ಬಸವನಬಾಗೇವಾಡಿ: ಮರಾಠ ಸಮಾಜ ಬಾಂಧವರು ಸ್ವರಾಜ ಕಲ್ಪನೆ ತಂದ ಶಿವಾಜಿ ವಂಶಜರು. ಮರಾಠರು ಭಾರತೀಯ ಹಿಂದುಗಳಾಗಿದ್ದಾರೆ. ಮರಾಠ ಸಮಾಜದವರು ಮುಸ್ಲಿಂರ ವಿರೋಧಿಗಳಲ್ಲ. ನಮ್ಮ ಸಮಾಜ ಬಾಂಧವರು ರಾಜಕೀಯವಾಗಿ ನಿರ್ಣಾಯಕವಾಗಿ ಒಗ್ಗೂಟ್ಟು ಪ್ರದರ್ಶಿಸುವ ಅಗತ್ಯವಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಪಟ್ಟಣದ ಯಲ್ಲಾಲಿಂಗ ಮಠದ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಅಖಂಡ ಬಸವನಬಾಗೇವಾಡಿ ತಾಲೂಕಿನ ಪಕ್ಷಾತೀತವಾಗಿ ಭಾಗವಹಿಸಿದ್ದ ಮರಾಠ ಸಮಾಜ ಬಾಂಧವರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಛತ್ರಪತಿ ಶಿವಾಜಿಯನ್ನು ಮುಸ್ಲಿಂರ ವಿರೋಧಿ ಎಂದು ಗುರುತಿಸಲಾಗುತ್ತಿದೆ. ಶಿವಾಜಿ ಮಹಾರಾಜರ ಸೈನ್ಯದಲ್ಲಿ ೬೦ ಸಾವಿರ ಮುಸ್ಲಿಂ ಸೈನಿಕರು ಇದ್ದರು. ಇವರ ೩೩ ಅಂಗರಕ್ಷಕರಲ್ಲಿ ೧೩ ಜನ ಮುಸ್ಲಿಂ ಅಂಗರಕ್ಷಕರು ಇದ್ದರು ಎಂದು ಇತಿಹಾಸದಿಂದ ತಿಳಿದುಬರುತ್ತದೆ. ಮರಾಠ ಸಮಾಜ ಬಾಂಧವರು ಇತಿಹಾಸವನ್ನು ಅರಿತುಕೊಳ್ಳಬೇಕಿದೆ. ಮರಾಠರು ಬಿಜೆಪಿಗೆ ಮತ ಹಾಕುತ್ತಾರೆ ಎಂಬುವದು ಸ್ವಲ್ಪಮಟ್ಟಿಗೆ ಸರಿಯಿದೆ. ಕಳೆದ ೧೦ ವರ್ಷದಲ್ಲಿ ನರೇಂದ್ರ ಮೋದಿ ಸರ್ಕಾರ ದೇಶದಲ್ಲಿ ಯಾವ ರೀತಿಯ ಆಡಳಿತ ನಡೆಸಿದೆ ಎಂಬುವದನ್ನು ಅರಿತುಕೊಳ್ಳಬೇಕಿದೆ. ನೋಟು ಬದಲಾವಣೆ ಮಾಡುವ ಭರದಲ್ಲಿ ಬಹಳ ಜನತೆಗೆ ತೊಂದರೆಯಾಯಿತು. ಪ್ರತಿಯೊಂದು ವಸ್ತುವಿನ ಮೇಲೆ ಜಿಎಸ್ಟಿ ಹಾಕುವ ಮೂಲಕ ಬೆಲೆ ದುಬಾರಿ ಮಾಡಿದ್ದಾರೆ. ಇದರಿಂದ ಬಡವರು, ರೈತರು, ಮಧ್ಯಮವರ್ಗದವರು ಜೀವನ ಹೇಗೆ ಮಾಡಬೇಕೆಂದು ಪ್ರಶ್ನಿಸಿದ ಅವರು, ಮರಾಠ ಸಮಾಜಕ್ಕೆ ಕಾಂಗ್ರೆಸ್ ಪಕ್ಷವು ಕಳೆದ ೧೯೫೦ ರಿಂದ ಸ್ಥಾನ ಕೊಡುತ್ತಾ ಬಂದಿದೆ. ನಮ್ಮ ಸಮಾಜದ ಅನೇಕರು ಮಂತ್ರಿಗಳಾಗಿದ್ದಾರೆ. ನನಗೂ ಮಂತ್ರಿ ಸ್ಥಾನ ಕಾಂಗ್ರೆಸ್ ನೀಡಿದೆ. ನಮ್ಮ ಸಮಾಜ ಬಾಂಧವರು ಈಗಲಾದರೂ ಆಲೋಚನೆ ಮಾಡಿ ರಾಜಕೀಯವಾಗಿ ಗುರುತಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಲೋಕಸಭೆ ಚುನಾವಣೆಯಲ್ಲಿ ಮತ ನೀಡಿದರೆ ಉತ್ತಮ ಎಂದರು.
