ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ನನ್ನವಳೆ ನನ್ನವಳೆ,
ವಾಚನಾಲಯದ ಪುಸ್ತಕದಲ್ಲಿ ಮುಖ ಹುದುಗಿಸಿ ಕುಳಿತರೆ ಸಾಕು ಸಮಯ ಸರಿದಿದ್ದೇ ಗೊತ್ತಾಗುತ್ತಿರಲಿಲ್ಲ. ಎಮ್ ಎ ಕೊನೆ ವರ್ಷದ ಪರೀಕ್ಷೆ ಸಮೀಪಿಸುತ್ತಿದ್ದರಿಂದ ಎಂದಿಗಿಂತ ಓದು ಮತ್ತಷ್ಟು ಜೋರಾಗಿಯೇ ಇತ್ತು. ‘ಸ್ಸಾರಿ ತಮಗೆ ನನ್ನಿಂದ ಲೇಟ್ ಆಯಿತು ಅನಿಸುತ್ತೆ.’ ಎಂದು ಗ್ರಂಥಪಾಲಕರಿಗೆ ನುಡಿಯುತ್ತ ಸರಸರನೆ ದಾಪುಗಾಲು ಹಾಕುತ್ತ ಬಸ್ ಸ್ಟಾಪ್ ಮುಟ್ಟುವಷ್ಟರಲ್ಲಿ ಮಳೆಯ ತುಂತುರು ಹನಿಗಳು ಹಣೆಯನ್ನು ಮುತ್ತಿಕ್ಕಹತ್ತಿದವು. ಮಳೆ ಬರುವ ಯಾವುದೇ ಮುನ್ಸೂಚನೆ ಇರದಿದ್ದರೂ ವರುಣನ ಆಗಮನ ಒಂದು ತರಹ ಖುಷಿ ತಂದಿತ್ತು. ಮರುಕ್ಷಣವೇ ನೆನಪಾಯಿತು ಮಳೆ ಜೋರಾದರೆ ನನ್ನ ಬಳಿ ಛತ್ರಿ ಇಲ್ಲವೆಂದು. ಹೆಚ್ಚಾದರೆ ಏನಾಗುತ್ತೆ ಮಳೆರಾಯ ನನ್ನನ್ನು ಸ್ನಾನ ಮಾಡಿಸುತ್ತಾನೆ ಎನ್ನುತ್ತ ಸಣ್ಣ ಸಣ್ಣ ಮಳೆ ಹನಿಗಳಿಗೆ ಕೈ ಒಡ್ಡುತ್ತ ಮನದೊಳಗೆ ನಕ್ಕೆ. ಪುಣ್ಯಕ್ಕೆ ಮಿಂಚಿತು, ಗುಡುಗಿತು, ಆದರೆ ದಪ್ಪ ದಪ್ಪ ಹನಿಗಳು ಸುರಿಯಲಿಲ್ಲವೆಂದು ಖುಷಿ ಪಡುತ್ತ ಬಸ್ ಹತ್ತಿ ಕೂತೆ. ಮನೆಗೆ ಬಂದು ಬಿಸಿನೀರಿನಲ್ಲಿ ಮುಖ ತೊಳೆದು ಅಮ್ಮ ಮಾಡಿ ಕೊಟ್ಟ ಹಬೆಯಾಡುವ ಕಾಫಿ ಹೀರುತ್ತ ಹೊರದೃಷ್ಟಿ ಬೀರಿದಾಗ ಕಂಡದ್ದು ಹೊಸದಾಗಿ ಬಾಡಿಗೆ ಮನೆಗೆ ಬಂದ ಅಪರೂಪದ ರೂಪ ರಾಶಿ.

