ಮೋರಟಗಿಯಲ್ಲಿ ಪಂಚ ಗ್ಯಾರಂಟಿ ಕಾರ್ಡ್ ಬಿಡುಗಡೆ ಸಮಾರಂಭದಲ್ಲಿ ಸಚಿವ ಎಚ್.ಕೆ.ಪಾಟೀಲ ಅಭಿಮತ
ಮೋರಟಗಿ: ಚುನಾವಣೆ ಬಂದಾಗ ಮಾತ್ರ ಇವರಿಗೆ ರಾಮ ನೆನಪಾಗುತ್ತಾನೆ. ಹಿಂದೂ ಮುಸ್ಲಿಮರ ನಡುವೆ ದ್ವೇಷದ ಮನೋಭಾವ ಬೆಳೆಸುವುದು ಮತ್ತು ಮತಗಳಿಸಲು ಬಣ್ಣ ಬಣ್ಣದ ಮಾತುಗಳನ್ನಾಡುವುದೇ ಬಿಜೆಪಿಯ ಸಾಧನೆಯಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ ಹರಿಹಾಯ್ದರು.
ತಾಲೂಕಿನ ಮೋರಟಗಿ ಗ್ರಾಮದ ಸಿದ್ದಮುನಿ ಆಶ್ರಮ ಆವರಣದಲ್ಲಿ ಭಾನುವಾರ ಮೀಸಲು ಕ್ಷೇತ್ರ ಲೋಕಸಭಾ ಚುನಾವಣಾ ನಿಮಿತ್ಯವಾಗಿ ಹಮ್ಮಿಕೊಂಡ ಕಾರ್ಯಕರ್ತರ ಸಭೆ ಹಾಗೂ ಪಂಚ ಗ್ಯಾರಂಟಿ ಕಾರ್ಡ್ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೇ ಪ್ರತಿಯೊಬ್ಬರ ಖಾತೆಗೆ ೧೫ಲಕ್ಷ ರೂ.ಜಮಾ ಮಾಡುವುದಾಗಿ ಹೇಳಿದ್ದರು. ಆದರೆ ಆ ಭರವಸೆ ಈಡೇರಿದೆಯೇ, ಒಳ್ಳೆಯ ದಿನಗಳು ಬರಲಿವೆ ಎಂದಿದ್ದರು ಬಂದಿವೆಯೇ ಎಂದು ಪ್ರಶ್ನಿಸಿದರು.
ರೈತರ ಸಾಲ ಮನ್ನಾ ಮಾಡುವಂತೆ ಕೋರಿದರೆ ದೇಶ ದಿವಾಳಿಯಾಗುತ್ತದೆ ಎನ್ನುತ್ತಾರೆ. ಉದ್ಯಮಿಗಳ ಕೋಟಿ, ಕೋಟಿ ಸಾಲವನ್ನು ಮನ್ನಾ ಮಾಡಿದರೆ ದೇಶ ದಿವಾಳಿ ಆಗುವುದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.
ರೈತರ ಸಾಲ ಮನ್ನಾ ಮಾಡಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ನಮ್ಮ ಸರಕಾರ ನುಡಿದಂತೆ ನಡೆದಿದೆ. ಚುನಾವಣೆ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಭರವಸೆ ಈಡೇರಿಸಿದೆ. ಗ್ಯಾರಂಟಿ ಯೋಜನೆಯಿಂದ ಜನತೆಗೆ ಸಾಕಷ್ಟು ಅನುಕೂಲವಾಗಿದೆ. ಇದೇ ರೀತಿ ಕೇಂದ್ರದಲ್ಲಿ ೨೫ ಯೋಜನೆಗಳ ಭರವಸೆ ನೀಡಲಾಗಿದ್ದು, ನಮ್ಮ ಸರಕಾರ ರಚನೆಯಾಗುತ್ತಿದ್ದಂತೆ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದು. ಗಾಳಿ ಮಾತಿಗೆ ಕಿವಿಗೊಡದೇ ಎಲ್ಲರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ಆಲಗೂರ ಅವರಿಗೆ ನೀವು ನೀಡುವ ಮತದಲ್ಲಿ ರಾಜ್ಯದ ಬಡವರ, ಜನ ಸಾಮಾನ್ಯರ ಹಿತ ಅಡಗಿದೆ ಎಂದರು.
