ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ
ಎಲ್ಲಾ ವ್ಯವಸ್ಥೆಗಳು ಮತ್ತು ತಯಾರಿಗಳು ಅತ್ಯಂತ ಅಚ್ಚುಕಟ್ಟಾಗಿ ಇರುವಾಗ ಸಾಧನೆಯನ್ನು ಮಾಡಲು ಅವಕಶವೇ ಸಿಗುವುದಿಲ್ಲ, ಅವಕಾಶಗಳು ವಿಫುಲವಾಗಿ ದೊರೆತಾಗ ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ ಅಥವಾ ಯಾವುದೇ ರೀತಿಯ ಪೂರ್ವ ತಯಾರಿಯಿಲ್ಲದೆ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವುದಕ್ಕೆ ಹಳ್ಳಿಯಲ್ಲಿ ಚಂದದ ಗಾದೆಯೊಂದು ಹೆಚ್ಚು ಪ್ರಚಲಿತದಲ್ಲಿದೆ. ಅದು ಈ ರೀತಿಯಿದೆ, ‘ಕೋರೆಹಲ್ಲು ಮೂಡುವಾಗ ಮಣ್ಣಿರುವುದಿಲ್ಲ, ಮಣ್ಣಿರುವಾಗ ಕೋರೆಹಲ್ಲು ಮೂಡುವುದಿಲ್ಲ’ ಎಂದು.
ಈ ಗಾದೆಯು ಕಾಡುಹಂದಿಯು ತನ್ನ ದುರಾದೃಷ್ಟವನ್ನು ಶಪಿಸುವ ರೀತಿಯನ್ನು ಉಲ್ಲೇಖಿಸುತ್ತದೆ. ಕಾಡು ಹಂದಿಗಳಿಗೆ ಬಿರು ಬೇಸಗೆಯ ಸಮಯದಲ್ಲಿ ಹಾಗೂ ಭೂಮಿಯು ಒಣಗಿ ಭಣಗುಡುತ್ತಿರುವ ಸಂದರ್ಭದಲ್ಲಿ ಗಟ್ಟಿಯಾದ ಕೋರೆಹಲ್ಲು ಮೂಡುತ್ತದೆ. ಈ ಅವಧಿಯಲ್ಲಿ ಅವುಗಳಿಗೆ ಕೋರೆಹಲ್ಲಿದ್ದರೂ ಗಟ್ಟಿಯಾಗಿರುವ ಹಾಗೂ ಒಣಗಿದ ಮಣ್ಣನ್ನು ಅಗೆಯಲು ಸಾಧ್ಯವಾಗುವುದಿಲ್ಲ. ಆದರೆ ಮಳೆಗಾಲದಲ್ಲಿ ಮಳೆ ಬಿದ್ದು ಮಣ್ಣು ಹದವಾಗಿರುವಾಗ ಅದೇ ಕಾಡು ಹಂದಿಗಳ ಕೋರೆಹಲ್ಲುಗಳು ಉದುರಿ ಬೀಳುವುದರಿಂದ (ಕಾಡು ಹಂದಿಗಳಿಗೆ ಸಾಮಾನ್ಯವಾಗಿ ಬೇಸಗೆಯ ವೇಳೆಗೆ ಕೋರೆಹಲ್ಲು ಮೂಡಿದರೆ, ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಅವುಗಳು ಉದುರಿ ಬೀಳುತ್ತದೆ) ಅವುಗಳಿಗೆ ಮಣ್ಣು ಹದವಾಗಿ ಇದ್ದರೂ, ಅಗೆಯುವುದಕ್ಕೆ ಅಗತ್ಯವಾಗಿ ಬೇಕಿರುವ ಕೋರೆಹಲ್ಲುಗಳೇ ಇರುವುದಿಲ್ಲ.