ನಮ್ಮ ಮನೆ ಎದುರಿಗೆ ಕಂಡ ಸೌಂದರ್ಯ ಸಿರಿಯನ್ನು ಪದಗಳಲ್ಲಿ ಆ ಕ್ಷಣ ಹಿಡಿದಿಡಲಾಗಲಿಲ್ಲ. ಆದರೆ ಪುಸ್ತಕದಲ್ಲಿ ಓದಿದ ದೇವಲೋಕದ ಅಪ್ಸರೆಯನ್ನು ಕಣ್ಣಾರೆ ಕಂಡಂತಾಯಿತು. ಮೊದಲ ನೋಟದಲ್ಲಿ ನಿಂತಲ್ಲೇ ಕಳೆದು ಹೋದೆ. ದೃಷ್ಟಿ ಕದಲಿಸದೇ ನಿನ್ನನ್ನೇ ನೋಡುತ್ತಿದ್ದೆ. ನೀ ಮುಡಿದ ಮಲ್ಲಿಗೆಯ ಪರಿಮಳವನ್ನು ತಂಗಾಳಿ ನನ್ನವರೆಗೂ ಕರೆತಂದಿತ್ತು. ಪಾರಿವಾಳಗಳೊಂದಿಗೆ ಮೋಹಕವಾಗಿ ಆಟವಾಡುವುದರಲ್ಲಿ ಮುಳುಗಿದ್ದನ್ನು ವೀಕ್ಷಿಸುತ್ತ, ‘ಈಕೆ ನನ್ನಾಕೆ ಆದರೆ ಅದೆಷ್ಟು ಚೆನ್ನ!’ ಎಂದು ಕನಸು ಕಾಣುತ್ತ ನಿಂತಾಗ ಅಮ್ಮ ಬಂದು ಎಚ್ಚರಿಸಿದಳು. ನನ್ನ ತಲೆಯನ್ನು ನಾನೇ ಸಣ್ಣದಾಗಿ ಮೊಟಕಿಕೊಂಡು ಒಳ ನಡೆದೆ. ಅಂದು ರಾತ್ರಿಯೆಲ್ಲ ಆ ಪ್ರಥಮ ನೋಟದ ನೋಟವೇ ಕಣ್ಮುಂದೆ ನರ್ತಿಸುತ್ತಿತ್ತು.
ಈ ಹಿಂದೆ ಎಂದೂ ಹೀಗೆ ಎದೆ ಬಡಿತದ ಏರಿಳಿತ ತಪ್ಪಿರಲಿಲ್ಲ. ಇದೇ ಮೊದಲ ಸಲ ಹೃದಯ ನಗಾರಿ ತರಹ ಬಾರಿಸುತ್ತಿತ್ತು. ಕಣ್ಣು ಮುಚ್ಚಿದರೂ ರೂಪವತಿಯ ಯೋಚನೆಗಳೇ ಕಾಡಹತ್ತಿದವು. ಹೀಗಾಗಿ ರಾತ್ರಿಯೆಲ್ಲ ಕಣ್ರೆಪ್ಪೆಗಳು ಒಂದಕ್ಕೊಂದು ಅಂಟಿಕೊಳ್ಳಲೇ ಇಲ್ಲ. ಯಾವಾಗ ಬೆಳಗಾಗುವುದೋ ಯಾವಾಗ ನಿನ್ನ ನೋಡುವೆನೋ ಎಂಬ ಆಸೆ ಹೆಚ್ಚಾಯಿತು. ನಸುಕಿನ ಜಾವ ನಿದ್ರಾ ರಾಣಿ ನನ್ನನ್ನು ಬಿಡದಂತೆ ಅಪ್ಪಿಕೊಂಡಳು. ಅಂದು ಕಾಲೇಜಿಗೆ ಅರ್ಧ ತಾಸು ತಡವಾಗಿ ತಲುಪಿದೆ. ಕ್ಲಾಸಿಗೆ ಹೀಗೆಂದೂ ತಡವಾಗಿ ಹೋದವನೇ ಅಲ್ಲ ನಾನು. ಪ್ರೊಫೇಸರ್ ಅಚ್ಚರಿಯಿಂದ ತಡವಾದ ಕಾರಣ ಕೇಳುತ್ತಿದ್ದರೆ ತಡವರಿಸುತ್ತ ಸುಳ್ಳು ನೆಪವೊಂದನ್ನು ಹೇಳಿದೆ. ಆ ಕ್ಷಣವೇ ನನಗೆ ಪಕ್ಕಾ ಆಗಿ ಹೋಯ್ತು ‘ನಾನೀಗ ಪ್ರೇಮರೋಗಿ ಎಂದು!’ ಮನದಲ್ಲಿ ಅಂದಗಾತಿಯ ಮೇಲೆ ಪ್ರೀತಿಯ ಮೊಳಕೆ ಒಡೆದಿತ್ತು. ಚೆಂದುಳ್ಳಿ ಚೆಲುವೆಯ ಲಾವಣ್ಯದ ಐಸಿರಿ ಕನಸು ಮನೆ ಮಾಡ ತೊಡಗಿತ್ತು.
