ಹ್ಯಾಟ್ರಿಕ್ ಗೆಲುವು ಸೂಚಿಸಿದ ಎಕ್ಸಿಟ್ ಪೋಲ್‌ಗಳು | ಎಲ್ಲಾ ಫಲಿತಾಂಶಗಳಲ್ಲಿಯೂ ಬಿಜೆಪಿ ನೇತೃತ್ವದ ಎನ್‌ಡಿಎಗೆ ಗೆಲುವು |ಧನ್ಯವಾದ ಹೇಳಿದ ಪ್ರಧಾನಿ
ನವದೆಹಲಿ: ಲೋಕಸಭೆ ಚುನಾವಣೆಯ ಏಳನೇ ಹಂತದ ಮತದಾನ ಮುಕ್ತಾಯವಾದ ಬೆನ್ನಲ್ಲೇ ಎಕ್ಸಿಟ್ ಪೋಲ್‌ಗಳ ಫಲಿತಾಂಶ ಬಿಡುಗಡೆಯಾಗಿವೆ. ಎಲ್ಲಾ ಫಲಿತಾಂಶಗಳಲ್ಲಿಯೂ ಬಿಜೆಪಿ ನೇತೃತ್ವದ ಎನ್‌ಡಿಎಗೆ ಗೆಲುವು ಖಚಿತ ಎನ್ನಲಾಗಿದೆ. ಹೀಗಾಗಿ ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಏರುವುದು ಪಕ್ಕಾ ಆಗಿದೆ.
ಎಕ್ಸಿಟ್ ಪೋಲ್‌ಗಳ ಫಲಿತಾಂಶ ಪ್ರಕಟವಾದ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮತದಾರರಿಗೆ ಧನ್ಯವಾದ ಹೇಳಿದ್ದಾರೆ.
ಟ್ವಿಟರ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಮತದಾರರ ಬದ್ಧತೆ ಮತ್ತು ಸಮರ್ಪಣೆ ಭಾರತದ ಪ್ರಜಾಪ್ರಭುತ್ವದ ಮನೋಭಾವವನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಕ್ಕಾಗಿ ಮಹಿಳೆಯರು ಮತ್ತು ಯುವಕರಿಗೆ ಪ್ರಧಾನಿ ಮೋದಿ ಧನ್ಯವಾದ ಹೇಳಿದ್ದಾರೆ. “ಭಾರತ ಮತ ಹಾಕಿದೆ! ತಮ್ಮ ಹಕ್ಕನ್ನು ಚಲಾಯಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಸಕ್ರಿಯ ಪಾಲ್ಗೊಳ್ಳುವಿಕೆ ನಮ್ಮ ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ. ನಿಮ್ಮ ಬದ್ಧತೆ ಮತ್ತು ಸಮರ್ಪಣೆ ನಮ್ಮ ದೇಶದಲ್ಲಿ ಪ್ರಜಾಸತ್ತಾತ್ಮಕ ಚೈತನ್ಯವನ್ನು ವೃದ್ಧಿಸುತ್ತದೆ. ನಾನು ಭಾರತದ ನಾರಿ ಶಕ್ತಿ ಮತ್ತು ಯುವಶಕ್ತಿಯನ್ನು ವಿಶೇಷವಾಗಿ ಪ್ರಶಂಸಿಸಲು ಬಯಸುತ್ತೇನೆ” ಎಂದಿದ್ದಾರೆ.
ಅವಕಾಶವಾದಿ ಇಂಡಿಯಾ ಒಕ್ಕೂಟ ಮತದಾರರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಅವರು ಜಾತಿವಾದಿಗಳು, ಕೋಮುವಾದಿಗಳು ಮತ್ತು ಭ್ರಷ್ಟರು. ಬೆರಳೆಣಿಕೆಯ ರಾಜವಂಶಗಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಈ ಒಕ್ಕೂಟವು ರಾಷ್ಟ್ರಕ್ಕೆ ಭವಿಷ್ಯದ ದೃಷ್ಟಿಕೋನವನ್ನು ಪ್ರಸ್ತುತಪಡಿಸಲು ವಿಫಲವಾಗಿದೆ. ಪ್ರಚಾರದ ಮೂಲಕ, ಮೋದಿಯನ್ನು ಬೈಯುವ ಒಂದು ವಿಷಯದ ಮೇಲೆ ಮಾತ್ರ ಗಮನ ಹರಿಸಿದರು. ಇಂತಹ ಹಿಂಜರಿಕೆ ರಾಜಕಾರಣವನ್ನು ಜನ ತಿರಸ್ಕರಿಸಿದ್ದಾರೆ” ಎಂದು ಕಿಡಿಕಾರಿದ್ದಾರೆ.
ಏಳು ಹಂತಗಳ ಲೋಕಸಭೆ ಚುನಾವಣೆಗೆ ಶನಿವಾರ ಮತದಾನ ಮುಕ್ತಾಯವಾಗಿದೆ. ಏಳನೇ ಹಂತದ ಚುನಾವಣೆಯ ಪ್ರಚಾರದ ಪರಾಕಾಷ್ಠೆಯ ನಂತರ ಪ್ರಧಾನಿ ಮೋದಿ ಕನ್ಯಾಕುಮಾರಿಯ ವಿವೇಕಾನಂದ ರಾಕ್‌ಗೆ ತೆರಳಿ ಧ್ಯಾನ ಮಾಡಿದ್ದಾರೆ.
ಎಲ್ಲಾ ಎಕ್ಸಿಟ್ ಪೋಲ್ ಸಮೀಕ್ಷೆಗಳು ಭಾರತೀಯ ಜನತಾ ಪಾರ್ಟಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ ಸುಲಭ ಜಯ ಸಿಗುವ ಭವಿಷ್ಯ ನುಡಿದಿವೆ.

