ಲೇಖನ
– ಅವಿನಾಶ ಸೆರೆಮನಿ.
ಬೈಲಹೊಂಗಲ
ಉದಯರಶ್ಮಿ ದಿನಪತ್ರಿಕೆ
ಅಕ್ಷರಗಳ ಮೂಲಕ ವಿದ್ಯೆಯನು ಪರಿಚಯಿಸುತ ಅಜ್ಞಾನದ ಕತ್ತಲೆ ಅಳಿಸಿ ಜ್ಞಾನವ ಧಾರೆ ಎರೆಯುವ ನಿಸ್ವಾರ್ಥ ಜೀವಿ ಅರಿವಿನ ಬೆಳಕನು ಸದಾ ನಮ್ಮೊಳಗೆ ಬೆಳಗುತ ಸಂತೃಪ್ತ ಬದುಕಿಗೆ ದೇವರ ಪ್ರತಿರೂಪಿಯಾಗಿ ಸದಾ ಮಾರ್ಗದರ್ಶನ ಮಾಡುತ್ತ ತಪ್ಪಿದಾಗ ತಿದ್ದಿ ಬುದ್ದಿಯ ಹೇಳಿ ಮುನ್ನಡೆಸುವ ಮಹಾನ್ ಶಕ್ತಿಯೇ ಗುರು. ತಾಯಿಯು ನಮಗೆ ಜನ್ಮ ನೀಡಿದರೆ ಗುರುವು ಬದುಕಿಗೆ ಜನ್ಮ ನೀಡುತ್ತಾರೆ ಎಂಬುದು ಅಕ್ಷರಶ:ಸತ್ಯ
ಗುರುವಿಲ್ಲದ ಬದುಕು ದಿಕ್ಕಿಲ್ಲದ ದೋಣಿಯಂತೆ ಗುರುವು ಜೊತೆಗಿದ್ದರೆ ದೀಪದ ಬೆಳಕಿನಲಿ ಸಾಗುವ ಪಯಣದಂತೆ ಎಂಬ ಸಾಲುಗಳು ಬದುಕಿನಲ್ಲಿ ಗುರುವಿನ ಮಹತ್ವವನ್ನು ಸಾರಿ ಹೇಳುತ್ತವೆ.

ಶಾಲೆಯ ಮೆಟ್ಟಿಲೆರುವಾಗ ಮನಸು ಖಾಲಿ ಖಾಲಿ. ದಿನಗಳು ಕಳೆದಂತೆ ಪ್ರತಿದಿನ ಒಂದೊಂದೇ ಅಕ್ಷರಗಳನ್ನು ಕಲಿಸುತ ನಮ್ಮೊಳಗೆ ಜ್ಞಾನದ ಬೀಜವನ್ನು ಬಿತ್ತುತ್ತಾರೆ.ಈ ಅಕ್ಷರಗಳೆ ಕನಸುಗಳಿಗೆ ರೆಕ್ಕೆಗಳಾಗಿ ಸುಂದರ ಬದುಕಿಗೆ ದಾರಿದೀಪವಾ ಗುತ್ತವೆ.ಏನು ಅರಿಯದ ಮನಸೊಳು ತಮ್ಮಯ ಕರ ಸ್ಪರ್ಶದಿಂದ ವಿದ್ಯೆಯನು ಕರುಣಿಸಿ ತಮ್ಮ ಮಕ್ಕಳಿಗಿಂತ ಹೆಚ್ಚು ಕಾಳಜಿ ವಹಿಸಿ ಇಡೀ ಬದುಕನ್ನು ನಮಗಾಗಿ ಮೀಸಲಿಟ್ಟು ಸದಾ ಮಾರ್ಗದರ್ಶನ ಮಾಡುವ ನಿಮ್ಮ ನಿಸ್ವಾರ್ಥ ಸೇವೆ ನಮಗೆಲ್ಲ ದಾರಿದೀಪ. ತಪ್ಪು ಮಾಡಿದಾಗ ಬೆತ್ತದಿಂದ ಹೊಡೆದು ಗೆದ್ದಾಗ ಪ್ರೀತಿಯ ಅಪ್ಪುಗೆಯಿಂದ ಬಿಗಿದಪ್ಪಿ ನಲಿದು ಭಾವಿ ಭವಿಷ್ಯಕ್ಕೆ ಬೆಳಕಾದಿರಿ.