ಮರುದಿನ ಸಂಜೆ ಮನೆ ಮುಂದೆ ನಿನಗಾಗಿ ಕಾಯುತ್ತ ಬಿಸಿ ಚಹ ಹೀರುತ್ತಿದ್ದೆ. ಜಿಟಿ ಜಿಟಿ ಮಳೆ ಹನಿಯುತ್ತಿತ್ತು. ಮಣ್ಣಿನ ಸುವಾಸನೆ ಗಾಳಿಯಲ್ಲಿ ಮಧುರವಾಗಿ ಹರಡಿತ್ತು. ನಿನ್ನ ಕೋಣೆಯ ಕಿಟಕಿಯಿಂದ ನನ್ನನ್ನೇ ನೋಡಿದಂತೆನಿಸಿತು. ಖಚಿತ ಪಡಿಸಿಕೊಳ್ಳಲು ಮತ್ತಷ್ಟು ಮುಂದೆ ಬಂದು ನೋಡಿದೆ. ಅದು ಕಲ್ಪನೆಯಾಗಿರಲಿಲ್ಲ. ಆ ನೋಟದಲ್ಲಿ ಒಂದು ರೀತಿಯ ಅಪರಿಚಿತ ಆಪ್ತತೆ ಇತ್ತು. ದೂರದಿಂದಲೇ ಪದಗಳಿಲ್ಲದೆ ಭಾವನೆಗಳ ಸಂವಹನ ನಡೆದಿತ್ತು.
ಅಂದು ರವಿವಾರ ‘ಪೇಪರ್ ಹಾಕುವ ಹುಡುಗನ ನಂಬರ್ ಬೇಕಿತ್ತು.’ ಎಂದು ನಮ್ಮ ಮನೆಗೆ ಬಂದಿದ್ದೆ. ಇದೇ ಚಾನ್ಸು ಎಂದು ಫೋನ್ ನಂಬರ್ ಅದಲು ಬದಲು ಮಾಡಿಕೊಳ್ಳಲು ಮನಸ್ಸು ಹಾತೊರೆಯುತ್ತಿತ್ತು. ಅಷ್ಟರಲ್ಲಿ ಅಮ್ಮ ನಮ್ಮ ಬಳಿ ಇಲ್ಲ ಸದ್ಯಕ್ಕೆ ನಿಮ್ಮಮ್ಮನ ಮೊಬೈಲ್ ನಂಬರ್ ಕೊಟ್ಟಿರು ಕಳಿಸುವೆ ಎಂದರು. ‘ನಮ್ಮಮ್ಮನ ಫೋನ್ ರಿಪೇರಿ ಇದೆ ಆಂಟಿ.’ ನನ್ನ ನಂಬರ್ ತೆಗೆದುಕೊಳ್ಳಿ ಎಂದಾಗ ನನಗೆ ಆಕಾಶ ಮೂರೇ ಗೇಣು ಉಳಿದಿತ್ತು. ನಿನ್ನ ಫೋನ್ ನಂಬರ್ ತಲೆಯಲ್ಲಿ ಪ್ರಿಂಟಾಗಿತ್ತು. ಅಂದು ನಿನಗೆ ಮೆಸೇಜಿಸಲು ಹತ್ತಾರು ಸಲ ಮೊಬೈಲ್‌ನ್ನು ಕೈಗೆತ್ತಿಕೊಂಡು ಹಿಂಜರಿದೆ. ಕೊನೆಗೆ ಧೈರ್ಯ ಮಾಡಿ ಮೆಸೇಜಿಸಿದೆ. ಪ್ರೀತಿಗೆ ಗ್ರೀನ್ ಸಿಗ್ನಲ್ ಸಿಗುವವರೆಗೂ ಮೆಸೇಜಾಯಣ ನಡೆದೇ ಇತ್ತು.