ಈ ವೇಳೆ ಶಾಸಕ ಅಶೋಕ ಮನಗೂಳಿ ಮಾತನಾಡಿ, ಕಳೆದ ೧೫ ವರ್ಷಗಳಿಂದ ಅಧಿಕಾರದಲ್ಲಿರುವ ಸಂಸದ ರಮೇಶ ಜಿಗಜಿಣಗಿ ಅವರು ತಾಲೂಕು ಕ್ಷೇತ್ರಗಳನ್ನೂ ಮರೆತಿದ್ದಾರೆ. ಅವರ ಅವಧಿಯಲ್ಲಿ ಒಂದೇ ಒಂದು ಅಡಿಗಲ್ಲು ಸಮಾರಂಭ ನಡೆದಿಲ್ಲ. ಅವರ ಅಭಿವೃದ್ಧಿ ಶೂನ್ಯವಾಗಿದೆ. ಕೇವಲ ಮೋದಿ ಅವರ ಹೆಸರಿನಲ್ಲಿ ಮತ ಕೇಳುತ್ತಾರೆ. ಇದು ಬಹಳ ದಿನ ನಡೆಯದು. ಈ ಬಾರಿ ಜನ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ನಮ್ಮ ರಾಜ್ಯದ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ಯಾವುದೇ ದಲ್ಲಾಳಿಗಳ ಹಾವಳಿ ಇಲ್ಲದೇ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುತ್ತಿದೆ. ಕೊಟ್ಟ ಭರವಸೆ ಈಡೇರಿಸಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಯೋಜನೆಗಳು ಜಗತ್ತಿಗೂ ಮಾದರಿಯಾಗಲಿವೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಶರಣಪ್ಪ ಸುಣಗಾರ, ಎಸ್.ಎಂ.ಪಾಟೀಲ್ ಗಣಿಹಾರ, ಸಿಂದಗಿ ಬ್ಲಾಕ್ ತಾಲೂಕಾಧ್ಯಕ್ಷ ಸುರೇಶ ಪೂಜಾರಿ, ಆಲಮೇಲ ಬ್ಲಾಕ್ ತಾಲೂಕಾಧ್ಯಕ್ಷ ಸಾದಿಕ್ ಸುಂಬಡ್, ಎಂ.ಕೆ.ಕಣ್ಣಿ, ಎನ್.ಆರ್.ತಿವಾರಿ, ಮುತ್ತಪ್ಪ ಸಿಂಗೆ, ಸಲೀಮ್ ಕಣ್ಣಿ, ಶ್ರೀಶೈಲ್ ಕೌಲಗಿ, ಮಲ್ಲಣ್ಣ ಸಾಲಿ, ಶಿವು ಹತ್ತಿ, ಚೇತನಗೌಡ ಪಾಟೀಲ್, ಗುರಣ್ಣಗೌಡ ಪಾಟೀಲ್, ಅರವಿಂದ ಹಂಗರಗಿ, ರಮೇಶ ಸುಳೆಭಾವಿ, ಜಯಶ್ರೀ ಹದನೂರ, ಶೈಲಜಾ, ಚಂದ್ರಶೇಖರ ದೇವರೆಡ್ಡಿ, ಚನ್ನು ವಾರದ, ಸುನಂದಾ ಯಂಪೂರೆ ಸೇರಿದಂತೆ ಕಾರ್ಯಕರ್ತರು, ಪಕ್ಷದ ಮುಖಂಡರು ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಗ್ರಾಮಕ್ಕೆ ಆಗಮಿಸಿದ ಸಚಿವ ಎಚ್.ಕೆ.ಪಾಟೀಲ ಅವರಿಗೆ ಪುಷ್ಪ ಸಮರ್ಪಿಸುವ ಮೂಲಕ ಬಸ್‌ನಿಲ್ದಾಣದ ಬಳಿ ಭವ್ಯವಾಗಿ ಸ್ವಾಗತಿಸಿಕೊಂಡು ಮೋರಟಗಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ೧೬ ಹಳ್ಳಿಯ ಕಾರ್ಯಕರ್ತರು ಸೇರಿಕೊಂಡು ಬಸ್‌ನಿಲ್ದಾಣದಿಂದ ಸಿದ್ದಮುನಿಗಳ ಆಶ್ರಮದವರೆಗೆ ಬೃಹತ್ ಬೈಕ್ ರ‍್ಯಾಲಿ ನಡೆಸಿದರು. ೨ ಸಾವಿರಕ್ಕೂ ಅಧಿಕ ಕಾರ್ಯಕರ್ತರು ಸೇರಿ ಕಾಂಗ್ರೆಸ್ ಪರ ಘೋಷಣೆ ಕೂಗಿದರು.