೧೯೪೭ ರಿಂದ ೨೦೧೪ ರವರೆಗೆ ದೇಶದಲ್ಲಿ ಕಾಂಗ್ರೆಸ್ ಪಕ್ಷವು ಸಾಕಷ್ಟು ಅಭಿವೃದ್ಧಿ ಮಾಡಿದ ಫಲವಾಗಿಯೇ ದೇಶದಲ್ಲಿ ಆಹಾರ ಸ್ವಾವಲಂಬನೆ, ಉದ್ಯೋಗ ಸೃಷ್ಟಿ ಸೇರಿದಂತೆ ಅನೇಕ ಅಭಿವೃದ್ಧಿಯಾಗಿದೆ. ಇಷ್ಟು ಅವಧಿಯಲ್ಲಿ ದೇಶದ ಸಾಲ ೫೫ ಲಕ್ಷ ಕೋಟಿ ಇತ್ತು. ಅದೇ ೨೦೧೪ ರಿಂದ ೨೦೨೪ ರವರೆಗೆ ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ ದೇಶದ ಸಾಲ ೧೮೩ ಲಕ್ಷ ಕೋಟಿ ಆಗಿದೆ. ಇದರ ಬಗ್ಗೆ ಚರ್ಚೆಯಾಗಬೇಕಿದೆ. ಜಿಡಿಪಿ ದರವು ಕುಸಿದು ಹೋಗಿದೆ. ನರೇಂದ್ರ ಮೋದಿ ಸಾಹೇಬರ ಕಾಲದಲ್ಲಿ ರೈತರು ಕಟ್ಟಿದ ವಿಮೆ ಹಣದಿಂದ ವಿಮಾ ಕಂಪನಿಗಳು ೧೦ ಸಾವಿರ ಕೋಟಿ ಹಣ ಲಾಭ ಮಾಡಿಕೊಂಡಿವೆ. ರೈತರ ಸಾಲ ಮನ್ನಾ ಮಾಡಿಲ್ಲ. ಅವರಿಗೆ ವಿಮೆ ಹಣ ಸಹ ಬಂದಿಲ್ಲ ಎಂದರು.
ರಾಮ ಮಂದಿರ ನಿರ್ಮಾಣದ ಹಿಂದೆ ಬಿಜೆಪಿ ಕಾರ್ಯಕರ್ತರ ಶ್ರಮ ಬಹಳವಿದೆ. ಅವರು ಹಣ ಸಂಗ್ರಹ ಮಾಡಿ ಕೊಟ್ಟಿದ್ದರಿಂದಲೇ ರಾಮ ಮಂದಿರ ನಿರ್ಮಾಣವಾಗಿದೆ. ಅದೇ ನರೇಂದ್ರ ಮೋದಿ ಅವರು ರಾಮ ಮಂದಿರ ಉದ್ಘಾಟನೆಗೆ ಬಿಜೆಪಿ ಕಾರ್ಯಕರ್ತರನ್ನು ಆಹ್ವಾನಿಸದೇ ಕೇವಲ ಸ್ಟಾರ್ಗಳನ್ನು ಆಹ್ವಾನಿಸಿದರು. ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರ ಶಾಪ ಖಂಡಿತ ತಟ್ಟುತ್ತದೆ. ಟಿವ್ಹಿ, ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಮೋದಿ ರಾರಾಜಿಸುತ್ತಿದ್ದಾರೆ. ಜನರು ಇದನ್ನು ವೀಕ್ಷಿಸುವದು ಬೇಡ ಎಂದರು.
