ಕೈ ಸಚಿವ, ಶಾಸಕರ ಒಗ್ಗಟ್ಟು ಪ್ರದರ್ಶನ | ಬಸವ ಭೂಮಿಯಿಂದ ಮೊಳಗಿತು ಕಾಂಗ್ರೆಸ್‌ನ ‘ಲೋಕ ಕಹಳೆ’!
ಬಸವನ ಬಾಗೇವಾಡಿ: ಭೂಮಿ ಕೂಡ ಮೂರು ವರ್ಷಕ್ಕೊಮ್ಮೆ ಹೊಸ ಬೆಳೆ ಕೊಡುತ್ತೆ. ಆದರೆ, ಸದ್ಯದ ಸಂಸದ ಹದಿನೈದು ವರ್ಷದಿಂದ ಕೆಲಸವಿಲ್ಲದೇ ಕಾಲೂರಿ ಕುಳಿತಿದ್ದಾರೆ ಎಂದು ಸಕ್ಕರೆ ಹಾಗೂ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಕಿಡಿ ಕಾರಿದರು.
ಸೋಮವಾರ ಇಲ್ಲಿ ಕಾಂಗ್ರೆಸ್‌ನ ಲೋಕಸಭೆ ಅಭ್ಯರ್ಥಿ ಪ್ರೊ.ರಾಜು ಆಲಗೂರ್ ಅವರ ಪರವಾಗಿ ನಡೆದ ಬೃಹತ್ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿ, ಭೂಮಿಯ ಬುದ್ಧಿವಂತಿಕೆಯನ್ನು ಮತದಾರರೂ ಉಪಯೋಗಿಸಿಕೊಂಡು ಬಿಜೆಪಿಯ ಸಂಸದನನ್ನು ಮನೆಗೆ ಕಳಿಸಿ ಎಂದು ಹೇಳಿದರು.
ಕೇಂದ್ರ ಸರಕಾರ ನಮ್ಮಿಂದ ನಾಲ್ಕು ಲಕ್ಷ ಕೋಟಿಯಷ್ಟು ಜಿಎಸ್‌ಟಿ ಪಡೆಯುತ್ತದೆ. ಅದರಲ್ಲಿ ಪಾಲು ಕೊಡಲ್ಲ. ಒಬ್ಬ ಹೆಣ್ಣಮಗಳಾಗಿರುವ ಹಣಕಾಸು ಸಚಿವೆಗೆ ಕರುಣೆಯೇ ಇಲ್ಲ. ಅತಿ ಹೆಚ್ಚು ತೆರಿಗೆ ನೀಡುವ ನಮಗೆ ಅನ್ಯಾಯ ಮಾಡಲಾಗಿದೆ. ಇವತ್ತು ಸುಪ್ರೀಂ ಕೋರ್ಟ್ ಬರ ಪರಿಹಾರ ನೀಡಲು ತಾಕೀತು ಮಾಡಿರುವುದು ಇವರ ಬೇಜಾವ್ದಾರಿತನಕ್ಕೆ ಸಾಕ್ಷಿ ಎಂದರು.
ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ದೇಶವನ್ನು ಸ್ವಾವಲಂಬಿಯಾಗಿ ಕಟ್ಟಿದ್ದು ಕಾಂಗ್ರೆಸ್. ಸೂಜಿಯೂ ಉತ್ಪಾದನೆಯಾಗದ ದೇಶದಲ್ಲಿ ದೊಡ್ಡ ದೊಡ್ಡ ಕಾರಖಾನೆ, ಆಸ್ಪತ್ರೆ, ವಿಶ್ವವಿದ್ಯಾಲಯ, ಅಣೆಕಟ್ಟುಗಳನ್ನು ಕಟ್ಟಿದ್ದು ನಮ್ಮ ಪಕ್ಷ. ಮೋದಿಯವರು ಬಂದ ಮೇಲೆ ಎಲ್ಲ ಆಗಿದೆ ಎನ್ನುವುದು ಸುಳ್ಳು ಎಂದು ಹೇಳಿದರು.
ಬೆಲೆ ಏರಿಕೆಯಿಂದ ದೇಶ ಬಸವಳಿದಿದೆ. ಸಿಲಿಂಡರ್ ಸೇರಿ, ಉಣ್ಣುವ ಎಣ್ಣೆ ಎಲ್ಲ ತುಟ್ಟಿಯಾಗಿದೆ. ಉದ್ಯೋಗ ನೀಡಲಿಲ್ಲ, ರೈತರ ಏಳಿಗೆ ಬಯಸಲಿಲ್ಲ. ಅವೈಜ್ಞಾನಿಕ ರೀತಿಯಲ್ಲಿ ನೋಟ್ ಬ್ಯಾನ್ ಮಾಡಿ ಕಷ್ಟ ಕೊಟ್ಟರು. ಯಾರ ಬದುಕನ್ನೂ ಕಟ್ಟಿಕೊಡಲಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಾಮಾಣಿಕ ಎಂದು ಇಮೇಜ್ ಸೃಷ್ಟಿಸಿಕೊಂಡಿದ್ದ ಮೋದಿಯವರ ಬಣ್ಣ ಚುನಾವಣಾ ಬಾಂಡ್‌ನಿಂದ ಬಯಲಾಯಿತು. ಸ್ವಿಸ್ ಬ್ಯಾಂಕಿನ ಹೆಸರೇಳುತ್ತಿದ್ದವರ ಬಂಡವಾಳ ಇದಾಗಿದೆ. ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುತ್ತೇವೆ. ನೀರಾವರಿ, ಪ್ರವಾಸೋದ್ಯಮ ಸೇರಿ ಉಳಿದೆಲ್ಲ ಪ್ರಗತಿಗೆ ಬದ್ಧರಿದ್ದೇವೆ ಎಂದು ಹೇಳಿದರು.
ನಾಗಠಾಣ ಶಾಸಕರಾದ ವಿಠ್ಠಲ ಕಟಕದೊಂಡ ಮಾತನಾಡಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೆಲ್ಲ ರಾಜ್ಯ ಅಭಿವೃದ್ಧಿ ಕಂಡಿದೆ. ಬರಗಾಲ ಪೀಡಿತ ಜಿಲ್ಲೆ ಹಸಿರಾಗಿದೆ. ಸಚಿದ್ವಯರಿಂದ ಜಿಲ್ಲೆ ಅಭಿವೃದ್ಧಿ ಕಂಡಿದೆ. ಅದಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ಈಗಿರು ಸಂಸದ ನಿಷ್ಕ್ರಿಯರಾಗಿದ್ದಾರೆ. ಒಂದು ರೈಲು ಆರಂಭಿಸಲು ಪತ್ರ ಬರೆದಿದ್ದಕ್ಕೆ ಉತ್ತರ ಕೊಡುವ ಸೌಜನ್ಯ, ಜವಾಬ್ದಾರಿ ಕೂಡ ಅವರಿಗೆ ಇಲ್ಲ. ಇಂತಹವರಿಗೆ ಅಧಿಕಾರ ಕೊಟ್ಟು ಏನುಪಯೋಗ. ಆಲಗೂರರಿಗೆ ಮತ ನೀಡಿದರೆ ಇವರಿಗೆ ಕೇಳಿ ಕೆಲಸ ಮಾಡಿಕೊಳ್ಳಬಹುದು ಎಂದರು.
ಪರಿಷತ್ ಸದಸ್ಯ ಪ್ರಕಾಶ ರಾಠೋಡ, ಸಿಂದಗಿ ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ಶರಣಪ್ಪ ಸುಣಗಾರ, ಅಭ್ಯರ್ಥಿ ರಾಜು ಆಲಗೂರ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಮುದ್ದೇಬಿಹಾಳ ಶಾಸಕ, ಸಾಬೂನು ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಮಾತನಾಡಿದರು.
ಎಐಸಿಸಿ ವೀಕ್ಷಕ ಸಯ್ಯದ್ ಬುರುನುದ್ದೀನ್ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿಜಯಪುರದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಎಂದರು.
ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಶೇಖರಗೌಡ ಪಾಟೀಲ, ಈರಣ್ಣ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ನಾಯಕ, ರುಕ್ಸಾನಾ ಉಸ್ತಾದ, ಎ.ಎಂ.ಪಾಟೀಲ, ಶಿವನಗೌಡ ಗುಜಗೊಂಡ, ಸುರೇಶ ಹಾರಿವಾಳ ಅನೇಕರಿದ್ದರು.

