Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಮಗನಿಗೊಂದು ಪತ್ರ
ವಿಶೇಷ ಲೇಖನ

ಮಗನಿಗೊಂದು ಪತ್ರ

By Updated:No Comments7 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

“ವೀಣಾಂತರಂಗ”- ವೀಣಾ ಹೇಮಂತಗೌಡ ಪಾಟೀಲ ಮುಂಡರಗಿ-ಗದಗ

ಮುದ್ದು ಮಗನೇ,
ಇಷ್ಟು ವರ್ಷ ಮನೆಯಲ್ಲಿ ಆಡಿ ನಲಿದು ನಮ್ಮೆಲ್ಲರನ್ನು ಸಂತಸ ಪಡಿಸಿದ, ನಿನ್ನ ಬೆಳವಣಿಗೆಯಿಂದ ಖುಷಿಯನ್ನು ಹಂಚಿದ ಕೆಲವೊಮ್ಮೆ ಗಾಬರಿ ಆತಂಕಗಳಿಗೆ ಈಡಾಗಿಸಿದ ನಿನಗೆ ಹೀಗೊಂದು ಪತ್ರ ಬರೆಯುವ ಪ್ರಮೇಯ ಬದುಕಿನಲ್ಲಿ ಬರುತ್ತದೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ.

ತಾಯಿಯಾಗಿ ಬರೀ ಕಾಳಜಿ,ಪ್ರೀತಿಯ ಹೊನಲನ್ನೇ ಹರಿಸಿದ್ದೇನೆ ಎಂದು ನಾನು ಹೇಳುವುದಿಲ್ಲವಾದರೂ ಚಿಕ್ಕಂದಿನಿಂದ ನಿನ್ನಲ್ಲಿ ಕೆಲ ಮೌಲ್ಯಗಳನ್ನು ಬಿತ್ತಿದ್ದೇನೆ.ಇದೀಗ ಆ ಮೌಲ್ಯಗಳು ಬೆಳೆದು ಸಸಿಯಾಗಿ ಫಲ ಕೊಡುವ ಸಮಯ. ಬಹುಷಃ ತಾಯಿಯಾಗಿ ನನಗೆ ಮತ್ತು ಮಗನಾಗಿ ನಿನಗೆ ಇದು ಪರೀಕ್ಷೆಯ ಸಮಯ. ಫಲಹೊತ್ತು ನಿಂತಿರುವ ನಿನ್ನಲ್ಲಿನ ಗಟ್ಟಿ ಮತ್ತು ಜೊಳ್ಳು ಕಾಳುಗಳ ಮೇಲೆ ನನ್ನ ಬಿತ್ತಿ ಬೆಳೆಯುವಿಕೆಯ ಶ್ರಮ ಮತ್ತು ನಿನ್ನ ಉತ್ಪಾದಕತೆ ನಿಂತಿದೆ ಎಂದರೆ ತಪ್ಪಿಲ್ಲ.

” ಅಮ್ಮ, ನಿನ್ನ ಮಗ ನೀ ತಿಳಿದಿರುವಷ್ಟು ಚಿಕ್ಕವನಲ್ಲ” ಎಂದು ನೀನು ನನಗೆ ಹೇಳಬಹುದು. ಆದರೆ ಈ ಪ್ರಪಂಚದ ಎಲ್ಲ ನಿಷ್ಟುರ ಸತ್ಯಗಳನ್ನು ಆರಗಿಸಿಕೊಳ್ಳುವಷ್ಟು ದೊಡ್ಡವನೂ ನೀನಲ್ಲ ಎಂಬುದು ನಮ್ಮಿಬ್ಬರಿಗೂ ಗೊತ್ತು.
ಆದ್ದರಿಂದಲೇ ನನ್ನ ನಿಲುಕಿನಲ್ಲಿ ಬರುವ ಕೆಲ ವಿಷಯಗಳನ್ನು ತಾಯಿಯಾಗಿ ನಿನ್ನ ಗಮನಕ್ಕೆ ತರುತ್ತೇನೆ. ತಾಳ್ಮೆಯಿಂದ ಓದು.

ಬದುಕಿನ ಪ್ರಾಥಮಿಕ ಹಂತವನ್ನು ಪೂರೈಸಿ ನೀನು ಮುಂದೆ ನಡೆಯುತ್ತಿರುವ ಸಮಯವಿದು. ಸುತ್ತಲಿನ ಪ್ರಕೃತಿ ಬದಲಾದಂತೆ ನಿನ್ನಲ್ಲಿಯೂ ಮನೋ ದೈಹಿಕ ಬದಲಾವಣೆಗಳು ಆಗುತ್ತವೆ. ಹಾರ್ಮೋನುಗಳ ಸಹಜ ಒತ್ತಡ ನಿನ್ನ ಮೇಲೆ ಭಾರಿ ಪರಿಣಾಮವನ್ನು ಬೀರಬಹುದು. ಈ ಕುರಿತು ನಿನ್ನಲ್ಲಿ ಕುತೂಹಲ, ಕೆಲವೊಮ್ಮೆ ಗೊಂದಲ ಕಾಡುವುದು ಸಹಜ, ಆದರೆ ಕೆಟ್ಟ ಕೌತುಕ ಬೇಡ. ಕಣ್ಣಿಗೆ ಕಾಣುವ ಪ್ರತಿಯೊಂದೂ ಸುಂದರವಾಗಿ ಕಾಣುವುದರಲ್ಲಿ ಯಾವುದೇ ತಪ್ಪಿಲ್ಲ. ನಿಸರ್ಗ ಸಹಜವಾಗಿ ಎಲ್ಲರಂತೆ ನಿನಗೂ ಕೂಡ ದೈಹಿಕ ಮತ್ತು ಮಾನಸಿಕ ಸ್ಥಿತ್ಯಂತರಗಳು ಉಂಟಾಗುತ್ತವೆ. ಭಯ ಬೀಳುವ ಅವಶ್ಯಕತೆಯೂ ಇಲ್ಲ.

