ಸಂತೋಷ್ ರಾವ್ ಪೆರ್ಮುಡ, ಬೆಳ್ತಂಗಡಿ
ಒಮ್ಮೆ ಎಲ್ಲರಿಗೂ ಪ್ರಿಯವಾದ ಹಾಲು ಭಗವಂತನನ್ನು ಕುರಿತು ತಪಸ್ಸು ಮಾಡಿತು. ಆಗ ದೇವರು ಪ್ರತ್ಯಕ್ಷನಾಗಿ ಏನು ನಿನ್ನ ಸಮಸ್ಯೆ ಎಂದು ಕೇಳುತ್ತಾರೆ. ಆಗ ಹಾಲು ‘ಓ ದೇವರೇ, ನನ್ನ ಹೆಸರು ಹಾಲು ನಾನು ಆಕಳು ಮತ್ತು ಎಮ್ಮೆಗಳ ಕೆಚ್ಚಲಿನಿಂದ ಬರುವಾಗ ಬಂದಾಗ ಶುದ್ಧವಾಗಿಯೇ ಇರುತ್ತೇನೆ. ಆದರೆ ಈ ಪಾಪಿ ಮನುಷ್ಯ ಮಾತ್ರ ನನಗೆ ಹುಳಿ ಹಿಂಡಿ ನನ್ನ ಮನಸ್ಸನ್ನೇ ಕೆಡಿಸಿಬಿಡುತ್ತಾನೆ. ನನಗೆ ಸದಾ ಕಾಲ ಹಾಲಾಗಿಯೇ ಇರುವಂತೆ ವರವನ್ನು ಕೊಡು’ ಎಂದು ಬೇಡಿಕೊಂಡಿತು.
ಹಾಲಿನ ಈ ಮಾತನ್ನು ಕೇಳಿದ ದೇವರು ನಕ್ಕು, ‘ಎಲೈ ಹಾಲೇ ಇಲ್ಲಿ ಕೇಳು, ನೀನು ಸದಾ ಹಾಲಾಗಿಯೇ ಇರಬೇಕೆನ್ನುವ ಬದುಕಿಗೆ ಆಸೆ ಪಡುವ ಮೊದಲು ಈ ಮಾತನ್ನು ಕೇಳು. ನೀನು ಕೇವಲ ಹಾಲಾಗಿ ಅಷ್ಟೇ ಇದ್ದರೆ ಕೇವಲ ಒಂದು ದಿನ ಮಾತ್ರ ಬದುಕುತ್ತೀಯಾ. ಹಾಲಿಗೆ ಹುಳಿಯಿಂದ ಹೆಪ್ಪನ್ನು ಹಾಕಿದರೆ ನೀನು ಎರಡು ದಿನಗಳ ಕಾಲ ಬದುಕಿರುತ್ತೀಯಾ. ನಿನ್ನನ್ನು ಮೊಸರಾಗಿ ಕಡೆದರೆ ಹುಳಿ ಹುಳಿಯಾಗಿ ಮೂರನೇ ದಿನವೂ ಬದುಕಿರುವೆ. ನೀನು ಮಜ್ಜಿಗೆಯಿಂದ ಬಂದ ಬೆಣ್ಣೆಯಾಗಿ ಮಾರ್ಪಾಡಾದರೆ ವಾರಗಟ್ಟಲೆ ಬದುಕುತ್ತೀಯಾ. ಬೆಣ್ಣೆಯನ್ನು ಹದವಾಗಿ ಕಾಯಿಸಿ, ಅದರ ಮೇಲೆ ಒಂದೆರೆಡು ವೀಳ್ಯೆದೆಲೆ ಹಾಕಿದರೆ ಘಮಘಮ ಎನ್ನುವ ತುಪ್ಪವಾಗುವೆ. ಆ ತುಪ್ಪದಿಂದ ದೀಪವನ್ನು ಹಚ್ಚಿದರೆ ನೀನು ನನಗೆ ಬೆಳಕಾಗುವೆ ಎಂದಿತು.
ಈಗ ಹೇಳು ‘ಕೇವಲ ಒಂದು ದಿನ ನೀನು ಹಾಲಾಗಿ ಹುಟ್ಟಿ ಹಾಲಾಗಿಯೇ ಸಾಯುತ್ತೀಯಾ? ಅಥವಾ ಕ್ಷಣ ಕ್ಷಣವೂ ಪ್ರತಿದಿನವೂ ಬೆಳೆದು ರೂಪಾಂತರಗೊಂಡು ನೀನು ಭಗವಂತನಿಗೆ ಬೆಳಕಾಗುವೆಯಾ’ ಎಂದು ದೇವರು ಹಾಲನ್ನು ಮರು ಪ್ರಶ್ನಿಸುತ್ತಾನೆ. ದೇವರ ಮಾತನ್ನು ಕೇಳಿದ ಹಾಲು ಸಂಪೂರ್ಣ ಮೂಕವಾಗಿ ಶರಣಾಯಿತು. ತನ್ನ ಮನಸ್ಸಿನೊಳಗಿನ ಅಂಧಕಾರ ಮತ್ತು ನಾನೊಬ್ಬನೇ ಶ್ರೇಷ್ಠ ಎನ್ನುವ ಮದದಿಂದ ಹೊರಬಂತು. ನಂತರದಲ್ಲಿ ತುಪ್ಪವಾಗಿ ದೇವರ ಮುಂದೆ ಪ್ರಜ್ವಲಿಸುವ ಬೆಳಕಾಯಿತು.
ಮನುಷ್ಯನ ಜೀವನವೂ ಇದೇ ರೀತಿ ಹುಟ್ಟಿದ ವ್ಯಕ್ತಿಯು ಅದೇ ರೀತಿ ಇದ್ದು ಧನಾತ್ಮಕ ಬದಲಾವಣೆ ಮತ್ತು ಬೆಳವಣಿಗೆಗೆ ಒಗ್ಗಿಕೊಳ್ಳದೇ ಸತ್ತಾಗ ಬದುಕಿಗೆ ಸಾರ್ಥಕ್ಯವು ದೊರೆಯುವುದಿಲ್ಲ. ಅದೇ ರೀತಿ ಶುಭ್ರವಾದ ನಮ್ಮ ಮನಸ್ಸಿಗೆ ಯಾರೋ ಒಬ್ಬರು ಹುಳಿ ಹಿಂಡಿದರೆಂದು ಕೊರಗುತ್ತಾ ಕುಳಿತುಕೊಳ್ಳದೇ ಹಾಲಾಗಿ ಹುಟ್ಟಿ, ಮೊಸರಾಗಿ, ಮಜ್ಜಿಗೆ, ಬೆಣ್ಣೆ, ತುಪ್ಪವಾಗಿ ದೇವರ ಮುಂದೆ ದೀಪವಾಗುವ ಸಾರ್ಥಕ ಬದುಕಿಗೆ ಎಲ್ಲರೂ ಬದಲಾಗಬೇಕು.
– ಸಂತೋಷ್ ರಾವ್ ಪೆರ್ಮುಡ, ಬೆಳ್ತಂಗಡಿ