ನಮ್ಮ ಹಳ್ಳಿಯ ಸರ್ಕಾರಿ ಶಾಲೆಯೊಂದರಲ್ಲಿ ನಡೆದ ನೈಜ ಘಟನೆ ಇದಕ್ಕೆ ಉತ್ತಮ ಉದಾಹರಣೆ. ಅತ್ಯಂತ ಬಡ ಕುಟುಂಬದ ವಿದ್ಯಾರ್ಥಿಯೊಬ್ಬನಿಗೆ ಓದಿನ ಮೇಲೆ ಅಪಾರ ಆಸಕ್ತಿ ಇತ್ತು. ಮನೆಯ ಕಡುಬಡತನ ಪರಿಸ್ಥಿತಿಯಿಂದ ಶಾಲೆ ಬಿಡುವ ನಿರ್ಧಾರಕ್ಕೆ ಬಂದಿದ್ದನು. ಇದನ್ನು ಅರಿತ ಗಣಿತ ವಿಷಯದ ಶಿಕ್ಷಕರಾದ ಕೊಪ್ಪದ ಸರ್ ಅವರು ತಮ್ಮ ಸಂಬಳದಿಂದ ಶಾಲೆಯ ವಿದ್ಯಾರ್ಥಿ ಶುಲ್ಕ ತುಂಬಿ ಪುಸ್ತಕಗಳನ್ನು ಕೊಡಿಸಿದರು. ಪ್ರತಿದಿನ ಶಾಲೆಯ ಅವಧಿಯ ನಂತರ ಉಚಿತವಾಗಿ ಪಾಠ ಹೇಳಿಕೊಟ್ಟರು. ಪರೀಕ್ಷೆಯಲ್ಲಿ ಅವನು ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದನು. ಕೆಲವು ವರ್ಷಗಳ ನಂತರ ಆತ ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾದಾಗ ತನ್ನ ಮೊದಲ ಸಾರ್ವಜನಿಕ ಭಾಷಣದಲ್ಲಿ ಹೀಗೆ ಹೇಳಿದನು “ನನ್ನ ಜೀವನವನ್ನು ಬದಲಿಸಿದ್ದು ಕೊಪ್ಪದ ಸರ್ ಅವರು ನನ್ನ ಮೇಲೆ ಇಟ್ಟಂತ ನಂಬಿಕೆ ಮತ್ತು ವಿಶ್ವಾಸ. ಹೀಗಾಗಿಯೇ ಇಂದು ಕನಸು ನನಸಾಗಿ ನಿಮ್ಮ ಮುಂದೆ ಒಬ್ಬ ಅಧಿಕಾರಿಯಾಗಿ ನಿಂತಿರುವೆ ಎಂದಾಗ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿ ಹೆಮ್ಮೆಪಟ್ಟರು.ಈ ಒಂದು ಉದಾಹರಣೆ ವಿದ್ಯಾರ್ಥಿಗಳ ಬದುಕನ್ನು ರೂಪಿಸುವಲ್ಲಿ ಗುರುವಿನ ಪಾತ್ರ ಎಷ್ಟು ಮುಖ್ಯ ಎಂಬುದನ್ನು ತಿಳಿಸುತ್ತದೆ.

ಗುರುವಿನ ಮಹತ್ವದ ಕುರಿತು ವಚನಕಾರರು ವಚನಗಳಲ್ಲಿ ಅರ್ಥಪೂರ್ಣವಾಗಿ ಬಣ್ಣಿಸಿದ್ದಾರೆ. ಅದರಲ್ಲಿ ಸರ್ವಜ್ಞನ ವಚನ ತುಂಬಾ ಅರ್ಥವತ್ತಾಗಿದೆ.