ಚಿಕ್ಕಂದಿನಿಂದಲೂ ನಿನ್ನೊಂದಿಗೆ ಒಡನಾಡುತ್ತಿದ್ದ ನಿನ್ನ ಸ್ನೇಹಿತರೊಂದಿಗೆ ಸೇರಿ ಹರೆಯದ ಹುಮ್ಮಸ್ಸಿನಲ್ಲಿ ನಾನೀಗ ಬೆಳೆದಿದ್ದೇನೆ ಎಂಬ ಭಾವದಲ್ಲಿ, ಹುಡುಗನಿಂದ ಗಂಡಸಾಗುತ್ತಿದ್ದೇನೆ ಎಂಬ ಧೋರಣೆಯಲ್ಲಿ ನಿಮ್ಮ ಜೊತೆಗಿರುವ, ನಿಮ್ಮ ಸಂಪರ್ಕಕ್ಕೆ ಬರುವ ಹೆಣ್ಣುಮಕ್ಕಳನ್ನು ತಮಾಷೆಗೀಡು ಮಾಡಿ, ಗೇಲಿ ಮಾಡಿ ಮೋಜು ಮಾಡುತ್ತೀರಿ!! ಇದು ತಮಾಷೆಗಷ್ಟೇ ಸೀಮಿತವಾಗಿದ್ದರೆ ತಪ್ಪೇನಲ್ಲ, ವಯೋಸಹಜ ಎಂದು ಸುಮ್ಮನಾಗಬಹುದು, ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಆದರೆ ಅದು ಆರೋಗ್ಯಕರವಾದ ಗೇಲಿಯಾಗಿರಬೇಕು…. ನಿಮ್ಮ ತಮಾಶೆಗೆ ಈಡಾಗುವ ಹೆಣ್ಣು ಮಗು ಸುಮ್ಮನೆ ಮುಗುಳ್ನಕ್ಕು ಮುಂದೆ ಸಾಗುವಂತಿರಬೇಕೇ ಹೊರತು ಅತ್ತು ಕರೆದು ರಾದ್ಧಾಂತವಾಗಬಾರದು. ಯಾರ ಮನೆಯ ಅಪ್ಪ ಅಮ್ಮಂದಿರು ಕೂಡ ನಿಮ್ಮ ತುಂಟಾಟಗಳಿಂದ ನೋಯಬಾರದು, ಬೇಯಬಾರದು, ತಲೆತಗ್ಗಿಸಬಾರದು.

ಇದೀಗ ನಿಮ್ಮೊಂದಿಗೆ ಓದಲು ಬಂದಿರುವ ಹೆಣ್ಣು ಮಕ್ಕಳು ತುಸು ಮುಜುಗರದಿಂದ, ಸಂಕೋಚದಿಂದ ವರ್ತಿಸಬಹುದು ಕಾರಣ ಅವರು ಕೂಡ ನಿನ್ನಂತೆಯೇ ಬದುಕಿನ ಹೊಸ ತಿರುವಿನಲ್ಲಿ ಇದ್ದಾರೆ. ನಿನ್ನ ಜೊತೆಗಿನ ಒಡನಾಟ ಅವರಿಗೊಂದು ಸುರಕ್ಷಿತತೆಯ ಭಾವವನ್ನು ಕೊಡುವಲ್ಲಿ ಸಫಲವಾಗಬೇಕು. ಕೆಲವೊಮ್ಮೆ ಅವರು ನಿನ್ನೊಂದಿಗೆ ಎಂದಿನಂತೆ ಹರಟುತ್ತಾ ತಮ್ಮ ಮನದ ಭಾವನೆಗಳನ್ನು, ತುಮುಲಗಳನ್ನು ಹೇಳಿಕೊಳ್ಳಬಹುದು….. ಅದಕ್ಕೆ ಕಾರಣ ಮನೆಯಲ್ಲಿ ತಂದೆ ಮತ್ತು ಸಹೋದರರನ್ನು ಹೊರತುಪಡಿಸಿ ಆಕೆ ನಿಮ್ಮನ್ನು ನಂಬಿರುತ್ತಾಳೆ, ನಿಮ್ಮೊಂದಿಗೆ ತನ್ನ ಮನದ ಭಾವನೆಗಳನ್ನು ಹಂಚಿಕೊಂಡರೆ ಯಾವುದೇ ತೊಂದರೆಯಾಗುವುದಿಲ್ಲ ಎಂಬ ಭರವಸೆಯಿಂದ ಆಕೆ ಹೇಳಿಕೊಂಡಿರುತ್ತಾಳೆ. ಎಂದಿಗೂ ಆಕೆಯನ್ನು ಹಗುರವಾಗಿ ಭಾವಿಸಬೇಡ, ನಂಬಿಕೆಯನ್ನು ಮುರಿಯಬೇಡ. ನಿಮ್ಮ ಜೊತೆಗಿರುವ ಹೆಣ್ಣು ಮಕ್ಕಳ ಸ್ನೇಹ, ಸಾಂಗತ್ಯ ಅವರಲ್ಲಿ ಧೈರ್ಯವನ್ನೂ, ನಿಮ್ಮಲ್ಲಿ ಜವಾಬ್ದಾರಿಯನ್ನೂ ಮೂಡಿಸುವಂತಿರಲಿ.