ಈ ಗಾದೆಯ ಮಾತು ಅವಕಾಶಗಳು ಮತ್ತು ಅದಕ್ಕೆ ಅಗತ್ಯವಾಗಿ ಬೇಕಾಗಿರುವ ಪೂರ್ವ ತಯಾರಿಗಳ ವ್ಯತ್ಯಾಸಗಳನ್ನು ವಿಸ್ತೃತವಾಗಿ ತಿಳಿಸುತ್ತದೆ. ಈ ಗಾದೆ ಮನುಷ್ಯನಿಗೆ ಸ್ಪಷ್ಟವಾಗಿ ಅನ್ವಯ ಆಗುತ್ತದೆ. ವ್ಯಕ್ತಿಯು ಸಾಧನೆಗೆ ಅಗತ್ಯವಿರುವ ಸೂಕ್ತವಾದ ಪೂರ್ವ ತಯಾರಿಗಳನ್ನು ಮಾಡಿಕೊಂಡು ಸಿದ್ಧನಾಗಿರುವಗ ಆತನಿಗೆ ಸಾಧಿಸುವ ಅವಕಾಶಗಳು ಸಿಗುವುದಿಲ್ಲ. ಅದೇ ಉಜ್ವಲವಾದ ಅವಕಾಶಗಳು ತನ್ನ ಮುಂದಿರುವಾಗ ಸಾಧನೆಯನ್ನು ಮಾಡಲು ಅಗತ್ಯವಿರುವ ಮೂಲ ತಯಾರಿಗಳನ್ನೇ ಮಾಡಿಕೊಂಡಿರುವುದಿಲ್ಲ. ಈ ಎರಡೂ ಸಂದರ್ಭಗಳಲೂ ಸಾಧನೆಯು ಮರೀಚಿಕೆಯೇ ಆದರೆ ಅದಕ್ಕೆ ಕಾರಣಗಳು ಬೇರೆ ಬೇರೆ ಅಷ್ಟೇ. ಮೊದಲನೆಯ ಸನ್ನಿವೇಶಕ್ಕೆ ತನ್ನ ಅದೃಷ್ಟ ಕಾರಣವಾದರೆ, ಎರಡನೆಯದಕ್ಕೆ ತಾವುಗಳೇ ಸ್ವತಃ ಕಾರಣರಾಗಿರುತ್ತೇವೆ. ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಎಲ್ಲಾ ಪೂರ್ವ ತಯಾರಿಗಳನ್ನು ಸಮರ್ಪಕವಾಗಿ ಮಾಡಿಕೊಂಡಿದ್ದಾಗ ಅವಕಾಶ ಲಭಿಸದಿದ್ದರೆ ಪರವಾಗಿಲ್ಲ, ಅವಕಾಶಕ್ಕಾಗಿ ಕಾಯೋಣ. ಆದರೆ ಸೂಕ್ತ ಅವಕಾಶಗಳು ಕಣ್ಮುಂದೆಯೇ ಇರುವಾಗ ಅವುಗಳನ್ನು ಬಳಸಿಕೊಳ್ಳಲು ಅಗತ್ಯವಿರುವ ತಯಾರಿಯನ್ನು ಮಾಡಿಕೊಳ್ಳುವಲ್ಲಿಯೇ ವಿಫಲರಾದೆವೆಂದರೆ ಅದು ನಮ್ಮ ವೈಫಲ್ಯವಲ್ಲದೆ ಮತ್ತೇನೂ ಅಲ್ಲ. ಏನಿದೆ ಏನಿಲ್ಲ ಎನ್ನುವುದು ಮುಖ್ಯವಲ್ಲ, ಎಲ್ಲಾ ಸಂದರ್ಭಗಳಲ್ಲೂ ಸೂಕ್ತ ತಯಾರಿಗಳೊಂದಿಗೆ ಅವಕಾಶಗಳ ಬಳಕೆಗೆ ಸಿದ್ಧರಿರುವುದು ಅಥವಾ ಲಭ್ಯವಿರುವ ಸೀಮಿತ ಸಂಪನ್ಮೂಲಗಳೊಂದಿಗೆ ಸತತವಾಗಿ ಪ್ರಯತ್ನಿಸುವ ಮನಃಸ್ಥಿತಿ ಇರಬೇಕಾಗಿರುವುದು ಬಹಳ ಮುಖ್ಯವಾಗುತ್ತದೆ.

– ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ

