ಅಲೆಯಲಿ ಕುಣಿಯುವ
ದೋಣಿಯ ತೆರದಲಿ
ಬಾಳಿನ ಜಂಜಡ ಮರೆಯುತಲಿ
ಮರಳಿನ ಹಾಸಲಿ
ನಡೆಯುವ ಜೊತೆಯಲಿ
ಕೈಯೊಳು ಕೈಯನು ಬೆಸೆಯುತಲಿ
ಹೆದ್ದೆರೆ ಬರಲೀ
ಗಾಳಿಯು ಬೀಸಲಿ
ಬಿಡಿಸಲು ಆಗದು ಈ ಬಂಧ
ನಂಬಿಕೆಯೆನ್ನುವ
ಪಾಯದಿ ಕುಳಿತಿದೆ
ಮಿಡಿವ ಮನಗಳ ಸಂಬಂಧ
ದೂರದಿಗಂತವ
ನಿರುಕಿಸಿ ನೋಡಲು
ಕಾಣದು ಎಲ್ಲೆಯು ಎಂದೆಂದೂ
ನಿನ್ನಯ ಹೆಗಲಲಿ
ಭಾವವ ಅರುಹಲು
ಭರವಸೆ ಮುರಿಯದು ಮುಂದೆಂದೂ