ಈ ಸಮಯದಲ್ಲಿ ಪ್ರೀತಿ ಪ್ರೇಮದ ಹೆಸರಿನಲ್ಲಿ ಹರೆಯದ ಹುಚ್ಚು ಮೈ ಮನಸುಗಳಿಗೆ ಕಚಗುಳಿ ಇಡುತ್ತದೆ. ಮಾಗದ ನಿಮ್ಮ ವಯಸ್ಸು ಬಾಹ್ಯ ಆಕರ್ಷಣೆಯನ್ನೇ ಪ್ರೀತಿ ಎಂದು ಭಾವಿಸುವುದು ಸಹಜ. ಸರಿ ತಪ್ಪುಗಳ, ಒಳಿತು ಕೆಡುಕುಗಳ ಅರಿವಿಲ್ಲದ ಅಂದ ಚಂದ ಉಡುಗೆ ತೊಡುಗೆ ಹರೆಯದ ಆಕರ್ಷಣೆಗಳೇ ಹೊರತು ಪ್ರೀತಿಯಲ್ಲ.
ಹರೆಯದ ಆಕರ್ಷಣೆಯ ಹುಚ್ಚು ಹೊಳೆಯಲ್ಲಿ ಕೊಚ್ಚಿ ಹೋದವರೇ ಹೆಚ್ಚು, ಆದ್ದರಿಂದ ಜಾಗೃತನಾಗಿರು.

ಇನ್ನು ಕೆಲವೊಮ್ಮೆ ನಾವು ದೊಡ್ಡವರಾಗಿದ್ದೇವೆ ಎಂಬುದನ್ನು ತೋರುವ ಸಲುವಾಗಿಯೇ ಸ್ನೇಹಿತರೊಂದಿಗೆ ಸೇರಿ ಬಿಲ್ಡಪ್ ಕೊಟ್ಟು ಮಾತನಾಡುವುದನ್ನು ಕಲಿಯುತ್ತಾರೆ, ಹುಡುಗಿಯರನ್ನು ಚುಡಾಯಿಸುತ್ತಾರೆ, ಬೇರೆಯವರ ಮೇಲೆ ರೋಪು ಹಾಕಿ ಬುದ್ಧಿ ಕಲಿಸಲು ತಯಾರಾದವರಂತೆ ತೋರುತ್ತಾರೆ. ದೊಡ್ಡವರಾಗಬೇಕಾಗಿರುವುದು ಮಾನಸಿಕವಾಗಿಯೇ ಹೊರತು ವಿಚಿತ್ರ ಮಾತಿನ ವೈಖರಿಯಿಂದಲ್ಲ. ಲವಲವಿಕೆಯ ವ್ಯಕ್ತಿತ್ವದ ಜೊತೆ ಜೊತೆಗೆ ಗಾಂಭೀರ್ಯ ಮಿಳಿತಗೊಂಡಿದ್ದು ನಿಮ್ಮ ಪ್ರೌಢತೆಗೆ ಸಾಕ್ಷಿ ಆಗಬೇಕು.

ರಂಗು ರಂಗಿನ ಅಂಗಿಗಳು ಅಲ್ಲಲ್ಲಿ ಕತ್ತರಿಸಿದ ದೊಗಲೇ ಪ್ಯಾಂಟುಗಳು, ಒಂದು ಕಿವಿಯಲ್ಲಿ ಧರಿಸಿದ ಓಲೆ, ಸೇರಿಸಿ ಕಟ್ಟಿದರೆ ಜುಟ್ಟು ಆಗಬಲ್ಲಷ್ಟು ಉದ್ದದ ಕೂದಲು ಕೈಯಲ್ಲಿ ನೇಮಕ್ಕೊಂದು ಪುಸ್ತಕ ನೀವು ಕಾಲೇಜು ಹುಡುಗರು ಎಂಬಂತೆ ತೋರುವುದಕ್ಕಲ್ಲ…. ಸ್ವಚ್ಛವಾದ ಒಗೆದು ಇಸ್ತ್ರಿ ಮಾಡಿದ ಬಟ್ಟೆಗಳು, ಶಿಸ್ತಾಗಿ ಬಾಚಿದ ತಲೆ, ವಿಷಯಕ್ಕೆ ಸಂಬಂಧಪಟ್ಟ ನೋಟ್ಸ್ ಗಳನ್ನು ಹೊಂದಿರುವ ಬ್ಯಾಗ್ ನಿಮಗೆ ಭೂಷಣ.