“ಗುರುವಿಂದ ಬಂಧುಗಳು ಗುರುವಿಂದ ಪರದೈವ
ಗುರುವಿಂದಲಾದುದು ಪುಣ್ಯ ಲೋಕಕ್ಕೆ ಗುರುವಿಂದ ಮುಕ್ತಿ ಸರ್ವಜ್ಞ”
ನಮಗೆ ನಿಜವಾದ ಬಂಧು, ದೈವ, ಸರ್ವಸ್ವವೂ ಗುರುವೇ ಆಗಿದ್ದಾನೆ. ಈ ಲೋಕದಲ್ಲಿ ನಮಗೆ ಪುಣ್ಯ ಲಭಿಸುವುದಾಗಲಿ ಅಥವಾ ಜೀವನದಲ್ಲಿ ಮುಕ್ತಿ (ಜ್ಞಾನ) ಸಿಗುವುದಾಗಲಿ, ಅದು ಕೇವಲ ಗುರುವಿನ ಕೃಪೆಯಿಂದ ಮಾತ್ರ ಸಾಧ್ಯ.ಎಂದು ಹೇಳುವುದರ ಮೂಲಕ ಬದುಕಿನಲ್ಲಿ ಗುರುವಿನ ಪ್ರಾಮುಖ್ಯತೆ ತಿಳಿಸಿದ್ದಾರೆ
ಗುರು ಎಂಬುದು ಕೇವಲ ನಾಲ್ಕು ಗೋಡೆಗಳ ಮಧ್ಯೆ ಪಾಠ ಮಾಡುವ ವ್ಯಕ್ತಿಯಲ್ಲ ಕತ್ತಲೆಯನ್ನು ಸವರಿ ಬೆಳಕನ್ನು ನೀಡುವ ಒಂದು ಚೇತನ. “ಗುರು ಬ್ರಹ್ಮ ಗುರು ವಿಷ್ಣು” ಎಂಬ ಶ್ಲೋಕದಂತೆ, ನಮಗೆ ಜನ್ಮ ನೀಡಿದ ಪೋಷಕರು ಮೊದಲ ಗುರುವಾದರೆ, ಬದುಕುವ ದಾರಿಯನ್ನು ತೋರಿಸುವ ಶಿಕ್ಷಕರು ಎರಡನೇ ಗುರು. ಕಲ್ಲು ಬಂಡೆಯಂತಿರುವ ಪ್ರತಿ ವಿದ್ಯಾರ್ಥಿಯ ಭವಿಷ್ಯವನ್ನು ಕೆತ್ತಿ ಸುಂದರ ಮೂರ್ತಿಯನ್ನಾಗಿಸುವ ಶಿಲ್ಪಿ ಗುರು. ಅವರ ಮಾರ್ಗದರ್ಶನವಿಲ್ಲದೆ ಯಶಸ್ಸಿನ ಶಿಖರವನ್ನು ತಲುಪಲು ಸಾಧ್ಯವಿಲ್ಲ. ಆದ್ದರಿಂದ, ನಮ್ಮನ್ನು ಯೋಗ್ಯ ನಾಗರಿಕರನ್ನಾಗಿ ರೂಪಿಸಿದ ಸಂತೃಪ್ತಿ ಜೀವನ ರೂಪಿಸಿಕೊಳ್ಳಲು ದಾರಿದೀಪವಾದ ಪ್ರತಿಯೊಬ್ಬ ಗುರುಗಳಿಗೂ ನಾನು ಶಿರಬಾಗಿ ತಲೆ ಬಾಗುವೆ. ಗುರುವನು ಅನುದಿನ ನೆನೆಯೋಣ ಸುಂದರ ಬದುಕು ರೂಪಿಸಿದ್ದಕ್ಕೆ ಧನ್ಯವಾದಗಳನು ಸಲ್ಲಿಸೋಣ.


