ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಹತ್ತಿರದ ರಾಷ್ಟ್ರೀಯ ಹೆದ್ದಾರಿ-೫೦ ರಲ್ಲಿ ಭಾನುವಾರ ಯಾವುದೇ ದಾಖಲೆಗಳಿಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ ರೂ. ೫೦ ಲಕ್ಷ ನಗದು ಹಣವನ್ನು ಅಧಿಕಾರಿಗಳ ತಂಡ ಜಪ್ತಿ ಮಾಡಿದೆ.
ಮನಗೂಳಿ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಕಾಂತ ಕಾಂಬಳೆ ಅವರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಜಯಪುರದಿಂದ ಚಿಕ್ಕಮಗಳೂರಿನ ಹತ್ತಿರದ ಅಜ್ಜಂಪುರಕ್ಕೆ ಹೋಗುತ್ತಿದ್ದ ಕಾರಿನಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ ಹಣದ ಕುರಿತು ಸಹಾಯಕ ಚುನಾವಣಾಧಿಕಾರಿಗಳಿಗೆ, ತಹಸೀಲ್ದಾರರಿಗೆ ಮಾಹಿತಿ ನೀಡಿದ ನಂತರ ಸ್ಥಳಕ್ಕೆ ಸಹಾಯಕ ಚುನಾವಣಾಧಿಕಾರಿ ಗಂಗಪ್ಪ ಎಂ., ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಡಿವೈಎಸ್ಪಿ ಗಿರಿಮಲ್ಲ ತಳಕಟ್ಟಿ, ಸಿಪಿಐ ಆನಂದರಾವ, ಎಫ್ಎಸ್ಟಿ ತಂಡದ ಮುಖ್ಯಸ್ಥ ದಾವಲಸಾಬ ನದಾಫ ಭೇಟಿ ನೀಡಿ ಕಾರಿನಲ್ಲಿ ದಾಖಲೆಯಿಲ್ಲದ ಇಲ್ಲದ ನಗದು ಹಣ ಎಣಿಕೆ ಮಾಡಿದಾಗ ರೂ. ೫೦ ಲಕ್ಷ ಇರುವದು ಗೊತ್ತಾಗಿದೆ. ದಾಖಲೆಯಿಲ್ಲದ ಈ ಹಣವನ್ನು ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಕಾರಿನಲ್ಲಿ ಮೂವರು ವ್ಯಕ್ತಿಗಳಾದ ಕಡುರ ತಾಲೂಕಿನ ಅಡಗೇರಿಯ ರಕ್ಷಿತ, ತರಿಕೇರಿ ತಾಲೂಕಿನ ಸೊಖೆಯ ಪ್ರಭು, ತರಿಕೇರಿಯ ತಾಲೂಕಿನ ಸೊಖೆಯ ಗೋಪಾಲ ಇದ್ದರು ಎಂದು ತಿಳಿದುಬಂದಿದೆ.
ಸಹಾಯಕ ಚುನಾವಣಾಧಿಕಾರಿ ಗಂಗಪ್ಪ ಎಂ. ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಮಾಹಿತಿ ಮೇರೆಗೆ ನಮ್ಮ ಅಧಿಕಾರಿಗಳ ತಂಡವು ಮನಗೂಳಿ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ ರೂ. ೫೦ ಲಕ್ಷ ನಗದು ಇಂದು ವಶಪಡಿಸಿಕೊಂಡಿದೆ. ಸ್ಥಳಕ್ಕೆ ಐಟಿ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಇದರ ಬಗ್ಗೆ ಮಾಹಿತಿ ನೀಡಲಾಗಿದೆ. ಮುಂದಿನ ಕ್ರಮವನ್ನು ಅವರು ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
Subscribe to Updates
Get the latest creative news from FooBar about art, design and business.
Related Posts
Add A Comment