ಹದಿಹರೆಯದ ಈ ಹೊತ್ತಿನಲ್ಲಿ ನಾನು ಸಿಗರೇಟ್ ಸೇದಬೇಕು, ಮಧ್ಯದ ರುಚಿ ನೋಡಬೇಕು ಹುಡುಗಿಯರಿಗೆ ಲೈನ್ ಹೊಡಿಬೇಕು, ಬೈಕ್ ನಲ್ಲಿ ಇಡೀ ಜಗತ್ತು ಸುತ್ತಬೇಕು, ಹರೆಯದ ಅನುಭವವನ್ನು ದಂಡಿಯಾಗಿ ಅನುಭವಿಸಬೇಕು ಎಂದು ನಿಮಗೆ ಅನ್ನಿಸಬಹುದು… ತಪ್ಪೇನಿಲ್ಲ ಸುತ್ತಣ ಜಗತ್ತು ಮತ್ತು ವಯಸ್ಸಿನ ಪ್ರಭಾವ ಅದು. ಆದರೆ ಒಂದು ಮಾತನ್ನು ನೆನಪಿನಲ್ಲಿಟ್ಟುಕೋ.. ನೀನು ನಿನ್ನ ಪಾಲಕರೊಂದಿಗೆ ಊಟ ತಿಂಡಿ ಮಾಡುವಷ್ಟೇ ಸಹಜವಾಗಿ ಈ ಮೇಲಿನ ವಿಷಯಗಳನ್ನು ಕೂಡ ಮಾಡಬಲ್ಲೆಯ ಎಂದು ಯೋಚಿಸು?? ಯಾವ ವಿಷಯಗಳು ನಿನ್ನ ತಂದೆ ತಾಯಿಯ ಮುಂದೆ ಮಾಡಲು ನಿನಗೆ ಮಾಡಲು ಸಾಧ್ಯವಾಗುವುದಿಲ್ಲವೋ, ಯಾವ ವಿಷಯಗಳನ್ನು ಅವರೊಂದಿಗೆ ನೀನು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಅವೆಲ್ಲವೂ ತಪ್ಪು ಎಂಬುದು ನಿನ್ನ ಭಾವಕ್ಕೆ ತೋಚಿರುವುದರಿಂದಲೇ ಅವರ ಮುಂದೆ ಇಂತಹ ವಿಷಯಗಳನ್ನು ಅವಾಯ್ಡ್ ಮಾಡುತ್ತೇನೆ ಎಂಬುದು ನಿನಗೆ ಗೊತ್ತಾಗುತ್ತದೆ…. ಹಾಗಾದರೆ ಗೊತ್ತಿದ್ದು ತಪ್ಪು ಮಾಡುವುದಿಲ್ಲ ಅಲ್ಲವೇ!? ಅಕಸ್ಮಾತ್ ಹಾಗೇನಾದರೂ ಮಾಡಿದ್ದರೆ ಒಂದು ಸುಳ್ಳನ್ನು ಮುಚ್ಚಲು 10 ಸುಳ್ಳುಗಳನ್ನು ಹೇಳಬೇಕಾದ ಪ್ರಮೇಯ ಬರಬಹುದು. ಹಾಗಿದ್ದಾಗ ಒಂದು ನಿಜವನ್ನು ಹೇಳಿ ಮುಂದೆ ಇಂತಹ ಪ್ರಮಾದಗಳು ಆಗದಂತೆ ನೋಡಿಕೊಳ್ಳಬಹುದು ಅಲ್ಲವೇ?

ಇನ್ನು ಕೆಲವೊಮ್ಮೆ ಸ್ನೇಹಿತರು ನಿನ್ನ ಗಂಡಸುತನದ ಮೇಲೆ ಸವಾಲು ಹಾಕಿ ನಿನಗೆ ಇಂತಹ ಕೃತ್ಯಗಳಿಗೆ ಪ್ರೇರೇಪಿಸಬಹುದು. ಮೊಟ್ಟ ಮೊದಲು ಗಂಡಸುತನ ಎಂಬ ಕಾನ್ಸೆಪ್ಟ್ ತಪ್ಪು. ಆದರೂ ಸಾಮಾಜಿಕ ವಲಯದಲ್ಲಿ ಈ ಪದವನ್ನು ಬಳಸುವುದರಿಂದ ಹೇಳುತ್ತೇನೆ ಕೇಳು. ಬಹುಶಹ ನಿಘಂಟಿನಲ್ಲಿ ತನಗಿರುವ ಅರ್ಥ ವ್ಯಾಪ್ತಿಯನ್ನು ಹೊರತುಪಡಿಸಿ ಅತಿ ಹೆಚ್ಚು ದುರ್ಬಳಕೆಗೊಂಡ ಪದ ಇದೇ ಇರಬಹುದು.ನಿಜವಾದ ಗಂಡಸುತನ ತಪ್ಪು ಮಾಡಲು ಪ್ರೇರೇಪಿಸುವುದಿಲ್ಲ. ಜಾಣ್ಮೆಯಿಂದ ವರ್ತಿಸಲು, ಗೌರವಯುತವಾಗಿ ಬಾಳಲು, ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಲು ಬಳಸಬಹುದಾದ ಪದವದು. ಹೆಣ್ಣು ಮಕ್ಕಳು ಕೂಡ ಹೀಗೆಯೇ ಇರುತ್ತಾರಲ್ಲವೇ…. ಅಂದಾಗ ಅದಕ್ಕೆ ಲಿಂಗತ್ವದ ಹಂಗೇಕೆ?
ಹರೆಯದ ಹುಮ್ಮಸ್ಸಿನಲ್ಲಿ ನಿನಗೆ ಮನೆಯಲ್ಲಿ ಬುದ್ಧಿ ಹೇಳುವ ತಂದೆ-ತಾಯಿ, ಮತ್ತಿತರ ಹಿರಿಯರು, ಕಾಲೇಜಿನಲ್ಲಿ ಪಾಠ ಮಾಡುವ ಅಧ್ಯಾಪಕರ ಮಾತುಗಳು ಬೇಸರ ಹುಟ್ಟಿಸಬಹುದು, ಅಸಡ್ಡೆ ಎನಿಸಬಹುದು… ಆದರೆ ಒಂದು ಮಾತು ನೆನಪಿಟ್ಟುಕೋ ಅವರು ಕೂಡ ತಾರುಣ್ಯದ ಆ ಬೇಗುದಿಯಲ್ಲಿ ಹಾಯ್ದು ಬಂದಿರುತ್ತಾರೆ. ತಮ್ಮ ಸುತ್ತಣ ಪ್ರಪಂಚದ ತಪ್ಪುಗಳು, ಅವಘಡಗಳು ನಿಮ್ಮಿಂದ ಜರುಗದಿರಲಿ ಎಂಬ ಆಶಯದಿಂದ ಆಗಾಗ ಸೂಕ್ಷ್ಮವಾಗಿ, ಕೆಲವೊಮ್ಮೆ ಒರಟಾಗಿಯೂ ನಿನ್ನನ್ನು ಎಚ್ಚರಿಸುತ್ತಾರೆ… ಇದರ ಹಿಂದೆ ಇರುವುದು ನಿನ್ನ ಕುರಿತಾದ ಅಪಾರ ಕಾಳಜಿ ಮತ್ತು ಪಾಲಕರಾಗಿ ತುಸು ಆತಂಕ ಮಾತ್ರ. ಬಹುಶಹ ನೀನು ತಂದೆಯಾದಾಗ ಮಾತ್ರ ನಿನಗೆ ಇದರ ಅರ್ಥವಾಗಬಹುದು.

