಿ ನಿಮ್ಮ ಅಂತಃಶ್ಯಕ್ತಿಯನ್ನು ಅರಿಯಬೇಕು. ಪ್ರತಿದಿನವೂ ನಿಮ್ಮ ಮನೋ ದೈಹಿಕ ಮಿತಿಗಳನ್ನು ವಿಸ್ತರಿಸುತ್ತಾ ಹೋಗಬೇಕು.
ಉದಾಹರಣೆಗೆ… ದಿನವೂ 2 km ನಡೆಯುತ್ತಿದ್ದರೆ ಕೊಂಚ ಕೊಂಚ ಏರಿಸುತ್ತಾ ಮೂರು ಕಿಲೋಮೀಟರ್ ನಡೆಯುವುದು.

ಪ್ರತಿದಿನವೂ ಪುಸ್ತಕದಲ್ಲಿ ಏಳೆಂಟು ಪುಟಗಳನ್ನು ಓದುತ್ತಿದ್ದರೆ ಪುಟಗಳ ಸಂಖ್ಯೆಯನ್ನು ಹೆಚ್ಚುಸುತ್ತ ಹೋಗುವುದು.
ನನ್ನಿಂದ ಆಗುವುದೇ ಇಲ್ಲ ಎಂಬ ಕೆಲಸಗಳನ್ನು ಅದೇಕೆ ಆಗುವುದಿಲ್ಲ ಎಂದು ನಿಮಗೆ ನೀವೇ ಸವಾಲು ಹಾಕಿಕೊಂಡು ನಿಮ್ಮ ಮಿತಿಗಳನ್ನು ವಿಸ್ತರಿಸುತ್ತಾ ಅಂತಿಮವಾಗಿ ಗುರಿಯನ್ನು ತಲುಪುವುದು ನಿಮ್ಮ ಭೂತಾಗ್ನಿಯ, ಆತ್ಮಶಕ್ತಿಯ ಉದ್ವೀಪನಕ್ಕೆ ಕಾರಣವಾಗುತ್ತದೆ.
ಸ್ನೇಹಿತರೆ, ನಾವು ಕೇಳದೆಯೇ ಈ ಭೌತಿಕ ಜಗತ್ತಿನ ಎಲ್ಲವೂ ಯಥೇಚ್ಛವಾಗಿ ಅಡಕವಾಗಿರುವಂತಹ ಮನೋ ದೈಹಿಕ ಸಾಮರ್ಥ್ಯ ನಮ್ಮಲ್ಲಿದೆ. ನಮಗೆ ಅದರ ಅರಿವಿದ್ದು ಕೂಡ ಕೆಲ ಮಿತಿಗಳನ್ನು ನಮಗೆ ನಾವೇ ಹೇರಿಕೊಂಡು ಕೈಲಾಗದವರಂತೆ ವರ್ತಿಸುತ್ತೇವೆ, ಮತ್ತೆ ಕೆಲವೊಮ್ಮೆ ಬೇರೆಯವರ ನೆರವಿಗಾಗಿ ಅಪೇಕ್ಷಿಸುತ್ತೇವೆ. ಇದು ಸುತಾರಾಂ ಸಲ್ಲದು. ನಮ್ಮ ಬದುಕಿನ ಎಲ್ಲಾ ಒಳಿತು ಕೆಡುಕುಗಳಿಗೆ ನಾವುಗಳೇ ಕಾರಣ. ನಮ್ಮಲ್ಲಿರುವ ಅಂತಃಶಕ್ತಿಯನ್ನು ಅರಿತು ಅದನ್ನು ಹೆಚ್ಚಿಸಿಕೊಂಡು ನಮ್ಮ ಬದುಕನ್ನು ಇನ್ನಷ್ಟು ಎತ್ತರಗಳಿಗೆ ಕೊಂಡೊಯ್ಯೋಣ.
– ವೀಣಾ ಹೇಮಂತ ಗೌಡ ಪಾಟೀಲ್,
ಮುಂಡರಗಿ – ಗದಗ

