ಮುದ್ದೇಬಿಹಾಳ : ಒಬ್ಬರ ತಟ್ಟೆಯನ್ನು ಕಸಿದು ಬೇರೊಬ್ಬರಿಗೆ ಉಣಬಡಿಸಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಅಸಂವಿಧಾನಿಕವಾಗಿದೆ ಎಂದು ಅಂಜುಮನ್ ಎ ಇಸ್ಲಾಂ ಕಮೀಟಿಯ ಸಲಹಾ ಸದಸ್ಯ ಎಚ್.ಆರ್.ಬಾಗವಾನ ಹೇಳಿದರು.
ಪಟ್ಟಣದ ಬಾಗವಾನ ಅಲ್ಪಸಂಖ್ಯಾತರ ಕೋ ಆಪರೇಟಿವ್ ಸೊಸೈಟಿಯ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಲ್ಪಸಂಖ್ಯಾತರಿಗೆ ಇದ್ದ ಶೇ.೪ ಮೀಸಲಾತಿಯನ್ನು ಯಾವುದೇ ಆಯೋಗದ ವರದಿ ಇರದೇ, ಸಮಾಜದ ಸ್ಥಿತಿಗತಿಗಳನ್ನು ಅವಲೋಕನ ಮಾಡದೇ, ಅಧಿಕಾರದ ಆಸೆಗಾಗಿ ಇತರ ಸಮಾಜಗಳಿಗೆ ಒಡೆದು ಹಾಕಿರುವದನ್ನು ನಾವು ಖಂಡಿಸುತ್ತೇವೆ. ಸಾಮಾಜಿಕ ತಳಹದಿಯ ಮೇಲೆ ಆಡಳಿತ ಮಾಡಬೇಕಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಸ್ಲಿಂ ಸಮಾಜವನ್ನು ಟಾರ್ಗೇಟ್ ಮಾಡಿ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ. ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕು ಇಲ್ಲವಾದಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ನ್ಯಾಯವಾದಿ ಎಂ.ಎಸ್.ಹಳ್ಳಿ ಮಾತನಾಡಿ, ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತರಲು ಮೀಸಲಾತಿಯನ್ನು ಕಲ್ಪಿಸಲಾಗಿತ್ತು. ಕೂಡಲೇ ಈ ಆದೇಶವನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸುವ ಅನಿವಾರ್ಯತೆ ಇದೆ ಎಂದರು.
ಹಿರಿಯ ಮುಖಂಡ ಎಲ್.ಎನ್.ನಾಯ್ಕೋಡಿ, ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ, ಪು.ಮಾಜಿ ಸದಸ್ಯ ಎಚ್.ಬಿ.ಸಾಲಿಮನಿ, ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ ಮಾತನಾಡಿದರು.
ಪ್ರಮುಖರಾದ ಡಿ.ಡಿ.ಬಾಗವಾನ, ಪುರಸಭೆ ಸದಸ್ಯ ರಿಯಾಜ ನಾಯ್ಕೋಡಿ, ಬಾಗವಾನ ಬ್ಯಾಂಕ್ ಅಧ್ಯಕ್ಷ ಎಂ.ಎA.ಚೌಧರಿ, ಮುಖಂಡರಾದ ಹುಸೇನ್ ಮುಲ್ಲಾ, ಅಂಜುಮನ್ ಮಾಜಿ ಅಧ್ಯಕ್ಷ ಅಲ್ಲಾಭಕ್ಷö್ಯ ನಾಯ್ಕೋಡಿ, ಮಾಜಿ ಉಪಾಧ್ಯಕ್ಷ ಜಬ್ಬಾರ್ ಗೋಲಂದಾಜ, ಹಬಿಬುಲ್ಲಾ ನಾಲತವಾಡ, ಸಮೀರ ಹುಣಚಗಿ, ಸದ್ದಾಂ ನದಾಫ, ಬಾಬು ದಿಡ್ಡಿಮನಿ, ಮಲಿಕಸಾಬ ನದಾಫ ಮತ್ತೀತರರು ಇದ್ದರು.
Related Posts
Add A Comment