“ವೀಣಾಂತರಂಗ”
– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ
ನಮ್ಮ ಪ್ರಜಾತಂತ್ರ ರಾಷ್ಟ್ರ ಭಾರತದಲ್ಲಿ ಕಳೆದ ತಿಂಗಳು ಲೋಕಸಭೆಗೆ ದಿನಾಂಕಗಳು ಘೋಷಣೆಯಾಗಿವೆ. ಇದಕ್ಕೂ ಮುನ್ನವೇ ಕಳೆದ ಒಂದು ವರ್ಷದಿಂದ ಚುನಾವಣಾ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿ ತಮ್ಮ ತಮ್ಮ ಪಕ್ಷಗಳ ನಾಯಕರನ್ನು ಭೇಟಿಯಾಗುವ ಸೀಟು ಗಿಟ್ಟಿಸಲು ಹರ ಸಾಹಸ ಮಾಡುವ, ಅವರಿವರಿಂದ ವಶೀಲಿ ಹಚ್ಚುವ, ತಮ್ಮ ಶಕ್ತಿ ಪ್ರದರ್ಶನ ಮಾಡುವ ಅಭ್ಯರ್ಥಿಗಳ ದಂಡೇ ಇಲ್ಲಿದೆ. ಚುನಾವಣಾ ಕಣಕ್ಕಿಳಿಯಬಯಸುವವರು ವರ್ಷಗಟ್ಟಲೆ ಮುಂಚೆಯಿಂದಲೇ ತಯಾರಿ ಆರಂಭಿಸುತ್ತಾರೆ.ಅವರ ಹಿಂಬಾಲಕರನ್ನು ಒಳಗೊಂಡಂತೆ ಎಲ್ಲಿಯೇ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿ ಅಲ್ಲಿ ತಾವು ಹಾಜರಿದ್ದು ಜನರೊಂದಿಗೆ ಆತ್ಮೀಯವಾಗಿ ಮಾತನಾಡುತ್ತಾ, ತಮ್ಮ ಪಕ್ಷದ ಕಾರ್ಯ ಚಟುವಟಿಕೆಗಳನ್ನು ಹೊಗಳುತ್ತಾ ಈ ಬಾರಿ ತಮಗೆ ಸೇವೆ ನೀಡುವ ಅವಕಾಶ ಮಾಡಿಕೊಡಿರಿ ಎಂದು ನಿವೇದಿಸಿಕೊಳ್ಳುತ್ತಾರೆ. ಇದೇನು ತಪ್ಪಲ್ಲ ಬಿಡಿ.
ಪ್ರಶ್ನೆ ಇರುವುದು ಈ ರೀತಿಯಾಗಿ
ಕುಟುಂಬ ರಾಜಕಾರಣವಿರಲಿ, ಸ್ಥಳೀಯ,ಜಿಲ್ಲೆ,, ರಾಜ್ಯ ಮತ್ತು ರಾಷ್ಟ್ರಮಟ್ಟದ ರಾಜಕಾರಣವಿರಲಿ, ಜನಪ್ರತಿನಿಧಿಗಳಾಗುವ ಬಯಕೆಯನ್ನು ಹೊತ್ತ ಸಾವಿರಾರು ಜನರು ಅಧಿಕಾರದ ಅಪೇಕ್ಷೆಯನ್ನು ಹೊಂದಿದ್ದು ಕೇವಲ ತಮ್ಮ ಸರ್ಕಾರದ ಸಾಧನೆಗಳನ್ನು ಹೇಳುತ್ತಿಲ್ಲ. ತಾವು ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಸಾರ್ವಜನಿಕರು ಅನುಭವಿಸುತ್ತಿರುವ ಕುಂದು ಕೊರತೆಗಳನ್ನು ಆಲಿಸಿ ಅವುಗಳ ನಿವಾರಣೆಗೆ ಕೈಗೊಳ್ಳುವ ಕಾರ್ಯಗಳನ್ನಾಗಲಿ,ದೇಶದ ಸಾಮಾಜಿಕ ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ವ್ಯವಸ್ಥೆಯ ಉನ್ನತೀಕರಣದ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ತಾವು ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಕುರಿತು ಯಾರೊಬ್ಬರೂ ಮಾತನಾಡುತ್ತಿಲ್ಲ.