ಊರಿನಾಚೆ ಇರುವ ವನಸಿರಿಯ ಹತ್ತಿರ ಭೇಟಿಯಾಗುವುದು ನಿಗದಿಯಾಯಿತು. ಪೂರ್ಣಚಂದಿರನಂತಹ ದುಂಡನೆಯ ಮುಖ, ಜಿಂಕೆಯಂತಹ ಕಣ್ಣುಗಳು, ಕಾಂತಿಯುತ ನೋಟ, ನವಿಲಿನ ಲಾಸ್ಯದ ನಡಿಗೆ, ಮಲ್ಲಿಗೆಯಂತಹ ನಗು, ಕತ್ತಲನ್ನು ಸೋಲಿಸುವಂತಹ ಕಡುಗಪ್ಪು ಕೂದಲು ಕೇವಲ ಹೊರಗಿನ ರೂಪದಿಂದ ಮಾತ್ರವಲ್ಲ ಮುಗ್ಧ ಮಗುವಿನಂತಹ ಮನಸ್ಸಿನಿಂದ ಎಲ್ಲರ ಮನಸ್ಸನ್ನು ಗೆಲ್ಲುವಂತಹ ಅಪ್ಪಟ ಅಂದಗಾತಿ. ಸರಳವಾಗಿ ಹೇಳಬೇಕೆಂದರೆ ಕವಿಯ ಕಲ್ಪನೆಯಿಂದ ಹೊರಬಂದ ಜೀವಂತ ಕಾವ್ಯ ಕನ್ನಿಕೆ. ನಿನ್ನ ಕಂಗಳಲ್ಲಿ ಏನೋ ಒಂದು ಮಾಂತ್ರಿಕ ಶಕ್ತಿಯಿದೆ. ಮತ್ತೆ ಮತ್ತೆ ನಿನ್ನನ್ನು ನೋಡಬೇಕೆನಿಸುವ ಆ ನೋಟ ನನ್ನನ್ನು ಮಂತ್ರಮುಗ್ಧನನ್ನಾಗಿಸುತ್ತದೆ. ಒಟ್ಟಿನಲ್ಲಿ ನಾನು ಓದಿದ ಕವಿತೆ ಕಾದಂಬರಿಗಳಲ್ಲಿ ವರ್ಣಿಸಿದ ಸುಂದರಿ ಕಣ್ಮುಂದೆ ಬಂದು ನಿಂತಂತಾಯಿತು.

ಮುಂಜಾವಿನಿಂದ ಕಾಡಿನ ತುಂಬ ಮರಗಿಡಗಳ ನಡುವೆ ಕೈ ಕೈ ಹಿಡಿದು ನಡೆದದ್ದೇ ಆಯಿತು. ನೀನು ಹಾಗೆ ಕಿಲ ಕಿಲ ನಗುತ್ತ ನನ್ನ ಜೊತೆಗಿದ್ದಾಗ,’ಈ ಕ್ಷಣ ಹೀಗೆಯೇ ನಿಂತು ಬಿಡಲಿ.’ ಅನಿಸಿಬಿಡುತ್ತಿತ್ತು. ಬಾಯಿ ಸುಮ್ಮನಿದ್ದರೂ ಮನಸ್ಸು ಸಾವಿರ ಸಾವಿರ ಆಸೆಗಳನ್ನು ನಿನ್ನ ಮುಂದೆ ಹೇಳೆಂದು ಒತ್ತಾಯಿಸುತ್ತಿತ್ತು. ಸೂರ್ಯ ತನ್ನ ಮನೆಯತ್ತ ಹೊರಟ ಸಮಯವಾಯಿತು. ಆಕಾಶ ಕೆಂಪು ಮತ್ತು ಕೇಸರಿ ಬಣ್ಣಗಳಿಂದ ಮಿಂದೆದ್ದಂತೆ ಕಾಣುತ್ತಿತ್ತು. ಅಷ್ಟೊತ್ತು ಅರಳು ಹುರಿದ ಹಾಗೆ ಮಾತನಾಡುತ್ತಿದ್ದ ನೀನು ಮೌನವಾದೆ. ತಂಪಾದ ಗಾಳಿ ಇಬ್ಬರ ಮೈಯನ್ನು ತೀಡತೊಡಗಿತು. ಮೃದುವಾಗಿ ಬೀಸುತ್ತ ಮರಗಿಡಗಳನ್ನು ಅಲ್ಲಾಡಿಸಿತು. ತೀಡುವ ತಂಗಾಳಿಯ ಮೋಹಕತೆಗೆ ನನ್ನ ಕೈ ನಿನ್ನ ಮೈ ಸೋಕಿತು. ಆ ಸ್ಪರ್ಶ ನಿನ್ನಲ್ಲಿ ಸಣ್ಣನೆಯ ನಡುಕ ತಂತು. ನಿನ್ನ ತಲೆಯನ್ನು ಭುಜದ ಮೇಲೆ ಇಟ್ಟು ಕೈಯಲ್ಲಿ ಕೈ ಸೇರಿಸಿ ಸಮಯದ ಸವಿಯನ್ನು ಸವಿಯುವಂತೆ ಪ್ರೇರೇಪಿಸಿದ್ದೆ. ಪ್ರೀತಿಯ ಪಿಸುಮಾತಿನ ಹೊಸ ಲೋಕವನ್ನೇ ಸೃಷ್ಟಿಸಿದ್ದೆ.
