ಢವಳಗಿ ಹಳ್ಳದ ಬಳಿ ಪಲ್ಟಿಯಾದ ಕಾರು | ಈರ್ವರ ಸಾವು
ಮುದ್ದೇಬಿಹಾಳ: ಮದುವೆಗೆಂದು ತೆರಳಿದ್ದ ಕುಟುಂಬದ ಇಬ್ಬರನ್ನು ದುರ್ವಿಧಿ ಮಸಣಕ್ಕೆ ಕರೆದೊಯ್ದ ಘಟನೆ ತಾಲೂಕಿನ ಢವಳಗಿ ವ್ಯಾಪ್ತಿಯ ಹಳ್ಳದ ಬಳಿ ರವಿವಾರ ರಾತ್ರಿ ೧೦-೪೫ ರ ವೇಳೆ ಸಂಭವಿಸಿದೆ.
ಬಾಗೇವಾಡಿ ತಾಲೂಕು ಮಸೀಬಿನಾಳ ಗ್ರಾಮದ ನಿವೃತ್ತ ಯೋಧ ರಾಚಯ್ಯ ಪುರಾಣಿಕಮಠ(೩೭) ಮತ್ತು ತಾಳಿಕೋಟೆ ತಾಲೂಕಿನ ಜಲಪೂರ ಗ್ರಾಮದ ಪುಷ್ಪಾವತಿ ಹಿರೇಮಠ(೫೫) ಮೃತ ದುರ್ದ್ದೆವಿಗಳು. ಮದುವೆ ಮುಗಿಸಿಕೊಂಡು ಬರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಸ್ಥಳದಲ್ಲೇ ಪುಷ್ಪಾವತಿ ಮೃತಳಾಗಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ರಸ್ತೆ ಮಧ್ಯೆ ರಾಚಯ್ಯ ಅಸುನೀಗಿದ್ದಾರೆ.
ಘಟನೆಯಲ್ಲಿ ಮೃತ ಸೈನಿಕ ರಾಚಯ್ಯನ ಪತ್ನಿ ಈರಮ್ಮ ಪುರಾಣಿಕಮಠ, ಮಕ್ಕಳಾದ ಶಿವಕುಮಾರ ಪುರಾಣಿಕಮಠ ಮತ್ತು ಸಂಪತಕುಮಾರ ಪುರಾಣಿಕಮಠ ಪ್ರಾಣಾಪಾಯದಿಂದ ಪಾರಾಗಿದ್ದು, ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ದೌಡಾಯಿಸಿದ ಪಿಎಸ್‌ಐ ಸಂಜೀವ ತಿಪರೆಡ್ಡಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