ಇಲ್ಲಿ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷಗಳು ಜಂಟಿಯಾಗಿಯೇ ಪರಸ್ಪರ ದೋಷಾರೋಪಣೆಯನ್ನೇ ಮುಖ್ಯ ಗುರಿಯಾಗಿಸಿಕೊಂಡು ತಮ್ಮ ವಿರೋಧಿ ಪಕ್ಷದ ಅವಗುಣಗಳನ್ನು ಅಳೆಯುವುದರ ಜೊತೆ ಜೊತೆಗೆ ಅದನ್ನು ಸಾರ್ವಜನಿಕವಾಗಿ ಉಲ್ಲೇಖಿಸಿ ಬಲು ತುಚ್ಚವಾಗಿ, ಅಸಹನೀಯ ಅಸಭ್ಯ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ.
ಏಟಿಗೆ ಎದಿರೇಟು, ಮಾತಿಗೆ ಪ್ರತಿ ಮಾತು, ಚೊಂಬು,ಚಿಪ್ಪು, ಚಾಕು, ಚೂರಿ ಮತ್ತಿತರ ಅನಾಗರಿಕ ಪದಗಳನ್ನು ಉಪಯೋಗಿಸುತ್ತಾ ತಮ್ಮ ಬಾಯಿ ತೀಟೆ ತೀರಿಸಿಕೊಳ್ಳುತ್ತಾರೆ.
ಹೀಗೆ ಕಡ್ಡಿಯನ್ನು ಗುಡ್ಡ ಮಾಡುವ ಸ್ವಭಾವ ಹೊಂದಿರುವವರು ದೇಶದ ಐಕ್ಯತೆಯನ್ನು, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಪ್ರಬುದ್ಧ ಭಾರತದಲ್ಲಿ ಅಬದ್ಧ ಮಾತುಗಳನ್ನು ಆಡುವ ಮೂಲಕ ತಮ್ಮ ಅಪ್ರಬುದ್ಧತೆಯನ್ನು ತೋರಿಸಿಕೊಳ್ಳುತ್ತಿದ್ದಾರೆ.
ಇದರ ಅವಶ್ಯಕತೆ ಇದೆಯೇ??
ಇವರ ನಾಟಕೀಯ ಶೈಲಿಯ ಆರೋಪ ಪ್ರತ್ಯಾರೋಪಗಳನ್ನು ನೋಡುವ ಜನರು ರೋಸಿ ಹೋಗಿಲ್ಲವೇ? ಇವರ ಕೆಸರೆರಚಾಟವನ್ನು ನೋಡಿ ಅಸಹ್ಯ ಪಟ್ಟುಕೊಳ್ಳುತ್ತಿಲ್ಲವೇ? ಇವರ ಬಾಯಿ ಬೇಧಿಗೆ ಮದ್ದಿಲ್ಲವೇ?? ಇವರು ಆಡುತ್ತಿರುವ ರಾಜಕೀಯ ಆಟಗಳು ಜನರಿಗೆ ಅರಿವಾಗದಷ್ಟು ದಡ್ಡರಲ್ಲ ಅವರು. ಅವರಿಗೂ ಕೂಡ ಸಾಮಾನ್ಯ ಜ್ಞಾನ ಇದೆ. ಪರಿಸ್ಥಿತಿಗಳನ್ನು ಪರಿಕ್ಷಿಸಿ ನೋಡುವ ತಪ್ಪು ಸರಿಗಳನ್ನು ವಿಶ್ಲೇಷಿಸುವ ಸಾಮರ್ಥ ಇದೆ ಎಂಬುದನ್ನು ಜನಪ್ರತಿನಿಧಿಗಳಾಗಬಯಸುವವರು ಮರೆಯಬಾರದು.
ಜನರ ಹಿತಾಸಕ್ತಿಯನ್ನು ಕಾಯುವ ನಿಜವಾದ ನಾಯಕರಾಗಿದ್ದರೆ ಇದಾವ ದೊಂಬರಾಟಗಳು ಬೇಕಾಗಿಲ್ಲ. ಯಾವುದೇ ಪಕ್ಷದ ಅಭ್ಯರ್ಥಿಯಾಗಿರಲಿ, ಅವರು ಆ ಪಕ್ಷದ ಪ್ರಣಾಳಿಕೆಯ ಕುರಿತು ಮಾತನಾಡಬೇಕಷ್ಟೇ. ಒಪ್ಪತಕ್ಕ ಮಾತೇ ಸರಿ!