ಸ್ನೇಹದಲ್ಲಿ ಒಳ್ಳೆಯದು ಕೆಟ್ಟದು ಎಂಬುದಿಲ್ಲ… ಆದರೆ ಸಹವಾಸದಲ್ಲಿ ಇದೆ. ನಿನ್ನದೇ ಉತ್ತಮ ಅಭಿರುಚಿಗಳನ್ನು ಹೊಂದಿರುವ ಸ್ನೇಹಿತರ ವಲಯದಲ್ಲಿ ನಿನ್ನ ಒಳಿತಿದೆ. ಪೀರ್ ಪ್ರೆಷರ್ ಎಂಬ ಮಾತುಗಳು ಇತ್ತೀಚೆಗೆ ಕೇಳಿ ಬರುತ್ತಿವೆ… ಗೆಳೆಯರ ಒತ್ತಾಯಕ್ಕಾಗಿ ಗೆಳೆಯರೊಂದಿಗಿನ ಸಹವಾಸದಲ್ಲಿ ಅವರಂತೆ ಎಂಜಾಯ್ ಮಾಡಿದರೆ ತಪ್ಪೇನು ಎಂಬ ಭಾವ ನಿನಗೂ ಬರಬಹುದು. ಪ್ರವಾಹದ ವಿರುದ್ಧ ಈಜುವುದು ಕಷ್ಟ, ಆದರೆ ಅಸಾಧ್ಯವೇನಲ್ಲ. ನಿಜ, ಒಂದು ಬಾರಿ ಅವಡುಗಚ್ಚಿ ಊಹು ಎನ್ನುವುದನ್ನು ನೀನು ಕಲಿತರೆ ಮುಂದಿನ ಹಾದಿ ಬಲು ಸುಲಭ.
ಚೆನ್ನಾಗಿ ಓದಿ ಅಂಕಗಳನ್ನು ತೆಗೆದರೆ ನಿನ್ನನ್ನು ಕುಡುಮಿ,ಫಸ್ಟ್ ರಾಂಕ್ ರಾಜು ಎಂದೆಲ್ಲ ತಮಾಷೆ ಮಾಡಬಹುದು. ಆದರೆ ಬದುಕಿನ ಗುರಿ ಉನ್ನತವಾಗಿದ್ದಾಗ ಇಂತಹ ಎಲ್ಲ ಅವಹೇಳನಗಳನ್ನು ಸಹಿಸಿಕೊಳ್ಳಬೇಕು. ಒಕ್ಕಲುತನ ಪ್ರಧಾನವಾಗಿರುವ ನಮ್ಮ ದೇಶದಲ್ಲಿ ರಾಶಿ ಮಾಡುವಾಗ ಧಾನ್ಯಗಳನ್ನು ಮೊರದಲ್ಲಿ ಹಾಕಿ ಗಾಳಿಗೆ ತೂರಿದಾಗ ಜೊಳ್ಳಷ್ಟೇ ಗಾಳಿಗೆ ತೂರಿ ಹೋಗುವುದು ಗಟ್ಟಿಕಾಳುಗಳಲ್ಲ ಎಂಬುದು ನಿನಗೆ ನೆನಪಿರಲಿ. ಸಾಧ್ಯವಾದರೆ ಅವರನ್ನು ಕೂಡ ನಿನ್ನ ದಾರಿಗೆ ಎಳೆದುಕೊಳ್ಳಲು ಪ್ರಯತ್ನಿಸುವಷ್ಟು ಗಟ್ಟಿತನ ನಿನ್ನಲ್ಲಿರಲಿ.

