ಉದಯರಶ್ಮಿ ದಿನಪತ್ರಿಕೆ
ಬಾಗಲಕೋಟೆ (ಜಮಖಂಡಿ): ಜಮಖಂಡಿ ಸಾರಿಗೆ ಘಟಕಕ್ಕೆ ನೂತನ ಘಟಕ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಂಡ ಸದಾಶಿವ ಶೀಲವಂತರ ಅವರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಎಸ್‌ಸಿ-ಎಸ್‌ಟಿ ನೌಕರರ ಸಂಘದ ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಾಲಾಜಿ ಗುಡಿಮನಿ, ಪ್ರಧಾನ ಕಾರ್ಯದರ್ಶಿ ಶಂಕರ ಭಜಂತ್ರಿ, ರಾಜ್ಯ ಸಮಿತಿ ಸದಸ್ಯ ಪ್ರಭು ಬಿದರಿ, ದಿಲೀಪ್ ದೊಡಮನಿ, ವಾಯುವ್ಯ ವಲಯದ ಪದಾಧಿಕಾರಿ ಬಾಲು ಬೆಕೆನಾಳ, ಘಟಕದ ಕಾರ್ಯಾಧ್ಯಕ್ಷ ಹನಮಂತ ಕಾಂಬಳೆ, ಕೇಂದ್ರ ಸಮನ್ವಯ ಕನ್ನಡ ಸಂಘದ ಅಧ್ಯಕ್ಷ ಆನಂದ ಕರಾತ ಹಾಗೂ ಮಲ್ಲು ಪೋತರಾಜ ಅವರು ನೂತನ ವ್ಯವಸ್ಥಾಪಕರಿಗೆ ಹೂಗುಚ್ಛ ನೀಡಿ ಶುಭಾಶಯ ಕೋರಿದರು.
ಈ ವೇಳೆ ಮಾತನಾಡಿದ ಸಂಘದ ಪದಾಧಿಕಾರಿಗಳು, ನೂತನ ಘಟಕ ವ್ಯವಸ್ಥಾಪಕರ ನೇತೃತ್ವದಲ್ಲಿ ಜಮಖಂಡಿ ಸಾರಿಗೆ ಘಟಕವು ಇನ್ನಷ್ಟು ಅಭಿವೃದ್ಧಿ ಹೊಂದಿ, ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಮಾದರಿ ಘಟಕವಾಗಿ ಹೊರಹೊಮ್ಮಲಿ ಎಂದು ಆಶಯ ವ್ಯಕ್ತಪಡಿಸಿದರು.
ನೂತನ ಘಟಕ ವ್ಯವಸ್ಥಾಪಕರಾದ ಸದಾಶಿವ ಶೀಲವಂತರ ಅವರು ಸಂಘದ ಪದಾಧಿಕಾರಿಗಳ ಶುಭಾಶಯಗಳಿಗೆ ಕೃತಜ್ಞತೆ ಸಲ್ಲಿಸಿ, ಸಿಬ್ಬಂದಿಯ ಸಹಕಾರದೊಂದಿಗೆ ಪ್ರಯಾಣಿಕ ಸ್ನೇಹಿ ಸೇವೆ ಹಾಗೂ ಆಡಳಿತದಲ್ಲಿ ಪಾರದರ್ಶಕತೆ, ಶಿಸ್ತು ಮತ್ತು ಉತ್ತಮ ಕಾರ್ಯಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಸಿಬ್ಬಂದಿ ಹಾಗೂ ವಿವಿಧ ವಿಭಾಗಗಳ ನೌಕರರು ಉಪಸ್ಥಿತರಿದ್ದರು.

