ಪುಣೆ ನಮ್ಮವರು ಸಂಘದಿಂದ ಮಹಿಳಾ ದಿನಾಚರಣೆ | ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಪುಣೆ ಘಟಕದ ವಾರ್ಷಿಕೋತ್ಸವ
ಪುಣೆ: ನಗರದಲ್ಲಿ ’ನಮ್ಮವರು ಸಂಘ’ದಿಂದ ಮಹಿಳಾ ದಿನಾಚರಣೆ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಪುಣೆ ಘಟಕ ದ ಎರಡನೆಯ ವಾರ್ಷಿಕೋತ್ಸವವನ್ನು ಏ.೧೩ರಂದು ತಾರಂಗಣ ಸಭಾಗೃಹದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ಹಾಗೂ ಮುಖ್ಯ ಅತಿಥಿಗಳು ದೀಪ ಬೆಳಗಿಸಿ, ನಾಡಗೀತೆ ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಮತಿ ವಿರಜಾ ಭಟ್ ಮತ್ತು ಚಂದ್ರಕಾಂತ ಹಾರಕುಡೆ ಅವರು ನಮ್ಮವರು ಸಂಘದ ಎಲ್ಲಾ ಕೆಲಸ ಕಾರ್ಯಗಳನ್ನು ಹೊಗಳಿ ಹಾರೈಸಿದರು. ಬಸವರಾಜ ಹಿರೇಮಠ ನಮ್ಮವರು ಸಂಘ ಮತ್ತು ಮಕ್ಕಳ ಸಾಹಿತ್ಯ ಸಮ್ಮೇಳನದ ಬಗ್ಗೆ ವಿವರಣೆ ನೀಡಿ ಮುಂಬರುವ ಹಲವಾರು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ನಮ್ಮವರು ಸಂಘದ ನೂತನ ಕಾರ್ಯಕಾರಿ ಸಮಿತಿಯಲ್ಲಿ ಭಾರ್ಗವ, ವೇಣು ಅಚ್ಯುತ್, ಶಿವಣ್ಣ ಪಟ್ಟಣ, ಸತೀಶ್ ಮೆಣಸಿಗಿ, ವೆಂಕಟೇಶ ಕುಲ್ಕರ್ಣಿ, ಶ್ರೀ ಅಂಕಿತ, ಹಾಗೂ ಸಂಗಮೇಶ ಗುಲ ಅ ವರನ್ನು ಸನ್ಮಾನಿಸಿ ತಂಡಕ್ಕೆ ಬರಮಾಡಿಕೊಂಡರು ಮತ್ತು ಮಕ್ಕಳ ಸಾಹಿತ್ಯ ಪರಿಷತ್ತಿನ ಹೊಸ ಪದಾಧಿಕಾರಿಗಳಾಗಿ ಶ್ರೀಮತಿ ಝಾನ್ಸಿ ರಾವ್, ಶ್ರೀಮತಿ ಕವಿತಾ ಮಹೇಶ, ಶ್ರೀಮತಿ ಜಯವಿಜಯಾ ರಾವ ಮತ್ತು ಕುಮಾರಿ ಸಂಸ್ಕೃತಿ ಚೌಗಲೆರವರನ್ನು ನೇಮಕ ಮಾಡಲಾಯಿತು. ಶ್ರೀಮತಿ ಹೇಮಾ ಮಳಗಿ ಅವರು ನಮ್ಮವರು ಕನ್ನಡ ಕಲಿ ಬೇಸಿಗೆ ಕ್ಲಾಸ್ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸೇರಿದ್ದ ಗಣ್ಯರು ನಮ್ಮವರು ಸಂಘ ಉದ್ದೇಶಿಸಿ ಮಾತನಾಡಿ ತಮ್ಮ ಅನಿಸಿಕೆಗಳು ಮತ್ತು ಸಲಹೆಗಳನ್ನು ಹಂಚಿಕೊಂಡರು.