ಇಂದಿನ ಆಧುನಿಕ ಜನಾಂಗವನ್ನು ತನ್ನ ಕಬಂಧ ಬಾಹುಗಳಲ್ಲಿ ಬಂಧಿಸಿರುವ ಮೊಬೈಲ್ ಎಂಬ ಮಾಯಾಂಗನೆಯನ್ನು ಸಾಧ್ಯವಾದಷ್ಟು ದೂರವಿಡು. ಕೊಳವೆ ಬಾವಿಯಲ್ಲಿ ಬಿದ್ದ ಮಕ್ಕಳನ್ನಾದರೂ ಎತ್ತಬಹುದು, ಆದರೆ ಮೊಬೈಲ್ ಎಂಬ ಆಳವಾದ ಕಣಿವೆಯಲ್ಲಿ ಬಿದ್ದ ಮಕ್ಕಳನ್ನು ಎತ್ತಲಾಗದು ಎಂಬಂತಹ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತವೆ. ಕೇಳಲು ತಮಾಷೆ ಎಂದೆನಿಸಿದರೂ ಇದುವೇ ನಿಜವಾದ ಸತ್ಯವಾಗಿ ಪರಿಣಮಿಸಿದೆ. ನಿನಗೆ ನೀನೇ ಒಂದು ಪರಿಮಿತಿಯನ್ನು ಹಾಕಿಕೊಂಡು ಅದರಂತೆ ನಡೆದುಕೋ. ಕಾಲೇಜಿನ ಪಠ್ಯದ ಅವಧಿಯಲ್ಲಿ ಕಡ್ಡಾಯವಾಗಿ ಮೊಬೈಲನ್ನು ಸೈಲೆಂಟ್ ಮೋಡಿಗೆ ಹಾಕಿ ಅಂತರ್ಜಾಲ ಸಂಪರ್ಕವನ್ನು ಕಡಿದುಹಾಕು. ಇದರಿಂದ ಒಂದೇ ಸಮನೆ ಪಾಪ್ ಅಪ್ ಆಗುವ ಮೆಸೇಜ್ ನೋಟಿಫಿಕೇಶನ್ ಗಳಿಂದ ವಿಚಲಿತನಾಗುವುದು ತಪ್ಪುತ್ತದೆ. ವಿದ್ಯಾರ್ಥಿ ಜೀವನದಲ್ಲಿ ನಿಮ್ಮನ್ನು ನಿಮ್ಮ ಗುರಿಯಿಂದ ಬಹುದೂರ ಕೊಂಡೊಯ್ಯುವ ಮೊಬೈಲ್ ಎಂಬ ಡಿಜಿಟಲ್ ಸಾಧನ ನಿಮ್ಮ ಆಮೂಲಾಗ್ರ ಬೆಳವಣಿಗೆಗೆ ಮಾರಕ. ಒಂದು ವಸ್ತು, ಒಂದು ವಿಷಯದ ಕುರಿತು ಏನನ್ನಾದರೂ ಹುಡುಕಲು ಮೊಬೈಲ್ ನ ಹಲವಾರು ಆಪ್ ಗಳು ಅನುಕೂಲಕರವಾದರೂ ನಮ್ಮ ದಿನದ ಹೆಚ್ಚಿನ ಸಮಯವನ್ನು ಇವುಗಳ ಹುಡುಕಾಟದಲ್ಲಿ ನಾವು ಬೇಡದ ಮತ್ತಿನ್ನಾವುದೋ ಒಂದು ವಿಷಯದೆಡೆ ಸೆಳೆಯಲ್ಪಡುತ್ತೇವೆ… ಇದು ನಮ್ಮ ಬೆಳವಣಿಗೆಗೆ ಪೂರಕವಾಗಿರದೆ ಮಾರಕವಾಗುತ್ತದೆ ಎಂಬ ಸತ್ಯ ನಿನ್ನ ಅನುಭವಕ್ಕೂ ಬಂದಿರಬಹುದು…. ಆದ್ದರಿಂದ ಮೊಬೈಲ್ ಬಳಕೆಯ ಸಮಯದಲ್ಲಿ ಜಾಗೃತನಾಗಿರು. ರೀಲ್ಸ್ ಗಳನ್ನು ನೋಡುವುದರಲ್ಲಿ, ಚಾಟ್ ಮಾಡುತ್ತಾ, ವಿಡಿಯೋಗಳನ್ನು ನೋಡುತ್ತಾ ನಿನ್ನ ಸಮಯವನ್ನು ವ್ಯರ್ಥಗೊಳಿಸಬೇಡ.

ಸಾಧ್ಯವಾದಷ್ಟು ಆಟೋಟಗಳಲ್ಲಿ ಪಾಲ್ಗೊಳ್ಳುವ ಮೂಲಕ ನಿನ್ನ ಮನೋದೈಹಿಕ ಆರೋಗ್ಯವನ್ನು ಕಾಯ್ದುಕೋ. ಪಠ್ಯೇತರ ಚಟುವಟಿಕೆಗಳು ನಿನ್ನ ವಿದ್ಯಾರ್ಥಿ ಜೀವನದ ಸುವರ್ಣ ಗಳಿಗೆಗಳು… ಮಿಸ್ ಮಾಡದೆ ಎಲ್ಲದರಲ್ಲಿಯೂ ಭಾಗವಹಿಸು.

ಯಾವುದೇ ರೀತಿಯ ಜಾತಿ, ಮತ, ಪಂಥ, ಪಕ್ಷ ಚಟುವಟಿಕೆಗಳು ನಿನ್ನ ಓದಿಗೆ ಮಾರಕವಾಗದಿರಲಿ. ಕುವೆಂಪು ಅವರ “ಮನುಜ ಮತ ವಿಶ್ವಪಥ” ಎಂಬ ವಿಶ್ವಮಾನವ ಪ್ರಜ್ಞೆಯನ್ನು ನಿನ್ನಲ್ಲಿ ಬೆಳೆಸಿಕೋ. ಯಾರಾದರೂ ತಪ್ಪು ಮಾಡಿದಾಗ, ಏನಾದರೂ ಅವಘಡ ನಡೆದಾಗ ಅದರ ಪೂರ್ವಾಪರವನ್ನು ಅರಿಯದೆ ಯಾವುದಕ್ಕೂ ಪ್ರತಿಕ್ರಿಯಿಸಬೇಡ. ಆರ್ಥಿಕ ಅಂತಸ್ತಿನ ಮೇಲೆ ಸ್ನೇಹಿತರ ಆಯ್ಕೆ ಬೇಡ. ಸಾಮಾನ್ಯ ಅಂಕಗಳನ್ನು ಪಡೆದರೂ ಒಳ್ಳೆಯ ಮೌಲ್ಯಗಳನ್ನು ಹೊಂದಿರುವ ಸ್ನೇಹಿತರ ಬಳಗ ನಿನ್ನದಾಗಿರಲಿ.