ಅಷ್ಟು ಹೊತ್ತಿಗಾಗಲೇ ತಿಳಿ ಸಂಜೆಯಲಿ ಚಂದಿರನ ಬೆಳದಿಂಗಳು ಮೆಲ್ಲಗೆ ಕಾಲಿಡುತ್ತಲ್ಲಿತ್ತು. ಇಷ್ಟು ದಿನ ರಾತ್ರಿಯಲ್ಲಿ ಬೇಲಿ ದಾಟಿದ ಕನಸು ನೆನಪಾಗಿ ಮೈ ಜುಮ್ಮೆಂದಿತು. ದುಂಬಿಯೊಂದು ಹೂವನ್ನು ಮೆಲ್ಲಗೆ ತಾಕುವಂತೆ ಮೃದು ಕೆನ್ನೆಗೆ ಬಟ್ಟಲು ಕಂಗಳಿಗೆ ಅಂದದ ಮೊಗಕೆ ಅಧರಗಳಿಂದ ಮುದ್ರೆಯೊತ್ತ ತೊಡಗಿದೆ. ಹತ್ತಿರವಾದಂತೆ ಉಸಿರಾಟದ ವೇಗ ಹೆಚ್ಚಿತು. ತಂಗಾಳಿಗೆ ಹಾರುತ್ತಿದ್ದ ಮುಂಗುರಳನ್ನು ಸರಿಸುತ್ತ ನಿನ್ನ ಕಿವಿಯಲ್ಲಿ ಐಲವ್ಯೂ ಎಂದು ಪಿಸುಗುಟ್ಟಿದಾಗ ನೀನು ಸಹ ಅದೇ ಪದಗಳನ್ನು ಉಚ್ಚರಿಸಿ ಕಂಗಳನ್ನು ಮುಚ್ಚಿ ಮೆಲ್ಲಗೆ ಹಣೆಗೆ ಹೂಮುತ್ತನ್ನಿಕ್ಕಿದೆ. ಮೈ ಪುಳಕಗೊಂಡಿತು. ಇನ್ನೇನು ತೀವ್ರತೆ ಹೆಚ್ಚುತ್ತಿದ್ದಾಗ ನನ್ನೆದೆಗೆ ಕೈ ಹಚ್ಚಿ ತಳ್ಳಿದೆ. ನಾಚಿ ದೂರ ಓಡಿದೆ.
ಇನ್ನು ಮುಂದೆ ನಾವೀರ್ವರು ಕೇವಲ ಪ್ರೇಮಿಗಳಲ್ಲ ಮೂರು ಗಂಟಿನ ನಂಟಿನಲ್ಲಿ ಒಂದಾದವರು. ಕೈ ಬಳೆ ಸದ್ದಿನಲ್ಲಿ ಕಾಲ್ಗೆಜ್ಜೆ ನಾದದಲ್ಲಿ ಹಣತೆಯ ಬೆಳಕಲಿ ಬೆದರಿದ ಜಿಂಕೆಯ ಬೇಟೆಯಾಡಲು ತುದಿಗಾಲಲ್ಲಿ ಕಾಯುತ್ತಿದ್ದೇನೆ. ಪ್ರತಿ ರಾತ್ರಿಯೂ ಹೊಸ ಜೀವನದ ಆರಂಭಕ್ಕೆ ಪ್ರಣಯದ ಮುನ್ನುಡಿ ಬರೆಯೋಣ ಹಾಲಿನ ಬಿಳಿ ಹಾಸಿಗೆಯ ಮೇಲೆ ಹರಡಿದ ಹೂ ಎಸಳುಗಳ ಮೇಲೆ ಕುಳಿತು ಕಾಯುತಿರುವೆ ಬರೆಯಲು ಪ್ರೀತಿಯ ಕವಿತೆ ಬೇಗ ಬಂದು ಬೇಡು ಪ್ರೇಮಾಮೃತದ ಲೋಟ ಹಿಡಿದು.
ನಿನಗಾಗಿ ಕಾಯುತಿರುವ
ನಿನ್ನವನು