ಪಕ್ಷದ ಪ್ರಣಾಳಿಕೆಯಲ್ಲಿ ತಾವು ಗೆದ್ದು ಅಧಿಕಾರಕ್ಕೆ ಬಂದರೆ ಯಾವ ರೀತಿ ದೇಶದ ಅಭಿವೃದ್ಧಿಗೆ ತಮ್ಮ ಅಧಿಕಾರವನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತೇವೆ ಎಂಬುದರ ಕುರಿತು ವಿಶೇಷ ಟಿಪ್ಪಣಿಗಳು, ಕಾರ್ಯ ಸೂಚಿಗಳು ಇರುತ್ತವೆಯೇ ಹೊರತು ತಾವು ಗೆಲ್ಲಲೇಬೇಕೆಂಬ ಏಕೈಕ ಕಾರಣಕ್ಕಾಗಿ ವಿರೋಧ ಪಕ್ಷವನ್ನು ವಾಚಾಮಗೋಚರವಾಗಿ ಬಯ್ಯುವುದಕ್ಕೆ ಅವರ ಚುನಾವಣಾ ಭಾಷಣಗಳು ಸೀಮಿತವಾಗಬಾರದು.
ಬೀದಿಗಳಲ್ಲಿ ನಾಯಿಗಳು ಕಚ್ಚಾಡುವಂತೆ…. ವಿವಿಧ ರಾಜಕೀಯ ವೇದಿಕೆಗಳಲ್ಲಿ ಪರಸ್ಪರ ಕಚ್ಚಾಡುವುದು ನೋಡುವವರಿಗೆ ಹಾಸ್ಯಾಸ್ಪದ ವಾಗಿ ಕಾಣುವುದಲ್ಲದೇ
ಮಾತನಾಡಿದ ಮಾತುಗಳು ಗಾಳಿಯಲ್ಲಿ ತೇಲಿ ಹೋಗಬಹುದು.. ಆದರೆ ಆಡಿದ ಮಾತುಗಳು ಎದುರಿನವರನ್ನು ಘಾಸಿಗೊಳಿಸಿ, ಕೆರಳಿಸುವ ಮೂಲಕ ಅವರು ಕೂಡ ತೀವ್ರವಾಗಿ ಪ್ರತಿಕ್ರಿಯಿಸಲು ಅನುವು ಮಾಡಿಕೊಡುತ್ತವೆ.
ಇನ್ನು ದೃಶ್ಯ ಮಾಧ್ಯಮಗಳಲ್ಲಿ ಚುನಾವಣೆ ಘೋಷಣೆ ಆರಂಭವಾಗುವುದಕ್ಕೂ ಮುನ್ನವೇ ಅಖಾಡದಲ್ಲಿ ಯಾರು? ಅವರ ದೌರ್ಬಲ್ಯಗಳೇನು? ಶಕ್ತಿಗಳೇನು? ಯಾವ ಯಾವ ಜಾತಿಯ ಜನ ಎಷ್ಟಿದ್ದಾರೆ? ಯಾರ ಒಲವು ಯಾವ ಪಕ್ಷದೆಡೆಗೆ ಎಂದು
ಎಕ್ಸ್ ಕ್ಲುಸೀವ್ ಮಾಹಿತಿಗಳನ್ನು ನೀಡುತ್ತಾ ರೋಚಕವಾದ ವಿಷಯಗಳ ಮಾಯಾ ಜಾಲದಲ್ಲಿ ಪ್ರೇಕ್ಷಕರನ್ನು ಸಿಲುಕಿಸುತ್ತಾರೆ.
ಅವರ ಮಾತುಗಳಲ್ಲಿ ಪರಸ್ಪರ ಎದುರಾಳಿಗಳಾಗಿ ನಿಂತಿರುವ ಅಭ್ಯರ್ಥಿಗಳು ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ನಿಂತಿರುವ ಕೌರವ ಪಾಂಡವರಿಗೆ ಕಮ್ಮಿ ಇಲ್ಲ ಎಂದು ಭಾಸವಾಗುವಂತೆ ಮಾತಿನ ಮಂಟಪಗಳನ್ನು ಕಟ್ಟುತ್ತಾ ಕೆಲವೇ ಕೆಲವು ಜನರನ್ನು ಪ್ರಶ್ನಿಸಿ ಸಾರ್ವಜನಿಕ ಸಮೀಕ್ಷೆ ಮಾಡಿದಂತೆ ಹಲ ಕೆಲವು ಜನರನ್ನು ಸಂದರ್ಶಿಸಿ ಅವರ ಅಭಿಪ್ರಾಯವೇ ಇಡೀ ಮತಕ್ಷೇತ್ರದ ಎಲ್ಲರ ಅಭಿಪ್ರಾಯವಾಗಿದೆ ಎಂಬಂತೆ ಬಿಂಬಿಸುತ್ತಾರೆ.
ಚುನಾವಣೆ ಇದೆಲ್ಲವನ್ನು ಮೀರಿದ್ದು.
