ಕನಮಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿದ ಸಚಿವ ಎಂ. ಬಿ. ಪಾಟೀಲ ಅಭಿಮತ
ವಿಜಯಪುರ: ಮೋದಿ ನೇತೃತ್ವದ ಕೇಂದ್ರ ಸರಕಾರದ ದೂರದೃಷ್ಠಿಯ ಕೊರತೆಯಿಂದಾಗಿ ಇಂದು ದೇಶದಲ್ಲಿ ರೂಪಾಯಿ ಮೌಲ್ಯ ಕುಸಿದು ಬೆಲೆ ಏರಿಕೆಯಿಂದ ಜನರು ತತ್ತರಿಸುವಂತಾಗಿದೆ ಎಂದು ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಬುಧವಾರ ಮುಸ್ಸಂಜೆ ಲೋಕಸಭೆ ಚುನಾವಣೆ ಹಿನ್ನೆಲೆ ತಿಕೋಟಾ ತಾಲೂಕಿನ ಕನಮಡಿಯಲ್ಲಿ ಜಿ. ಪಂ. ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ದೇಶಕ್ಕೆ ಏನು ಮಾಡಿದೆ ಎಂದು ಬಿಜೆಪಿಯವರು ಪ್ರಶ್ನಿಸುತ್ತಾರೆ. ಆದರೆ, ಕಾಂಗ್ರೆಸ್ ದೇಶಕ್ಜೆ ಸ್ವಾತಂತ್ರ್ಯ ತಂದು ಕೊಟ್ಟು ಸ್ವಾತಂತ್ರ್ಯ ನಂತರ ದೇಶವನ್ನು ಕಟ್ಟುವ ಕೆಲಸ ಮಾಡಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಕ್ಷದ ಲಕ್ಷಾಂತರ ಹಿರಿಯರು ತ್ಯಾಗ ಮತ್ತು ಬಲಿದಾನ ಮಾಡಿ ಹುತಾತ್ಮರಾಗಿದ್ದಾರೆ. ಆದರೆ, ಇದೇ ಬಿಜೆಪಿಯವರು ಬ್ರಿಟೀಷರಿಗೆ ಬೆಂಬಲವಾಗಿ ನಿಂತಿದ್ದರು. ಸ್ವಾತಂತ್ರ್ಯದ ನಂತರ ದೇಶದ ಆಹಾರದ ಕೊರತೆ ನೀಗಿಸಲು ಜವಾಹರಲಾಲ ನೆಹರು ಮತ್ತು ಲಾಲ ಬಹಾದ್ದೂರ ಶಾಸ್ತ್ರಿ ಅವರು ಹಸಿರು ಹಾಗೂ ಕ್ಷೀರ ಕ್ರಾಂತಿ ಮಾಡಿದರು. ನಾನಾ ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಠಿ ಮತ್ತು ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಿದರು. ಇಂದಿರಾ ಮತ್ತು ರಾಜೀವ ಗಾಂಧಿ ಸೂರು, ಸಂಪರ್ಕ ಕ್ರಾಂತಿ ಮಾಡಿದರು. ಆದರೆ, ಈಗ ನರೇಂದ್ರ ಮೋದಿ ಮತ್ತು ಅಮೀತ ಶಾ ಅವುಗಳನ್ನು ಖಾಸಗೀಕರಣ ಮಾಡುವ ಮೂಲಕ ಮಾರಾಟ ಮಾಡುತ್ತಿದ್ದಾರೆ. ಅಂಬಾನಿ ಮತ್ತು ಅದಾನಿ ಅವುಗಳನ್ನು ಖರೀದಿಸುತ್ತಿದ್ದಾರೆ. ಈ ನಾಲ್ಕು ಜನರ ಸಲುವಾಗಿ ದೇಶ ನಡೆಸುವಂತಾಗಿದೆ ಎಂಬ ಚರ್ಚೆ ವ್ಯಾಪಕವಾಗಿದೆ ಎಂದು ಹೇಳಿದರು.
ದರಿದೇವರ ಆಶೀರ್ವಾದದಿಂದ 684 ಮೀಟರ್ ಎತ್ತರದಲ್ಲಿರುವ ಕನಮಡಿ ಗ್ರಾಮಕ್ಕೆ ನೀರು ಕೊಟ್ಟಿದ್ದೇನೆ. ಬಾಕಿ ಇರುವ ಕಾಮಗಾರಿಗಳ ಮೂಲಕ ನೀರು ಧರಿದೇವರ ಪಾದಸ್ಪರ್ಷಿಸಿ ಮುಂದೆ ಸಾಗುವಂತೆ ಮಾಡುತ್ತೇನೆ. ನೀವು ಅನುಭವಿಸಿದ ಸಂಕಷ್ಟ ನಿಮ್ಮ ಮುಂದಿನ ಪೀಳಿಗೆ ಎದುರಿಸಬಾರದು ಎಂಬ ಮುಂದಾಲೋಚನೆಯಿಂದ ಶಾಶ್ವತ ಯೋಜನೆ ರೂಪಿಸಲಿದ್ದೇನೆ. ಜಲಕ್ರಾಂತಿಯ ನಂತರ ಜಿಲ್ಲೆಯಲ್ಲಿ ಈಗ ಉದ್ಯೋಗ ಕ್ರಾಂತಿ, ಕ್ಷೀರಕ್ರಾಂತಿ ಮಾಡುವ ಗುರಿ ಇದೆ. ಕಾನ್ವೆಂಟ್ ಮಾದರಿಯಲ್ಲಿ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡುತ್ತೇವೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರಿಗೆ ಮತ ಹಾಕಿ ನನ್ನ ಕೈ ಬಲಪಡಿಸಬೇಕು ಎಂದು ಅವರು ಮನವಿ ಮಾಡಿದರು.
ವಿಧಾನ ಪರಿಷತ್ ಶಾಸಕ ಪ್ರಕಾಶ ರಾಠೋಡ ಮಾತನಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಮಾತನಾಡಿ ಮತ ಯಾಚಿಸಿದರು.
ಜಿ. ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ ಮಾತನಾಡಿ, ಆಲಗೂರ ಅವರನ್ನು ಗೆಲ್ಲಿಸಿ ಕೇಂದ್ರದಲ್ಲಿ ವಿಜಯಪುರ ಜಿಲ್ಲೆಯ ಧ್ವನಿ ಪ್ರತಿಧ್ವನಿಸಲು ಕೈಜೋಡಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ಯಾಕೂಬ್ ಜತ್ತಿ, ವಿದ್ಯಾರಾಣಿ ತುಂಗಳ, ಗೀತಾಂಜಲಿ ಪಾಟೀಲ, ಸಿದ್ದನಗೌಡ ರುದ್ರಗೌಡರ, ಎ. ಎಂ. ಬಿರಾದಾರ, ಗುರು ಮಾಳಿ, ಶಾಂತಾ ಬಿರಾದಾರ, ಮಾನಿಂಗ ಜವನರ ಮುಂತಾದವರು ಉಪಸ್ಥಿತರಿದ್ದರು.