ಬನಿಯನ್ನಿನ ತೂತುಗಳನ್ನು ಮುಚ್ಚಿ ಹಾಕುವ ಶರ್ಟು ಧರಿಸಿ, ಸವೆದ ಚಪ್ಪಲಿಯಲ್ಲಿ ಕಾಲೆಳೆಯುತ್ತಾ ಸಾಗಿದರೂ ಹೊಸದೊಂದು ಜೋಡು ಖರೀದಿಸಲು ಬಯಸದ ನಿನ್ನ ಅಪ್ಪ ತನ್ನ ದುಡಿಮೆಯ ಪ್ರತಿ ಪೈಸೆಯನ್ನು ನಿಮ್ಮ ಓದಿಗಾಗಿ, ಹಾಸ್ಟೆಲ್ಲಿಗಾಗಿ, ಬಟ್ಟೆ ಬರೆಗಳಿಗೆ ಧಾರಾಳಿಯಂತೆ ಖರ್ಚು ಮಾಡುವುದು ಪ್ರತಿಫಲದ ನಿರೀಕ್ಷೆಯಿಂದಲ್ಲ. ನೀವು ಓದಿ ಒಳ್ಳೆಯ ವಿದ್ಯಾವಂತರಾಗಿ ನಿಮ್ಮ ಕಾಲ ಮೇಲೆ ನೀವು ನಿಂತುಕೊಂಡರೆ ವಯಸ್ಸಿಗಿಂತಲೂ ತುಸು ಹೆಚ್ಛೇ ನೆರಿಗೆಯಿಂದ ಸುಕ್ಕಾಗಿರುವ ಆತನ ಮುಖದಲ್ಲಿ ಹೆಮ್ಮೆಯ ನಗು ಮೂಡಬಹುದು, ಸವೆಸಿದ ಕಷ್ಟ ಮರೆಯಬಹುದು.

ನಿನ್ನಪ್ಪ….ನಿನ್ನಮ್ಮನಂತೆ ಮನ ಬಿಚ್ಚಿ ಮಾತನಾಡುವುದಿಲ್ಲ, ತನ್ನಂತರಂಗದ ಬೇಗುದಿಯ ಹೇಳಿಕೊಳ್ಳುವುದಿಲ್ಲ, ಪ್ರೀತಿಯನ್ನು ವ್ಯಕ್ತಪಡಿಸುವುದಿಲ್ಲ ಆದರೆ ನೀನಿಲ್ಲದ ಸಮಯದಲ್ಲಿ ಆತನ ಬಹುತೇಕ ಸಮಯ ಕಳೆಯುವುದು ನಿನ್ನ ನೆನವರಿಕೆಯಲ್ಲಿ. ನಿನ್ನ ಕೋಣೆಯ ಹಾಸಿಗೆಯ ಮೇಲೆ ಕುಳಿತು, ಮಲಗಿ, ನೀನು ಬಳಸುವ ವಸ್ತುಗಳನ್ನು ಮುಟ್ಟಿ ತಡವಿ ನಿನ್ನಿರುವಿಕೆಯನ್ನು ಅನುಭವಿಸುತ್ತಾನೆ.ಬಹುಶಹ ಈ ಸಮಾಜದ ಸೋ ಕಾಲ್ಡ್ ಗಂಡಸುತನ ಆತನ ಸಂವೇದನೆಗಳನ್ನು ಹೇಳಿಕೊಳ್ಳಲು ಅವಕಾಶ ನೀಡುವುದಿಲ್ಲ ಅಷ್ಟೇ…. ಆತನ ಪರದಾಟವನ್ನು ಕಂಡು ನಾನು ಮನದಲ್ಲಿ ಮುಸಿ ನಗುತ್ತೇನೆ.

ನಿನ್ನಪ್ಪನ ಬಾಳಿನ ಮುಸ್ಸಂಜೆಯಲ್ಲಿ ನೀನು ಊರುಗೋಲಾಗದಿದ್ದರೂ ಪರವಾಗಿಲ್ಲ…. ಆತನ ಮನದ ಕಿಬ್ಬದಿಯ ಕೀಲು ಮುರಿಯದಂತೆ ಓದಿ ವಿದ್ಯಾವಂತನಾಗಿ, ಬದುಕಿನಲ್ಲಿ ಯಶಸ್ವಿಯಾಗಿ ನಿನ್ನಪ್ಪ ಹೆಮ್ಮೆಯಿಂದ ಎದೆಯುಬ್ಬಿಸಿ ನಡೆಯುವಂತೆ ಬಾಳಿದರೆ ಆತನ ಶ್ರಮ ಸಾರ್ಥಕ.

