ಪುರಸಭೆ ಅಧಿಕಾರಿಗಳ ಧಿವ್ಯನಿರ್ಲಕ್ಷ್ಯ | ವರ್ಷಗಳಾದರೂ ದುರಸ್ತಿಯಾಗದ ಚರಂಡಿ
ಚೇತನ ಶಿವಶಿಂಪಿ
ಮುದ್ದೇಬಿಹಾಳ: ಸ್ವಚ್ಛ ಭಾರತ ಅಭಿಯಾನದ ಮೂಲಕ ಸರ್ಕಾರ ದೇಶವನ್ನು ಸ್ವಚ್ಛಗೊಳಿಸುವ ಕನಸು ಕಾಣುತ್ತಿದೆ. ಆದರೆ ಕೆಲ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಆ ಕನಸು ಕನಸಾಗಿಯೇ ಉಳಿದಿದೆ ಹೊರತು ನನಸಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ ಎನ್ನುವ ಸಾರ್ವಜನಿಕರ ಆರೋಪಕ್ಕೆ ಸಾಕ್ಷಿಯಾದ ಉದಾಹರಣೆಯೊಂದು ಇಲ್ಲಿದೆ.
ಚರಂಡಿ ತುಂಬಿ ರಸ್ತೆಯಲ್ಲೆಲ್ಲಾ ಕೊಳಕು ನೀರು, ಆ ನೀರನ್ನೇ ತುಳಿದುಕೊಂಡು ಓಡಾಡುವ ಸಾರ್ವಜನಿಕರು, ವಾಯು ವಿಹಾರಿಗಳು, ವಿದ್ಯಾರ್ಥಿಗಳು. ಚರಂಡಿ ಒಡೆದು ವರ್ಷಗಳೇ ಕಳೆದರೂ ಬಂದು ನೋಡದ ಅಧಿಕಾರಿಗಳು, ಜನಪ್ರತಿನಿಧಿಗಳು. ದಿನ ನಿತ್ಯ ಸಾವಿರಾರು ಜನ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಲೇ ಓಡಾಟ.
ಈ ಸಮಸ್ಯೆ ಕಂಡು ಬಂದಿದ್ದು ಪಟ್ಟಣದ ವಿಬಿಸಿ ಹೈಸ್ಕೂಲ್ ನ ಮುಖ್ಯ ದ್ವಾರದ ಎದುರು. ಈ ಶಾಲಾ ಆವರಣದ ಮೂಲಕ ದಿನನಿತ್ಯ ವಾಯುವಿಹಾರಿಗಳು, ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನ ಓಡಾಡುತ್ತಾರೆ. ಆದರೆ ಈ ಶಾಲಾ ಆವರಣದ ಮುಖ್ಯ ದ್ವಾರದ ಬಳಿ ಇರೋ ಚರಂಡಿ ಮೇಲಿಂದ ಮೇಲೆ ತುಂಬಿ ರಸ್ತೆಯಲ್ಲೆಲ್ಲಾ ಕೊಳಕು ನೀರು ಹರಿದು ಸಾಂಕ್ರಾಮಿಕ ರೋಗಗಳಿಗೆ ಆವ್ಹಾನ ನೀಡುತ್ತಿದೆ. ಮಾತ್ರವಲ್ಲದೇ ಕಲ್ಲಲೆಯಲ್ಲಿ ಕಾಣದೇ ಈ ಚರಂಡಿಯಲ್ಲಿ ಬಿದ್ದರೆ ಕಾಲು ಮುರಿಯೋದು ಗ್ಯಾರಂಟಿ.
ಈ ಚರಂಡಿ ಸ್ವಚ್ಛಗೊಳಿಸಿ ಅದೆಷ್ಟೋ ದಿನಗಳೇ ಕಳೆದಿವೆ, ನಾವು ಮೂಗು ಮುಚ್ಚಿಕೊಂಡೇ ವ್ಯವಹಾರ ಮಾಡಬೇಕು ಅಂತಾರೆ ಸಮೀಪದ ಅಂಗಡಿಕಾರರು. ಅಲ್ಲದೇ ವಿದ್ಯಾನಗರಕ್ಕೆ ಕಲ್ಪಿಸುವ ಮುಖ್ಯ ರಸ್ತೆ ಶುರುವಾಗೋದೂ ಇಲ್ಲಿಂದಲೇ. ಚರಂಡಿ ತುಂಬಿದಾಗ ಈ ರಸ್ತೆಯಲ್ಲಿ ತಿರುಗಾಡೋ ಎಲ್ಲರೂ ಒಮ್ಮೆ ಪುರಸಭೆ ಅಧಿಕಾರಿಗಳಿಗೆ ಶಾಪ ಹಾಕಿಯೇ ಮುಂದೆ ಹೋಗೋದು. ಈ ಸಮಸ್ಯೆಗಳು ತಲೆದೋರದಂತೆ ನಿಗಾ ವಹಿಸಬೇಕಾದ ಅಧಿಕಾರಿಗಳು ಮೌನಕ್ಕೆ ಶರಣಾಗಿರೋದು ಸಾರ್ವಜನಿಕರ ಆರೋಪಕ್ಕೆ ಪುಷ್ಠಿ ನೀಡಿದಂತಾಗಿದೆ. ಮೇಲಿಂದ ಮೇಲೆ ಚಾಚೂ ತಪ್ಪದೇ ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಕಠಿಣ ನಿಯಮಗಳನ್ನು ರೂಪಿಸುವುದು ಅವಶ್ಯವಿದೆ.