ವಿಶೇಷವಾಗಿ, ಮಕ್ಕಳ ಸಾಹಿತ್ಯ ಸಮ್ಮೇಳನದ ಆಚರಣೆಯಲ್ಲಿ ಮಕ್ಕಳಲ್ಲಿ ಕನ್ನಡ ಭಾಷೆ, ಜಾನಪದ ಸಾಹಿತ್ಯ ಮತ್ತು ಕಲೆಗಳ ಬಗ್ಗೆ ಅರಿವು ಮೂಡಿಸಲು ಮಕ್ಕಳಿಗಾಗಿ ಭಾಷಣ, ಕವನ ಹಾಗೂ ಜಾನಪದ ಹಾಡುಗಳಿಗೆ ನೃತ್ಯಗಳು ಮತ್ತು ಜಾನಪದ ಹಾಡುಗಳನ್ನು ಹಾಡುವ ಮೂಲಕ ಮಕ್ಕಳು ಕನ್ನಡ ಭಾಷೆಗೆ ಹೆಚ್ಚಿನ ಮೆರಗು. ತಂದರು. ಮಹಿಳೆಯರಿಗಾಗಿ ಭಾರತದ ಬೇರೆ ಬೇರೆ ರಾಜ್ಯಗಳ ವೇಷ ಭೂಷಣ ಸ್ಪರ್ದೆ ಹಾಗೂ ದಂಪತಿಗಳಿಗಾಗಿ ಗಂಡ-ಗುಂಡಿ ವಿನೂತನ ಹೆಸರನ್ನು ಸ್ಪರ್ಧೆಗೆ ಸೂಚಿಸಲಾಗಿತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ದಂಪತಿಗಳು ಆನಂದ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಆಕರ್ಷಣೆಯಾದ ಸ್ಟ್ಯಾಂಡ್ಅಪ್ ಕಾಮಿಡಿಯನ್ ಸುಬ್ರಹ್ಮಣ್ಯ ಹೆಗಡೆರವರು ತಮ್ಮ ಹಾಸ್ಯ ಮಾತುಗಳಿಂದ ಎಲ್ಲರನ್ನೂ ಮನಃ ಪೂರ್ತಿ ನಗುವಂತೆ ಮಾಡಿದರು.
ಇದೆ ಸಂದರ್ಭದಲ್ಲಿ ಹೊಸ ವರ್ಷ ಯುಗಾದಿ ಹಬ್ಬ ಆಚರಿಸಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದಿತು. ನಮ್ಮವರು ಸಂಘದ ಚಿಕ್ಕ ಮಕ್ಕಳು ಹಾಗೂ ಹಿರಿಯರು ವಿವಿಧ ಬಗೆಯ ಹಾಡು, ನೃತ್ಯಗಳಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಇವೆಲ್ಲವನ್ನೂ ನೋಡಿ ನೆರೆದ ಜನರೆಲ್ಲ ಸಂಭ್ರಮಪಟ್ಟರು.
ಬಸವರಾಜ ಪಟ್ಟಣಶೆಟ್ಟಿ ಹಾಗೂ ಅಮಿತ ಇನಾಮದಾರ್ ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ವಹಿಸಿದ್ದರು. ನಮ್ಮವರು ಸಂಘದ ಅನೇಕ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರ್ವಾಹಣೆ ಬಿಂದುಮಾಧವ ದೇಸಾಯಿ, ಪರಾಗ ಮುಳಗುಂದ, ಅಂಕಿತ, ಶ್ರೀಮತಿ ಶಾಂತಲಾ ಬಿರಾದರ, ಹಾಗೂ ಶ್ರೀಮತಿ ವಿದ್ಯಾ ಮದಲಿಯವರು ನಡೆಸಿಕೊಟ್ಟರು.
ಶ್ರೀಮತಿ ಜಾನ್ಸಿ ರಾವ್ ಅವರು ವಂದನಾರ್ಪಣೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ತೆರೆಬಿದ್ದಿತು.