ಇದರ ಜೊತೆಗೆ ಇನ್ನೊಂದು ಮಾತು…. ಓದು ಬದುಕಿಗೆ ಬಲು ಮುಖ್ಯ ನಿಜ.. ಆದರೆ ಓದಲಾಗದೆ ಪರೀಕ್ಷೆಯಲ್ಲಿ ಫೇಲ್ ಆಗುವೆ ಎಂಬ ಭಯದಿಂದ ಯಾರಲ್ಲೂ ಹೇಳಿಕೊಳ್ಳಲಾಗದ ತಳಮಳದಿಂದ ಹಿಮ್ಮೆಟ್ಟದಿರು. ನಿನ್ನೆಲ್ಲ ಪ್ರಯತ್ನಗಳ ಹೊರತಾಗಿಯೂ ನಿನಗೆ ಓದು ತಲೆಗೆ ಹತ್ತದಿದ್ದರೆ, ನಿನ್ನ ಆಸಕ್ತಿ ಕಳೆದು ಹೋದರೆ ಬದುಕೇ ಮುಗಿದು ಹೋಯಿತು ಎಂದು ಆಕಾಶವೇ ತಲೆ ಮೇಲೆ ಬಿದ್ದಂತೆ ಭಾವಿಸಬೇಡ …. ಯಶಸ್ವಿ ಬದುಕನ್ನು ಸಾಗಿಸಲು ಓದಿನಷ್ಟೇ ಮುಖ್ಯವಾಗಿ ಬದುಕಲು ಬೇಕಾಗುವ ಹಲವಾರು ಒಳ್ಳೆಯ ಉದ್ಯೋಗ ಆಧಾರಿತ ತರಬೇತಿಗಳಿವೆ.
ಅಂತಿಮವಾಗಿ ಮನುಷ್ಯನ ಮುಖ್ಯ ಉದ್ದೇಶ ಒಂದು ನೆಮ್ಮದಿಯ ಜೀವನ…. ಕೋಟಿ ಕೋಟಿ ಹಣ ಗಳಿಸಿದರೂ ಸಿಗದ ನೆಮ್ಮದಿ ನಮ್ಮವರ ಒಡನಾಟದಲ್ಲಿ ನಮ್ಮದೇ ಊರಿನಲ್ಲಿ ಬದುಕು ನಡೆಸಿದಾಗ ದೊರೆಯುತ್ತದೆ. ಅಂತಹ ಪ್ರಸಂಗ ಬಂದಾಗ ವೃತ್ತಿಪರ ಶಿಕ್ಷಣಕ್ಕೆ ಅವಕಾಶ ದೊರೆಯದೆ ಹೋದರೆ ವೃತ್ತಿ ಆಧಾರಿತ ಶಿಕ್ಷಣವನ್ನು ಪಡೆದು ಔದ್ಯೋಗಿಕ ವಲಯದಲ್ಲಿ, ಕೃಷಿ ವಲಯದಲ್ಲಿ ನೆಲೆ ಕಾಣಬಹುದು. ನೀನೇ ಉದ್ಯೋಗವನ್ನು ಹುಡುಕಿಕೊಂಡು ಅಲೆಯುವುದರ ಬದಲು ಉದ್ಯೋಗವನ್ನು ಸೃಷ್ಟಿಸುವ ಉದ್ದಿಮೆಯನ್ನು ಸ್ಥಾಪಿಸಬಹುದು. ಸತತವಾದ ಪ್ರಯತ್ನಕ್ಕೆ ಫಲ ಖಂಡಿತವಾಗಿಯೂ ಸಾಧ್ಯವಿದೆ.
ಬದುಕಿನ ಈ ಪಯಣದಲ್ಲಿ ವಿದ್ಯಾರ್ಥಿ ಜೀವನದ ಸುವರ್ಣ ಗಳಿಗೆಗಳನ್ನು ಅನುಭವಿಸಿ ಒಳ್ಳೆಯ ಭವಿಷ್ಯಕ್ಕೆ ಮುನ್ನುಡಿ ಹಾಕು. ನಮ್ಮೆಲ್ಲರ ಪ್ರೀತಿಯ ಆಶೀರ್ವಾದ, ಬೆಂಬಲ ನಿನಗೆ ಸದಾ ಇದ್ದೇ ಇರುತ್ತದೆ.
ನಿನ್ನ ನಿಶ್ಚಿತ ಗುರಿಯನ್ನು ಸಾಧಿಸುವ ಉದ್ದೇಶ ಮತ್ತು ಛಲ ನಿನ್ನಲ್ಲಿರಲಿ.

ಸದಾ ನಿನ್ನ ಒಳಿತನ್ನೆ ಬಯಸುವ
ನಿನ್ನ ಅಮ್ಮ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026
    In ದಿನಪತ್ರಿಕೆ
  • ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ
    In (ರಾಜ್ಯ ) ಜಿಲ್ಲೆ
  • ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!
    In (ರಾಜ್ಯ ) ಜಿಲ್ಲೆ
  • ನಮ್ಮ ನಿಸ್ವಾರ್ಥ ಸತ್ಕಾರ್ಯಗಳು ನಮ್ಮನ್ನು ಕಾಪಾಡುತ್ತವೆ :ಡಾ.ಗೀತಾ
    In (ರಾಜ್ಯ ) ಜಿಲ್ಲೆ
  • ಏ.೨೪ಕ್ಕೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಪ್ರತಿಷ್ಠಿತ ಶಾಲೆ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಏ.೨೨ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಏ.೨೨ರಿಂದ ಸಿಇಟಿ ಪ್ರರೀಕ್ಷೆ: ಸುಸೂತ್ರ ನಡೆಸಲು ಎಡಿಸಿ ಸೂಚನೆ
    In (ರಾಜ್ಯ ) ಜಿಲ್ಲೆ
  • ಹ್ಯಾಂಡ್ ಪೋಸ್ಟ್ ಟು ಕೋಟೆ ಜೋಡಿ ರಸ್ತೆ- ಹೈಟೆಕ್ ಪಾರ‍್ಕ್ ನಿರ‍್ಮಾಣ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.