ಎಲ್ಲೋ ಒಂದೆಡೆ ಏಮಾರಿದ ಜನರ ಕಾರಣದಿಂದಾಗಿ ಯೋಗ್ಯವಲ್ಲದ ವ್ಯಕ್ತಿಯು ಗೆದ್ದು ಬರಬಹುದು. ಆದರೆ ಆತ ಅಷ್ಟೇನೂ ಸಮರ್ಥನಲ್ಲ ಎಂದು ಅರಿವಾದರೆ ಮತ್ತೊಂದು ಬಾರಿ ಆತ ಅದೆಷ್ಟೇ ಆಮಿಷವನ್ನು ಒಡ್ಡಿದರೂ ಕೂಡ ಆತನಿಗೆ ಮತ ನೀಡದೆ ಇರುವುದರ ಮೂಲಕ ಬುದ್ಧಿ ಕಲಿಸಿದ ಉದಾಹರಣೆಗಳು ಸಾಕಷ್ಟು ಇವೆ.
ಅದೇನೇ ಇರಲಿ, ಚುನಾವಣೆ ಎಂಬುದು ಪ್ರಜಾತಂತ್ರದ ಬಹುದೊಡ್ಡ ಹಬ್ಬ. ಪ್ರಜೆಗಳು ತಮ್ಮ ನಾಯಕನನ್ನು ಆಯ್ಕೆ ಮಾಡುವ ಈ ಹಬ್ಬದಲ್ಲಿ ಅಪಸವ್ಯಗಳು ಆಗದಂತೆ ಮಾಧ್ಯಮಗಳು ಎಚ್ಚರಿಕೆ ವಹಿಸಬೇಕು. ರಾಜಕಾರಣಿಗಳು ಅಸಭ್ಯವಾಗಿ ಮಾತನಾಡಿಕೊಂಡಿರಲೂಬಹುದು, ಪರಸ್ಪರ ದೋಷಾರೋಪ ಮಾಡಿರಲೂಬಹುದು… ಆದರೆ ಅದು ಅವರ ಕ್ಷೇತ್ರದ ಜನತೆಯ ಮುಂದೆ ಮಾತ್ರ. ಮಾಧ್ಯಮದ ಮೂಲಕ ಹೆಚ್ಚು ಹೆಚ್ಚು ಜನರಿಗೆ ತಲುಪಿಸಿ ಅದು ಎಲ್ಲರನ್ನು ವ್ಯಾಪಿಸಿ ಪರ ವಿರೋಧಗಳ ಕೆಟ್ಟ ಅಲೆ ಉಳಿದ ಕ್ಷೇತ್ರಗಳ ಮೇಲೂ ವ್ಯತಿರಿಕ್ತ
ಪರಿಣಾಮ ಬೀರಬಹುದು. ನಾಗರಿಕ ಪ್ರಜ್ಞೆಯಿಂದ ನಿಷ್ಪಕ್ಷಪಾತವಾಗಿ ವಿಷಯಗಳನ್ನು ಜನರಿಗೆ ತಲುಪಿಸಬೇಕು, ಪ್ರಚೋದನಕಾರಿ ಹೇಳಿಕೆಗಳನ್ನು ಪದೇ ಪದೇ ಪ್ರಸಾರ ಮಾಡಬಾರದು ಎಂದು ಅವರನ್ನು ಸವಿನಯದಿಂದ ಪ್ರಾರ್ಥಿಸೋಣ.
ಇಂದು ಚುನಾವಣೆಯಲ್ಲಿ ಜಿದ್ದಾಜಿದ್ದಿನ ಪ್ರಯತ್ನ ಮಾಡುವವರು ತಮ್ಮ ರಾಜಕೀಯ ಬೆಳವಣಿಗೆಗೋಸ್ಕರ ಕೆಲವೇ ದಿನಗಳಲ್ಲಿ ಹೆಗಲ ಮೇಲೆ ಕೈ ಹಾಕಿ ದೋಸ್ತಿ ಮಾಡಬಹುದು.
ಆದರೆ ಅವರ ಮತ್ತು ಪಕ್ಷದ ಮೇಲಿನ ಅಭಿಮಾನದ ಕಾರಣ ಕಾರಣ ಮನಸ್ತಾಪ ಮಾಡಿಕೊಂಡ ಜನರು ಅಷ್ಟು ಬೇಗನೆ ಒಂದಾಗುವುದಿಲ್ಲ ಎಂಬ ಪ್ರಜ್ಞೆಯನ್ನು ನಾವು ಪ್ರಜೆಗಳು ಹೊಂದೋಣ, ಆ ಮೂಲಕ ಜವಾಬ್ದಾರಿಯುತ ನಾಗರಿಕರಾಗಿ ನಮ್ಮ ಕರ್ತವ್ಯ ನಿರ್ವಹಿಸೋಣ.
– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ

