ದೇವರಹಿಪ್ಪರಗಿ: ಬಿ.ಬಿ.ಇಂಗಳಗಿ ಗ್ರಾಮಸ್ಥರಿಂದ ತಹಶೀಲ್ದಾರ ಕಚೇರಿಗೆ ಮುತ್ತಿಗೆ
ದೇವರಹಿಪ್ಪರಗಿ: ಗ್ರಾಮದಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಸಲು ಆಗ್ರಹಿಸಿ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಖಾಲಿ ಕೊಡಗಳೊಂದಿಗೆ ಆಗಮಿಸಿ ತಹಶೀಲ್ದಾರ ಕಚೇರಿ ಮುಂದೆ ಧರಣಿ ಕುಳಿತು ಪ್ರತಿಭಟಿಸಿದರು.
ತಾಲ್ಲೂಕಿನ ಕೊಂಡಗೂಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಬಿ.ಇಂಗಳಗಿ ಗ್ರಾಮಸ್ಥರು ಬುಧವಾರ ತಹಶೀಲ್ದಾರ ಕಚೇರಿಗೆ ಆಗಮಿಸಿ ನೀರು ಪೂರೈಸದ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಡಿವಾಳಮ್ಮ ಅಗಸರ ಮಾತನಾಡಿ, ಪ್ರತಿ ವರ್ಷ ಬೇಸಿಗೆಯಲ್ಲಿ ನಮ್ಮ ಗ್ರಾಮ ವ್ಯಾಪ್ತಿಯಲ್ಲಿ ಕುಡಿಯುವ ನೀರು ದೊರೆಯದೇ ತುಂಬಾ ತೊಂದರೆಯಾಗುತ್ತಿದೆ. ಗ್ರಾಮದಲ್ಲಿಯ ಬೊರೆವೆಲ್ ನೀರು ಕುಡಿಯಲು ಯೋಗ್ಯವಾಗಿಲ್ಲ. ಇನ್ನೂ ಕೆಲವು ಬೊರೆವೆಲ್‌ಗಳು ಕೆಟ್ಟು ಹೋಗಿವೆ. ಕುಡಿಯುವ ನೀರು ದೊರೆಯುವ ಏಕೈಕ ಭಾವಿಯಲ್ಲಿ ನೀರು ಆಳಕ್ಕೆ ಇಳಿದಿದೆ. ಇನ್ನೂ ಗ್ರಾಮ ಪಂಚಾಯಿತಿ ೧೫ ದಿನಗಳಿಗೊಮ್ಮೆ ನೀರು ಪೂರೈಸುತ್ತದೆ ಹೀಗಾದರೆ ಜೀವನ ಮಾಡುವುದಾದರೂ ಹೇಗೆ ಎಂದು ಪ್ರಶ್ನೀಸಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಸಲೀಮ್ ವಠಾರ ಹಾಗೂ ಸಾಹಿರಾಭಾನು ಬಾಗಲಕೋಟ ಮಾತನಾಡಿ, ಕೂಡಲೇ ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಇಲ್ಲವಾದರೆ ಭಾವಿಯ ಹತ್ತಿರ ಬೊರೆವೆಲ್ ಕೊರೆಯಿಸಿ ಸಿಹಿನೀರು ವ್ಯವಸ್ಥೆ ಮಾಡಬೇಕು ಎಂದು ಹೇಳುತ್ತಾ, ನೀರಿನ ಸಮಸ್ಯೆ ನಿವಾರಣೆಗಾಗಿ ತಾಲ್ಲೂಕು ಆಡಳಿತಕ್ಕೆ ಪ್ರತಿವರ್ಷ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಬಾರಿ ಮಕ್ಕಳೊಂದಿಗೆ ಖಾಲಿ ಕೊಡ ಹಿಡಿದುಕೊಂಡು ಪ್ರತಿಭಟನೆಗೆ ಇಳಿದಿದ್ದೇವೆ. ಆದರೆ ಇಂದು ತಹಶೀಲ್ದಾರ ನೆಪಕ್ಕಾದರೂ ಸಮಾದಾನದಿಂದ ನಮ್ಮ ಸಮಸ್ಯೆ ಕೇಳದೇ, ನಿಮ್ಮ ಗ್ರಾಮಕ್ಕೆ ಬರುತ್ತೇನೆ ಈಗ ಕಚೇರಿ ಮುಂದಿನಿಂದ ಏಳಿ ಎಂದೂ ಹೇಳಿದ ಬಗೆ ಮಾತ್ರ ಸರಿಯೇನಿಸಲಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಬೆಳಿಗ್ಗೆ ೧೧ ಗಂಟೆಯಿಂದ ಸಾಯಂಕಾಲದವರೆಗೆ ಜರುಗಿದ ಧರಣಿಯಲ್ಲಿ ಶಹಜಾದಾಬಿ ಆವೇರಿ, ಫಾತಿಮಾ ಬಾಗಲಕೋಟ, ಲಾಲಬಿ ನಧಾಫ್, ಹಜರತಬಿ ನಧಾಫ್, ಇಂದ್ರಾಬಾಯಿ ಅಗಸರ, ಹುಸೇನಬಿ ಶೇಖ್, ಸಾಹಿರಾಬೇಗಂ ನಧಾಫ್, ಇಮಾಮಬಿ ನಧಾಫ್, ರೋಷನಬಿ ಆವೇರಿ, ಶಾರದಾ ಮೀನಗಾರ, ಶರಣಮ್ಮ ಕದನಳ್ಳಿ, ಹಲಿಮಾ ವಠಾರ, ಜಯಶ್ರೀ ಮಲ್ಲೇದ, ಪರ್ವೀನ್ ಬಾಗಲಕೋಟ, ಖಾಜಾಬಿ ನಧಾಫ್, ಬಿಸ್ಮೀಲ್ಲಾ ವಠಾರ, ಮಹಾದೇವಿ ಮಲ್ಲೇದ, ಮಾಲನಬಿ ಬಾಗಲಕೋಟ, ಕೌಸರಬಿ ವಠಾರ ಸೇರಿದಂತೆ ಇತರರು ಇದ್ದರು.