ನಾನು ರಾಜಕಾರಣಕ್ಕೆ ಬಂದು ೩೦ ವರ್ಷವಾಗಿದೆ. ನಮ್ಮ ಸಮಾಜ ಬಾಂಧವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು. ಬಡ ವಿದ್ಯಾರ್ಥಿಗಳಿದ್ದರೆ ನನಗೆ ಅವರನ್ನು ನೀಡಿದರೆ ಅವರಿಗೆ ಉಚಿತವಾಗಿ ಶಿಕ್ಷಣ ಸಿಗುವಂತೆ ಮಾಡುವೆ. ನನಗೆ ೧೦ ವರ್ಷ ಕಾಲ ಅವಕಾಶ ನೀಡಿದರೆ ಈ ಅವಧಿಯಲ್ಲಿ ಮರಾಠ ಸಮಾಜದ ಅಭಿವೃದ್ಧಿಗೆ ಮಾಡಲು ಬದ್ಧ. ಈ ಲೋಕಸಭೆ ಚುನಾವಣೆಯು ಬಿಜೆಪಿ-ಕಾಂಗ್ರೆಸ್ ನಡುವೆ ನಡೆದಿಲ್ಲ. ಶೋಷಿತ ಜನರ ಬದುಕಿನ ಉಳಿವಿಗಾಗಿ, ಸಂವಿಧಾನ ಸಂರಕ್ಷಣೆಗಾಗಿ, ಬಡವರನ್ನು ಸಂರಕ್ಷಣೆಗಾಗಿ, ಯುವಜನಾಂಗದ ಭವಿಷ್ಯಕ್ಕಾಗಿ ನಡೆದಿರುವ ಚುನಾವಣೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಮಾಜ ಬಾಂಧವರು ಕಾಂಗ್ರೆಸ್ಗೆ ಮತ ನೀಡಬೇಕೆಂದರು.
ಕಾಂಗ್ರೆಸ್ ಮುಖಂಡ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮರಾಠ ಸಮಾಜದ ಮುಖಂಡರಾದ ಅನಿಲ ಪವಾರ, ಗಂಗಾರಾಮ ಪವಾರ, ಬಸವರಾಜ ಬಿಜಾಪುರ, ಮಾರುತಿ ಪವಾರ, ಸಂಭಾಜಿ ಪವಾರ, ರಾಮು ಜಗತಾಪ, ಕಾಶೀನಾಥ ಹಿಂಗೋಲಿ, ಯಮನೂರಿ ಬಿದರಕುಂದಿ, ಮಹಾದೇವ ಘಾಟಗೆ, ಗೋಪಾಲ ಕನಸೆ, ದಶರಥ ಬೋಸಲೆ, ಸಚೀನ ಗಾಯಕವಾಡ, ಪ್ರಭಾಕರ ನಲವಡೆ, ಬಾಬು ನರಳೆ, ಶ್ಯಾಮರಾವ ಗಾಯಕವಾಡ, ರಾಜು ಪವಾರ, ಗುಂಡು ಗಾಯಕವಾಡ, ವೆಂಕಟೇಶ ಬಾಗೇವಾಡಿ, ಮಹೇಶ ತಿಳಗೂಳ, ಪುಂಡಲೀಕ ಜಗತಾಪ, ಅಪ್ಪು ಹಸಬೆ, ಗೋವಿಂದ ಜಾಧವ, ಮಾರುತಿ ಚವ್ಹಾಣ, ರಾಜು ಪವಾರ, ವೈ.ಬಿ.ಠೊಕೆ, ರಾಜು ಸಾವಂತ,ಬಾಳು ಚಿನಕೇಕರ, ಗೋಪಾಲ ನಿಕ್ಕಂ ಸೇರಿದಂತೆ ಇತರರು ಇದ್ದರು. ರಾಮು ಜಗತಾಪ ಸ್ವಾಗತಿಸಿ,ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

